ಉಡುಪಿಯಲ್ಲಿ ಪ್ರಮೋದ್‌ ಮಧ್ವರಾಜ್‌ಗೇ ಬಿಜೆಪಿ ಟಿಕೆಟ್‌ ನೀಡಲು ಒತ್ತಾಯ

| Published : Jan 30 2024, 02:07 AM IST

ಉಡುಪಿಯಲ್ಲಿ ಪ್ರಮೋದ್‌ ಮಧ್ವರಾಜ್‌ಗೇ ಬಿಜೆಪಿ ಟಿಕೆಟ್‌ ನೀಡಲು ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಶೇ.50ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದ್ದರೂ ಒಂದೇ ಒಂದು ಸೀಟ್‌ ನೀಡಿಲ್ಲ. ಮೀನುಗಾರ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದ್ದು, ಈ ಬಾರಿಯಾದರೂ ಪ್ರಾತಿನಿಧ್ಯ ನೀಡಿ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಕ್ಷೇತ್ರದಲ್ಲೇ ಟಿಕೆಟ್‌ ಘೋಷಿಸಬೇಕು ಎಂದು ಮಂಗಳೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಭರತ್‌ ಕುಮಾರ್ ಉಳ್ಳಾಲ್ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಮುಂದಿನ ಲೋಕಸಭಾ ಚುನಾವಣೆಯಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸ್ಥಾನಕ್ಕೆ ಮೀನುಗಾರ ಸಮಾಜದ ಪ್ರಮೋದ್ ಮಧ್ವರಾಜ್ ಅವರನ್ನು ಬಿಜೆಪಿ ಆಯ್ಕೆ ಮಾಡಬೇಕು ಎಂದು ಕರಾವಳಿಯ ಪ್ರಮುಖ ಮೀನುಗಾರ ಸಂಘಟನೆಗಳು ಒತ್ತಾಯಿಸಿವೆ.

ಈ ಕುರಿತು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಭರತ್‌ ಕುಮಾರ್ ಉಳ್ಳಾಲ್, ರಾಜ್ಯದಲ್ಲಿ ಶೇ.50ರಷ್ಟು ಹಿಂದುಳಿದ ವರ್ಗದ ಜನಸಂಖ್ಯೆ ಇದ್ದರೂ ಒಂದೇ ಒಂದು ಸೀಟ್‌ ನೀಡಿಲ್ಲ. ಮೀನುಗಾರ ಸಮುದಾಯ ಹಿಂದುಳಿದ ವರ್ಗಕ್ಕೆ ಸೇರಿದ್ದು, ಈ ಬಾರಿಯಾದರೂ ಪ್ರಾತಿನಿಧ್ಯ ನೀಡಿ ಪ್ರಮೋದ್ ಮಧ್ವರಾಜ್ ಅವರಿಗೆ ಉಡುಪಿ ಕ್ಷೇತ್ರದಲ್ಲೇ ಟಿಕೆಟ್‌ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಮಸ್ಯೆ ಪರಿಹಾರಕ್ಕೆ ಬೇಕು ನಾಯಕತ್ವ:

ರಾಜ್ಯದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೀನುಗಾರರಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಗಳಿವೆ. ಕೇಂದ್ರದ ಮತ್ಸ್ಯ ಸಂಪದ ಯೋಜನೆಯಡಿ ಸಾಕಷ್ಟು ಅನುದಾನ ಇದ್ದರೂ ಸರಿಯಾದ ರಾಜಕೀಯ ನಾಯಕತ್ವ ಇಲ್ಲದೆ ಮೀನುಗಾರರಿಗೆ ತಲುಪುತ್ತಿಲ್ಲ. ಉಡುಪಿಯಲ್ಲಿ ಮೀನುಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದು, ನರೇಂದ್ರ ಮೋದಿ ವರ್ಚಸ್ಸಿನ ಜತೆಗೆ ಪ್ರಮೋದ್‌ ಗೆದ್ದೇ ಗೆಲ್ಲಲಿದ್ದಾರೆ ಎಂದು ಹೇಳಿದರು.

ಅಖಿಲ ಭಾರತ ಮೀನುಗಾರರ ಸಂಘದ ಕಾರ್ಯದರ್ಶಿ ಕಿಶೋರ್ ಡಿ. ಸುವರ್ಣ ಮಾತನಾಡಿ, ಪ್ರಮೋದ್‌ ಮಧ್ವರಾಜ್‌ ಅವರು ಹುಟ್ಟಾ ಮೀನುಗಾರ. ಮೀನುಗಾರರ ಸಮಸ್ಯೆಗಳ ಬಗ್ಗೆ ಆಳವಾದ ಜ್ಞಾನ ಹೊಂದಿದವರು. ಈ ಹಿಂದೆ ಸಚಿವರಾಗಿದ್ದಾಗಲೂ ಹಲವು ಸಮಸ್ಯೆಗಳನ್ನು ಬಗೆಹರಿಸಿದ್ದಾರೆ. ಈಗ ರಾಷ್ಟ್ರ ಮಟ್ಟದಲ್ಲಿ ಸಮಸ್ಯೆಗಳ ನಿವಾರಣೆಗೆ ಅವರೇ ಎಂಪಿ ಆಗಬೇಕು ಎಂದು ಒತ್ತಾಯಿಸಿದರು.ವಿವಿಧ ಮೀನುಗಾರಿಕಾ ಸಂಘಟನೆಗಳ ಪ್ರಮುಖರಾದ ಮೋಹನ್ ಬೆಂಗ್ರೆ, ಅನಿಲ್ ಕುಮಾರ್ ಬೊಕ್ಕಪಟ್ಣ, ನವೀನ್ ಬಂಗೇರ, ಉಮೇಶ್ ಜಿ. ಕರ್ಕೇರ, ಸದಾನಂದ ಬಂಗೇರ ಉಳ್ಳಾಲ, ಪುಂಡಲೀಕ ಹೊಸಬೆಟ್ಟು, ರಾಜೇಶ್ ಪುತ್ರನ್ ಇದ್ದರು.ಟಿಕೆಟ್‌ ಕೊಡದಿದ್ದರೆ ನಂತರ ನಿರ್ಧಾರಪ್ರಮೋದ್‌ ಮಧ್ವರಾಜ್‌ 12 ವರ್ಷಗಳಿಂದ ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾಗಿ, 13 ವರ್ಷಗಳಿಂದ ಕರ್ನಾಟಕ ಕರಾವಳಿ ಮೀನುಗಾರರ ಕ್ರಿಯಾ ಸಮಿತಿ ಅಧ್ಯಕ್ಷರಾಗಿ, 6 ವರ್ಷಗಳಿಂದ ರಾಷ್ಟ್ರೀಯ ಮೀನುಗಾರರ ವೇದಿಕೆಯ ಕಾರ್ಯದರ್ಶಿಯಾಗಿ ಮೀನುಗಾರರೊಂದಿಗೆ ನಿಕಟ ಸಂಪರ್ಕ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಅವರಿಗೆ ಟಿಕೆಟ್ ದೊರೆಯದಿದ್ದರೆ ಮೊಗವೀರ ಸಮುದಾಯದ ಮುಂದಿನ ನಿಲುವನ್ನು ಸೂಕ್ತ ಸಂದರ್ಭದಲ್ಲಿ ಪ್ರಕಟಿಸಲಾಗುವುದು.