ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ಲೋಕಸಭಾ ಚುನಾವಣೆ ನಿಮಿತ್ತ ಶಾಂತ, ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಯುವ ಸಂಬಂಧವಾಗಿ ಮೇ 5ರಿಂದ 8 ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ನಲಿನ್ ಅತುಲ್ ಆದೇಶಿಸಿದ್ದಾರೆ.ಜಿಲ್ಲೆಯಲ್ಲಿ ಮೇ 7ರಂದು ಜರುಗಲಿರುವ ಲೋಕಸಭಾ ಚುನಾವಣೆ ಮತದಾನದ ಹಿನ್ನೆಲೆ ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ 126ನೇ ಪ್ರಕರಣದ ಮೇರೆಗೆ ಮತದಾನ ಅಂತ್ಯಗೊಳ್ಳುವ 48 ಗಂಟೆ ಪೂರ್ವದಲ್ಲಿ ರಾಜಕೀಯ ಪಕ್ಷಗಳ, ಅಭ್ಯರ್ಥಿಗಳ ಬಹಿರಂಗ ಪ್ರಚಾರ, ಮೆರವಣಿಗೆ ಅಂತ್ಯಗೊಳ್ಳುತ್ತವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಕೊಪ್ಪಳ ಜಿಲ್ಲೆಯಾದ್ಯಂತ ಮೇ 5ರ ಸಾಯಂಕಾಲ 6 ರಿಂದ ಮೇ 8 ರ ಬೆಳಿಗ್ಗೆ 6 ಗಂಟೆಯವರೆಗೆ ವಿವಿಧ ಷರತ್ತುಗಳಿಗೊಳಪಟ್ಟು ಜಿಲ್ಲೆಯಾದ್ಯಂತ ದಂಡ ಪ್ರಕ್ರಿಯಾ ಸಂಹಿತೆ, 1973ರ ಕಲಂ 144 ರಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.ನಿಷೇಧಾಜ್ಞೆ ಜಾರಿ ಅವಧಿಯಲ್ಲಿ ಜಿಲ್ಲೆಯ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದನ್ನು ನಿಷೇಧಿಸಿದೆ. ಚುನಾವಣಾ ಅಭ್ಯರ್ಥಿ, ಬೆಂಬಲಿಗರು ಸೇರಿ 5 ಜನರಗಿಂತ ಹೆಚ್ಚಿನ ಸಂಖ್ಯೆಯ ಜನರು ಸೇರಬಾರದು. ಶಸ್ತ್ರ, ಬಡಿಗೆ, ಬರ್ಚಿ, ಖಡ್ಗ, ಗದೆ, ಬಂದೂಕು, ಚೂರಿ, ಲಾಠಿ, ಡೊಗ್ಗ, ಚಾಕು ಅಥವಾ ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರ ತೆಗೆದುಕೊಂಡು ಹೋಗುವುದನ್ನು ಮತ್ತು ಅವುಗಳೊಂದಿಗೆ ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ.
ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯ ಒಳಗೆ ಚುನಾವಣೆ ಪ್ರಚಾರ ನಿಷೇಧಿಸಿದೆ. ಈ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿ, ಬುಕ್‌ಸ್ಟಾಲ್, ಸೈಬರ್ ಕೆಫೆಗಳನ್ನು ನಿರ್ಬಂಧಿಸಿದೆ. ಕಲ್ಲುಗಳನ್ನು, ಕಾರಪದಾರ್ಥ ಇಲ್ಲವೇ ಸ್ಫೋಟಕ ವಸ್ತುಗಳು ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಮತಗಟ್ಟೆ ಕೇಂದ್ರಗಳ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.ಯಾವುದೇ ವ್ಯಕ್ತಿ ಬಹಿರಂಗವಾಗಿ ಮೇಲೆ ವಿವರಿಸಿದ ಮಾರಕಾಸ್ತ್ರ, ಸ್ಫೋಟಕ ವಸ್ತು, ವಿನಾಶಕಾರಿ ವಸ್ತುಗಳು ಹಾಗೂ ಇತರ ಆಕ್ಷೇಪಾರ್ಹ ವಸ್ತುಗಳನ್ನು ಹೊಂದಿದ್ದು, ಕಂಡು ಬಂದರೆ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ಇರುತ್ತದೆ. ಅಂಥಹ ಮಾರಕಾಸ್ತ್ರಗಳನ್ನು ಮುಟ್ಟುಗೋಲು ಮಾಡಿಕೊಳ್ಳಲಾಗುವುದು. ಅಲ್ಲದೇ ಸಂಬಂಧಿಸಿದ ವ್ಯಕ್ತಿಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಮನುಷ್ಯ ರೂಪದ ಅಥವಾ ಅವುಗಳ ಆಕೃತಿ ಅಥವಾ ಪ್ರತಿಮೆಗಳ ಪ್ರದರ್ಶನ ಅಥವಾ ದಹನ ಮಾಡುವುದನ್ನು ಪ್ರತಿಬಂಧಿಸಲಾಗಿದೆ.
ಎಲ್ಲ ಮತಗಟ್ಟೆ ಕೇಂದ್ರಗಳ ಸುತ್ತಲಿನ 100 ಮೀಟರ್ ವ್ಯಾಪ್ತಿಯ ಸ್ಥಳ ನಿರ್ಬಂಧಿತ ಪ್ರದೇಶವಾಗಿದ್ದು, ಈ ಪ್ರದೇಶದಲ್ಲಿ ಖಾಸಗಿ ವಾಹನಗಳ ನಿಲುಗಡೆ, ಧ್ವನಿವರ್ಧಕ ಬಳಕೆ ಮುಂತಾದವುಗಳನ್ನು ನಿಷೇಧಿಸಿದೆ ಹಾಗೂ ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯಲ್ಲಿ ಪಕ್ಷದ ಪ್ರಚಾರ, ಮತದ ಓಲೈಕೆ ಮುಂತಾದವುಗಳನ್ನು ಮಾಡುವಂತಿಲ್ಲ ಮತ್ತು ಈ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಪದ ಹಾಡುವುದು, ವಾದ್ಯ ಬಾರಿಸುವುದು, ವ್ಯಾಖ್ಯಾನ ಕೊಡುವುದು ಸನ್ನೆ ಅಥವಾ ಪ್ರದರ್ಶನವನ್ನು ಹಾಗೂ ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಆಕ್ರಮಿಸಬಹುದಾದ ಕೃತ್ಯಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ.ಸಾರ್ವಜನಿಕವಾಗಿ ಯಾವುದೇ ವ್ಯಕ್ತಿ ಪ್ರಚೋದನಾತ್ಮಕ, ಉದ್ರೇಕಕಾರಿ ಹಾಡುಗಳು, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು, ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವಾಗಲಿ ಮತ್ತು ಸಾರ್ವಜನಿಕ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ. ಮದುವೆ ಮತ್ತು ಇತರೆ ಧಾರ್ಮಿಕ ಮೆರವಣಿಗೆಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ನಿಯಮ ಪಾಲಿಸಬೇಕು.ನಿಷೇಧಾಜ್ಞೆ ಜಾರಿ ಸಮಯದಲ್ಲಿ ರಾಜಕೀಯ ಪಕ್ಷಗಳು ಅಥವಾ ಅಭ್ಯರ್ಥಿಗಳು ಬಾಗಿಲಿನಿಂದ ಬಾಗಿಲಿಗೆ ಹೋಗಿ ಮತಯಾಚಿಸುವ ಸಲುವಾಗಿ ಮನೆಯಿಂದ ಮನೆಗೆ ಹೋಗುವುದು ನಿರ್ಬಂಧಿಸಿರುವುದಿಲ್ಲ. ಆದರೆ 5 ಜನರಿಗಿಂತ ಹೆಚ್ಚಿನ ಗುಂಪು ಕೂಡಿಕೊಂಡು ಮನೆಯಿಂದ ಮನೆಗೆ ಹೋಗಿ ಮತಯಾಚಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.