ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜ್ಯ ಒಕ್ಕಲಿಗರ ಸಂಘದ ನೂತನ ಅಧ್ಯಕ್ಷರಾಗಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಗುರುತಿಸಿಕೊಂಡಿದ್ದ ಬಿ.ಕೆಂಚಪ್ಪಗೌಡ ಆಯ್ಕೆ ಆಗಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಡಾ। ಆಂಜಿನಪ್ಪ ಸೋಲು ಅನುಭವಿಸಿದ್ದಾರೆ.ಭಾನುವಾರ ಕೆ.ಆರ್.ರಸ್ತೆಯ ಸಂಘದ ಕೇಂದ್ರ ಕಚೇರಿಯಲ್ಲಿ ನಡೆದ ಚುನಾವಣೆಯಲ್ಲಿ ನೂತನ ತಂಡ ಚುನಾಯಿತವಾಗಿದೆ. 35 ನಿರ್ದೇಶಕರು ಮತ ಚಲಾಯಿಸುವ ಹಕ್ಕು ಹೊಂದಿದ್ದು ಡಿ.ಕೆ.ಶಿವಕುಮಾರ್ ಅವರೊಂದಿಗೆ ಗುರುತಿಸಿಕೊಂಡಿರುವ ಕೆಂಚಪ್ಪಗೌಡ ಅವರು 21 ಮತ ಪಡೆದು ಜಯಶೀಲರಾದರು. ಕುಮಾರಸ್ವಾಮಿ ಅವರ ಬೆಂಬದೊಂದಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದ ಡಾ.ಆಂಜಿನಪ್ಪ 14 ಮತ ಪಡೆಯುವಲ್ಲಿ ಮಾತ್ರ ಸಫಲರಾದರು.
ಆ ಮೂಲಕ ಸಂಘದ ಅಧ್ಯಕ್ಷರಾಗಿ ಕೆಂಚಪ್ಪಗೌಡ ಅವರು ಮೂರನೇ ಬಾರಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಉಪಾಧ್ಯಕ್ಷರಾಗಿ ಎಲ್.ಶ್ರೀನಿವಾಸ್ ಮತ್ತು ಡಾ.ಕೆ.ವಿ.ರೇಣುಕಾ ಪ್ರಸಾದ್, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಕೋನಪ್ಪ ರೆಡ್ಡಿ, ಸಹಾಯಕ ಕಾರ್ಯದರ್ಶಿಯಾಗಿ ಆರ್.ಹನುಮಂತರಾಯಪ್ಪ ಮತ್ತು ಖಜಾಂಚಿಯಾಗಿ ಎನ್.ಬಾಲಕೃಷ್ಣ (ನಲ್ಲಿಗೆರೆ ಬಾಬು) ಆಯ್ಕೆಯಾದರು.ಶ್ರವಣಬೆಳಗೊಳದ ಜೆಡಿಎಸ್ ಶಾಸಕರೂ ಆಗಿದ್ದ ಸಂಘದ ಅಧ್ಯಕ್ಷ ಸಿ.ಎನ್.ಬಾಲಕೃಷ್ಣ ಮತ್ತು ಪದಾಧಿಕಾರಿಗಳ ವಿರುದ್ಧ ನ.24 ರಂದು ಸಂಘದ ಮಾಜಿ ಅಧ್ಯಕ್ಷರೂ ಆಗಿದ್ದ ಕೆಂಚಪ್ಪಗೌಡ ಅವರ ತಂಡ ಅವಿಶ್ವಾಸ ನಿರ್ಣಯ ಮಂಡಿಸಿತ್ತು. 20 ನಿರ್ದೇಶಕರು ಅವಿಶ್ವಾಸ ನಿರ್ಣಯದ ಪರವಾಗಿದ್ದರು. ಆದ್ದರಿಂದ ಸಂಘದ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಚುನಾವಣೆ ಪ್ರಕ್ರಿಯೆ ನಡೆದು ಸಂಜೆ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.