ಸಾರಾಂಶ
- ಒಳಗೊಳಗೆ ಬಿಜೆಪಿಗೆ ಹಿಗ್ಗು, ಕಾಂಗ್ರೆಸ್ಸಿಗೆ ಮಾತ್ರ ಬಿಸಿತುಪ್ಪ । ಸಿಎಂ, ಕಾಗಿನೆಲೆ ಶ್ರೀ, ರೇವಣ್ಣ ಸಂಧಾನ ಪ್ರಯತ್ನವೂ ವಿಫಲ - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಬಂಡಾಯ ಅಭ್ಯರ್ಥಿಯಾಗಿ ಕಣದಲ್ಲಿ ಉಳಿದಿರುವುದು ಸ್ವಪಕ್ಷದ ಚಿಂತೆಗೆ ಕಾರಣವಾಗಿದೆ.ಕಾಂಗ್ರೆಸ್ ಟಿಕೆಟ್ ತಪ್ಪಿದ ನಂತರ ಬೆಂಬಲಿಗರು, ಹಿತೈಷಿಗಳ ಸಲಹೆ ಹಾಗೂ ವಿವಿಧ ಗ್ರಾಮಕ್ಕೆ ಭೇಟಿ ನೀಡಿದ ನಂತರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಜಿ.ಬಿ.ವಿನಯಕುಮಾರ ಘೋಷಣೆ ಮಾಡಿದ್ದರು.
ಆ ನಂತರ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಮಾಜಿ ಶಾಸಕ ಎಸ್.ರಾಮಪ್ಪ ಸಮ್ಮುಖ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವತಃ ವಿನಯ್‌ಗೆ ಇನ್ನೂ ವಯಸ್ಸು, ಅವಕಾಶ ಇದೆ. ದುಡುಕಬೇಡ. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಗೆಲುವಿಗೆ ಶ್ರಮಿಸುವಂತೆ ಮನವೊಲಿಸಲು ಮಾಡಿದ್ದ ಪ್ರಯತ್ನ ವ್ಯರ್ಥವಾಗಿತ್ತು.ನಾಮಪತ್ರ ಹಿಂಪಡೆಯುವಂತೆ ಕುರುಬ ಸಮಾಜದ ಹಿರಿಯ ಮುಖಂಡ, ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದ ಕಾಂಗ್ರೆಸ್ ಮುಖಂಡರ ನಿಯೋಗವು ಜಿ.ಬಿ.ವಿನಯಕುಮಾರ್‌ರ ದಾವಣಗೆರೆ ನಿವಾಸಕ್ಕೆ ಭೇಟಿ ನೀಡಿ, ಮನವೊಲಿಕೆಗೆ ಮಾಡಿದ ಪ್ರಯತ್ನ ವಿಫಲವಾಗಿತ್ತು. ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದ್ದ ಸೋಮವಾರ ಸಹ ಸಿಎಂ ಆಪ್ತ ವಲಯದಿಂದ ಕೆಲವರು ದಾವಣಗೆರೆಗೆ ಬಂದು ಮನವೊಲಿಸಲು ಮಾಡಿದ್ದ ಪ್ರಯತ್ನ ವಿಫಲವಾಯಿತು. ಕುರುಬ ಸಮಾಜದವರಾದ ಜಿ.ಬಿ. ವಿನಯಕುಮಾರ ಆಕಸ್ಮಾತ್ ಓಟು ಪಡೆದರೆ ಅದು ಕಾಂಗ್ರೆಸ್ಸಿನ ಬುಟ್ಟಿಯ ಮತಗಳೇ ಎಂಬ ಕಾರಣಕ್ಕೆ ಕಾಂಗ್ರೆಸ್ ಸಹ ತೀವ್ರ ಒತ್ತಡದಲ್ಲಿದೆ.
ಅಹಿಂದ ವರ್ಗದ ಮತಗಳ ಮೇಲೆ ಒಂದಿಷ್ಟು ಹೆಚ್ಚಾಗಿಯೇ ಕಾಂಗ್ರೆಸ್ ಅವಲಂಬಿತವಾಗಿದೆ. ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಸಹ ಹಿಂದುಳಿದ ವರ್ಗದ ಕುರುಬ ಸಮಾಜಕ್ಕೆ ಸೇರಿದವರು. ಹಾಗಾಗಿ, ಕಡೇ ಕ್ಷಣದವರೆಗೂ ವಿನಯಕುಮಾರ್ ಮನವೊಲಿಗೆ ಮಾಡಿದ್ದೆಲ್ಲಾ ವ್ಯರ್ಥ ಕಸರತ್ತಿನಂತಾಗಿದೆ.ಸದ್ಯಕ್ಕೆ ವಿನಯಕುಮಾರ ಬಿಜೆಪಿ-ಕಾಂಗ್ರೆಸ್ ಅಭ್ಯರ್ಥಿಗಳನ್ನು ಸಮಾನ ವೈರಿಗಳಾಗಿ ಪರಿಗಣಿಸಿದಂತಿದೆ. ಎರಡು ಕುಟುಂಬಗಳ ಹಿಡಿತದಿಂದ ದಾವಣಗೆರೆಯನ್ನು ಮುಕ್ತ ಮಾಡಬೇಕು, ನಾನು ಯಾರನ್ನೋ ಸೋಲಿಸಲು ಸ್ಪರ್ಧಿಸಿಲ್ಲ, ನಾನು ಗೆಲ್ಲಬೇಕು, ಕ್ಷೇತ್ರದಲ್ಲಿ ಬದಲಾವಣೆ ತರಬೇಕೆಂಬ ಕಾರಣಕ್ಕೆ ಅಂತಿಮ ಕಣದಲ್ಲಿದ್ದೇನೆ ಎಂದು ಪದೇಪದೇ ಹೇಳಿದ್ದು ಗಮನೀಯ. ಎರಡು ಕುಟುಂಬಗಳ ಮಧ್ಯೆ ಇದ್ದ ನೇರಾನೇರ ಹಣಾಹಣಿಗೆ ತ್ರಿಕೋನ ಸ್ಪರ್ಧೆ ಏರ್ಪಡುವಂತಹ ಸನ್ನಿವೇಶ ಸೃಷ್ಟಿಗೆ ವಿನಯ ಕಾರಣವಾಗಿದ್ದಾರೆ.
ಸದ್ಯಕ್ಕೆ ವಿನಯ್ ಕಣದಲ್ಲಿರುವುದಕ್ಕೆ ಬಿಜೆಪಿ ಒಳಗೊಳಗೆ ಸಂಭ್ರಮಿಸಿದರೆ, ಕಾಂಗ್ರೆಸ್ಸಿಗೆ ಪಾಲಿಗೆ ಮಾತ್ರ ಇದು ಬಿಸಿತುಪ್ಪವೇ ಆಗಿದೆ.- - - -22ಕೆಡಿವಿಜಿ10, 11:
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತ ಜಿ.ಬಿ.ವಿನಯಕುಮಾರ ಇದೀಗ ಪಕ್ಷೇತರ ಅಭ್ಯರ್ಥಿಯಾಗಿ ಅಂತಿಮ ಕಣದಲ್ಲಿ ಉಳಿದಿದ್ದಾರೆ.