ಸಾರಾಂಶ
ರಾಣಿಬೆನ್ನೂರು: ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ ಸ್ವಾತಂತ್ರ್ಯದ ನಂತರ ಶೈಕ್ಷಣಿಕ ಕ್ಷೇತ್ರ ಸೇರಿದಂತೆ ಹಲವಾರು ಸಮಾಜಮುಖಿ ಕ್ಷೇತ್ರಗಳಲ್ಲಿ ಮಾಜಿ ಸಚಿವ ದಿ.ಕೆ.ಎಫ್. ಪಾಟೀಲ ನೀಡಿದ ಕೊಡುಗೆ ಸ್ಮರಣೀಯವಾಗಿದೆ ಎಂದು ಕೆಎಲ್‌ಇ ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ವಿ.ಪಿ. ಲಿಂಗನಗೌಡರ ಹೇಳಿದರು. ನಗರದ ಕೆಎಲ್‌ಇ ಶಿಕ್ಷಣ ಸಂಸ್ಥೆಯ ರಾಜರಾಜೇಶ್ವರಿ ಮಹಾವಿದ್ಯಾಲಯದ ಆವರಣದಲ್ಲಿ ಕೆ.ಎಫ್. ಪಾಟೀಲ ಚಾರಿಟೇಬಲ ಟ್ರಸ್ಟ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ದಿ. ಕೆ.ಎಫ್. ಪಾಟೀಲ ಅವರ 119ನೇ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ಬಿ.ಎಸ್. ಪಟ್ಟಣಶಟ್ಟಿ ಮಾತನಾಡಿ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಹಾಗೂ ಗೌರವಗಳನ್ನು ಪಡೆದುಕೊಳ್ಳಲು ಶಿಕ್ಷಣದ ಅಗತ್ಯವಿದೆ. ಮಹಿಳೆಯರ ಸಬಲೀಕರಣಕ್ಕೆ ಕೆ.ಎಫ್. ಪಾಟೀಲ ಕಟ್ಟಿದ ಈ ಸಂಸ್ಥೆ ಅಪಾರವಾದ ಕೊಡುಗೆಯುನ್ನು ನೀಡಿದೆ ಎಂದು ಸ್ಮರಿಸಿದರು. ಶಿಕ್ಷಣ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯ ವೀರಣ್ಣ ಅಂಗಡಿ ಮಾತನಾಡಿ, ಮಹಿಳೆಯರಿಗಾಗಿಯೆ ಕಟ್ಟಿದ ಈ ಸಂಸ್ಥೆಯಲ್ಲಿ ಅನೇಕ ವಿದ್ಯಾರ್ಥಿನಿಯರು ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದರು. ವಿಶ್ವವಿದ್ಯಾಲಯದ ಹಂತದಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿಯರಿಗೆ ಮತ್ತು ನಿಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಒಟ್ಟು ರು. 1,14,800 ವಿದ್ಯಾರ್ಥಿ ವೇತನದ ಚೆಕ್‌ನ್ನು ಕೆ.ಎಫ್. ಪಾಟೀಲ ಚಾರಿಟೇಬಲ್ ಟ್ರಸ್ಟ್ ಜಂಟಿ ಕಾರ್ಯದರ್ಶಿ ಆರ್.ಜಿ. ಹುಲ್ಮನಿ ವಿತರಿಸಿದರು. ಎಲ್ಲ ವಿಭಾಗಗಳ ಮುಖ್ಯಸ್ಥರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.