ತಾಲೂಕಿನ ನಾಗರಾಳ ಗ್ರಾಮದ ಬಳಿ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಲಾಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಸಂಪೂರ್ಣ ಅನಾಥವಾಗಿದೆ.
ಕನ್ನಡಪ್ರಭ ವಾರ್ತೆ ಚಿಂಚೋಳಿ
ತಾಲೂಕಿನ ನಾಗರಾಳ ಗ್ರಾಮದ ಬಳಿ ಕೋಟ್ಯಂತರ ರುಪಾಯಿಗಳಲ್ಲಿ ನಿರ್ಮಿಸಲಾಗಿರುವ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿ ಸಂಪೂರ್ಣ ಅನಾಥವಾಗಿದೆ.ಚಿಂಚೋಳಿ ತಾಲೂಕಿನ ರೈತರ ಜೀವನಾಡಿ ಆಗಿರುವ ಕೆಳದಂಡೆ ಯೋಜನಾ ಪ್ರದೇಶದಲ್ಲಿ ಸೂಕ್ತ ವಿದ್ಯುತ್ ಸಂಪರ್ಕ ಹಾಗೂ ಸುರಕ್ಷತಾ ತಡೆಗೋಡೆಗಳಿಲ್ಲದೆ ಇಡೀ ಆವರಣ ಕಗ್ಗತ್ತಲಲ್ಲಿ ಮುಳುಗಿದ್ದು, ಇನ್ನೊಂದೆಡೆ ಯೋಜನೆಗಾಗಿ ಜಮೀನು ಕೊಟ್ಟು ನಿರಾಶ್ರಿತರಾದವರಿಗೆ ಸೂಕ್ತ ರಸ್ತೆ ಸೌಲಭ್ಯವೂ ಇಲ್ಲದೆ ಪರದಾಡುವಂತಾಗಿದೆ. ರೈತರ ಜಮೀನುಗಳಿಗೆ ನೀರು ಒದಗಿಸುವ ಪ್ರಮುಖ ಉದ್ದೇಶದಿಂದ ಸರ್ಕಾರ ಕೋಟ್ಯಂತರ ಹಣ ಖರ್ಚು ಮಾಡಿ ಯೋಜನೆ ನಿರ್ಮಿಸಿದೆ. ಆದರೆ ಯೋಜನೆಯ ಮುಖ್ಯಭಾಗ ಹಾಗೂ ಗೇಟ್ ಪ್ರದೇಶದಲ್ಲಿ ರಾತ್ರಿಯಾದರೆ ಕತ್ತಲು ಆವರಿಸುತ್ತದೆ.
*ವಿದ್ಯುತ್ ಸಂಪರ್ಕದ ಕೊರತೆ: ಸೂಕ್ತ ಖಾಯಂ ವಿದ್ಯುತ್ ಸಂಪರ್ಕವಿಲ್ಲದೆ ಈ ಬೃಹತ್ ನೀರಾವರಿ ಯೋಜನಾ ಪ್ರದೇಶ ರಾತ್ರಿ ವೇಳೆ ಸಂಪೂರ್ಣ ಅನಾಥವಾಗಿದೆ. ಕನಿಷ್ಠಪಕ್ಷ ಬೀದಿ ದೀಪ ಅಥವಾ ಪರ್ಯಾಯವಾಗಿ ಸೋಲಾರ್ ದೀಪಗಳನ್ನು ಸಹ ಇಲ್ಲಿ ಅಳವಡಿಸದಿರುವುದು ಜಲಾಶಯದ ಸುರಕ್ಷತೆಗೂ ಕಂಠಕವಾಗಿದೆ. ಮಳೆಗಾಲದಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾದಾಗ ಕ್ರಸ್ಟ್ ಗೇಟುಗಳನ್ನು ಮೇಲೆ ಎತ್ತಲು ವಿದ್ಯುತ್ ಇರುವುದಿಲ್ಲ. ಇದರಿಂದಾಗಿ ಪ್ರತಿಯೊಂದು ಬಾರಿಯೂ ಗೇಟುಗಳನ್ನು ತೆರೆಯಲು ಸಂಪೂರ್ಣವಾಗಿ ಜನರೇಟರ್ ಮೇಲೆ ಅವಲಂಬಿತರಾಗಬೇಕಾದ ದುಸ್ಥಿತಿ ಇದೆ. ತುರ್ತು ಸಂದರ್ಭ, ಮಳೆಗಾಲದಲ್ಲಿ ಹಠಾತ್ ಪವರ್ ಕಟ್ ಅಥವಾ ಜನರೇಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡರೆ, ಗೇಟುಗಳನ್ನು ಸಮಯಕ್ಕೆ ಸರಿಯಾಗಿ ಎತ್ತಲಾಗದೆ ಅಣೆಕಟ್ಟು ಹಾಗೂ ಕೆಳಭಾಗದ ಗ್ರಾಮಗಳಿಗೆ ದೊಡ್ಡ ಅನಾಹುತ ಸಂಭವಿಸುವ ಭೀತಿ ಎದುರಾಗಲಿದೆ.ನಿರಾಶ್ರಿತರು ವಾಸಿಸುವ ಪ್ರದೇಶಗಳಿಗೆ ಸೂಕ್ತ ರಸ್ತೆ ಸೌಲಭ್ಯ ಕಲ್ಪಿಸಿಲ್ಲ. ಮಳೆಗಾಲದಲ್ಲಂತೂ ಕೆಸರುಮಯ ರಸ್ತೆಗಳಲ್ಲಿ ಓಡಾಡುವುದೇ ದೊಡ್ಡ ಸಾಹಸ. ಯೋಜನೆಗೆ ಕೋಟಿ ವ್ಯಯಿಸಿದ್ದ ಆಡಳಿತ ಮಂಡಳಿ, ಜಾಗ ನೀಡಿದ ನಿರಾಶ್ರಿತರಿಗೆ ಮೂಲಭೂತ ರಸ್ತೆ ಸೌಕರ್ಯ ಒದಗಿಸಲು ಸಂಪೂರ್ಣ ವಿಫಲವಾಗಿದೆ ಎಂದು ಸ್ಥಳೀಯ ನಾಗರಾಳ ಪುನರ್ವಸತಿ ಕೇಂದ್ರ ನಿರಾಶ್ರಿತ ಜಾವೀದ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದರು.
ಕೆಳದಂಡೆ ಮುಲ್ಲಾಮಾರಿ ಯೋಜನೆ ವಿದ್ಯುತ್ ಸಂಪರ್ಕ ನೀಡಬೇಕು ಎಂದು ಕೆಡಿಪಿ ಸಭೆಯಲ್ಲಿ ಭಾಗವಹಿಸಿದ ಎಇಇ ಅಮೃತ್ ಪವಾರ್‌ಗೆ ತಿಳಿಸಲಾಗಿದೆ. ಆದರು ಯೋಜನೆ ಗೇಟುಗಳ ಹತ್ತಿರ ವಿದ್ಯುತ್ ಸಂಪರ್ಕ ವಿದ್ಯುತ್ ದೀಪ ಇಲ್ಲದಿರುವ ಬಗ್ಗೆ ನನ್ನ ಗಮನಕ್ಕೆ ತಂದಿಲ್ಲ. ಯೋಜನೆಗೆ ಶೀಘ್ರದಲ್ಲೇ ಭೇಟಿ ನೀಡಿ ಪರಿಶೀಲನೆ ನಡೆಸಿ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯ ಮಾಡಿಸುತ್ತೇನೆ ಎಂದು ಶಾಸಕ ಡಾ.ಅವಿನಾಶ ಜಾಧವ್ ಹೇಳಿದರು.ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ವಿದ್ಯುತ್ ಸಂಪರ್ಕ ವಿದ್ಯುತ್ ದೀಪಗಳಿಲ್ಲ. ಯೋಜನೆ ಅಧಿಕಾರಿಗಳು ಶಾಸಕರ ಗಮನಕ್ಕೂ ತಂದಿಲ್ಲ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಯೋಜನೆ ದಿವಾಳಿ ಅಂಚಿನಲ್ಲಿದೆ ಎಂದು ಚಿಂಚೋಳಿ ರೈತ ಮುಖಂಡ ಕೆ.ಎಂ.ಬಾರಿ ಹೇಳಿದರು.
ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಕರ್ನಾಟಕ ನೀರಾವರಿ ನಿಗಮ ನಿಯಮಿತ ಅಧಿಕಾರಿಗಳಿಂದ ಕಡೆಗಾಣಿಸಲಾಗುತ್ತಿದೆ ಒಮ್ಮೆಯೂ ಭೇಟಿ ನೀಡಿ ಪರಿಶೀಲನೆ ಮಾಡಿಲ್ಲ. ಎಇಇ ಅಮೃತ್ ಪವಾರ್ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆಗೆ ವಿದ್ಯುತ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಗೆ ಅನುದಾನವನ್ನು ಬಿಡುಗಡೆ ಮಾಡಲು ಪತ್ರ ಬರೆದಿದ್ದೇವೆ.ಅನುದಾನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಣಮಂತ ಪೂಜಾರಿ ಹೇಳಿದರು.