ನಾಗಯಕ್ಷೆ ಮಹಾಸತಿ ಧರ್ಮದೇವಿ ದರ್ಶನ ಪಡೆದ ಶ್ರೀಗಳು
ಕನ್ನಡಪ್ರಭ ವಾರ್ತೆ ಭಟ್ಕಳಪಟ್ಟಣದ ವಡೇರ ಮಠದಲ್ಲಿ ಕಳೆದ ಕೆಲವು ದಿನಗಳಿಂದ ವಾಸ್ತವ್ಯ ಇರುವ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ವಿದ್ಯಾದೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ನಾಗಯಕ್ಷೆ ಮಹಾಸತಿ ಧರ್ಮದೇವಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು.
ನಂತರ ಅಲ್ಲಿನ ಭಕ್ತರನ್ನುದ್ದೇಶಿಸಿ ಆಶೀರ್ವಚ ನೀಡಿದ ಸ್ವಾಮೀಜಿಯವರು, ಜಗತ್ತಿನಲ್ಲಿ ಧರ್ಮ ಮತ್ತು ಕೀರ್ತಿ ಎಂಬ ಎರಡು ಮಾತ್ರ ಶಾಶ್ವತವಾಗಿ ಉಳಿಯುವವು. ಆಯುಷ್ಯ, ಯೌವನ, ಐಶ್ವರ್ಯ, ಪುತ್ರ-ದಾರರು ಸೇರಿದಂತೆ ಜೀವನದ ಎಲ್ಲ ಭೌತಿಕ ಸುಖಸಂಪತ್ತುಗಳು ಅಸ್ಥಿರ ಹಾಗೂ ನಶ್ವರವಾಗಿವೆ. ಮಾನವನ ಜೀವನದಲ್ಲಿ ದೊರೆಯುವ ಆಯುಷ್ಯ, ಯೌವನ, ಸಂಪತ್ತು ಹಾಗೂ ಕುಟುಂಬ ಎಲ್ಲವೂ ಒಂದು ದಿನ ಕಳೆಯುವವು. ಆದರೆ ಧರ್ಮಾಚರಣೆ ಮತ್ತು ಸತ್ಕರ್ಮಗಳಿಂದ ಗಳಿಸಿದ ಕೀರ್ತಿ ಮಾತ್ರ ಶಾಶ್ವತವಾಗಿ ಉಳಿಯುತ್ತದೆ. ದಾನಶೂರನಾದ ಕರ್ಣನು ಇಂದಿಗೂ ಜನರ ನೆನಪಿನಲ್ಲಿ ಜೀವಂತವಾಗಿರುವುದು ಅವನು ಮಾಡಿದ ಪುಣ್ಯಕರ್ಮ ಮತ್ತು ದಾನಧರ್ಮದ ಫಲವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಅವರು ಯದೃಶೀ ಭಾವನಾ ಯಸ್ಯ ಸಿದ್ಧಿರ್ಭವತಿ ತಾದೃಶೀ ಎಂಬ ಸಂಸ್ಕೃತ ವಾಕ್ಯದ ಅರ್ಥವನ್ನು ವಿವರಿಸಿ, ಯಾರ ಮನಸ್ಸಿನಲ್ಲಿ ಯಾವ ರೀತಿಯ ಭಾವನೆ, ನಂಬಿಕೆ ಮತ್ತು ಶ್ರದ್ಧೆ ಇರುತ್ತದೆಯೋ, ಅವರಿಗೆ ಅದೇ ರೀತಿಯ ಫಲ ಮತ್ತು ಸಿದ್ಧಿ ದೊರೆಯುತ್ತದೆ ಎಂದು ಹೇಳಿದರು.
ಮಂತ್ರ, ದೇವರು ಹಾಗೂ ಗುರುಗಳ ಮೇಲಿನ ಅಚಲ ವಿಶ್ವಾಸದಿಂದ ಜೀವನದಲ್ಲಿ ಯಶಸ್ಸು ಮತ್ತು ಶಾಂತಿ ದೊರೆಯುತ್ತದೆ. ಉತ್ತಮ ಆಲೋಚನೆಗಳು ಹಾಗೂ ಸತ್ಕರ್ಮಗಳು ವ್ಯಕ್ತಿಯನ್ನು ಉನ್ನತಿಗೆ ಕೊಂಡೊಯ್ಯುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಧರ್ಮಮಾರ್ಗದಲ್ಲಿ ನಡೆದು ಸಮಾಜಕ್ಕೆ ಒಳಿತಾಗುವ ಕಾರ್ಯಗಳನ್ನು ಮಾಡುವ ಮೂಲಕ ತಮ್ಮ ಜೀವನವನ್ನು ಸಾರ್ಥಕಗೊಳಿಸಬೇಕು ಎಂದು ಕರೆ ನೀಡಿದರು.
ಆಡಳಿತ ಮಂಡಳಿ ಅಧ್ಯಕ್ಷ ರಾಮದಾಸ ಪ್ರಭು ದೇವಸ್ಥಾನದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ವೇಳೆ ಸಂಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಗಣಪತಿ ಪ್ರಭು, ಸದಸ್ಯರಾದ ರಾಮದಾಸ ಪ್ರಭು ಶಿರಾಲಿ, ಅನಂತ ಕಾಮತ, ಅರವಿಂದ ಪೈ, ದಿಗಂಬರ ಶೇಟ್, ಡಾ. ಪ್ರಭಾಕರ ನಂಬಿಯಾರ, ಶ್ರೀಕಾಂತ ಬಡಾಲ, ಸುಜಾತ ಕಾಮಕರ, ಉದಯ ಪ್ರಭು, ರಾಧಾಕೃಷ್ಣ ಪ್ರಭು ಹಾಗೂ ಭಕ್ತರು ಉಪಸ್ಥಿತರಿದ್ದರು.