ಸಾರಾಂಶ
ಬಳ್ಳಾರಿ: ಅನೇಕ ವರ್ಷಗಳಿಂದ ಬ್ಯಾಂಕ್ ಗಳಲ್ಲಿರುವ ನಿಷ್ಕ್ರಿಯ ಖಾತೆಗಳು, ಠೇವಣಿ ಅಥವಾ ಇತರ ಕಾರಣಗಳಿಂದ ಬಾಕಿ ಉಳಿದಿರುವ ಹಣವನ್ನು ಹಿಂಪಡೆಯದೇ ಇರುವುದರಿಂದ ಆರ್ಥಿಕತೆಗೆ ಪೆಟ್ಟು ಬೀಳಲಿದೆ ಎಂದು ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್ ಹೇಳಿದರು.
ಹಣಕಾಸು ಸೇವೆಗಳ ಇಲಾಖೆ, ಹಣಕಾಸು ಸಚಿವಾಲಯ, ಆರ್‌ಬಿಐ, ಎಸ್‌ಎಲ್‌ಬಿಸಿ ಮತ್ತು ಬಳ್ಳಾರಿ ಜಿಲ್ಲಾಡಳಿತ ನಿರ್ದೇಶನದಂತೆ ಹಕ್ಕು ಪಡೆಯದ ನಿಷ್ಕ್ರಿಯ ಖಾತೆಗಳ ಮುಚ್ಚುವಿಕೆ ಮತ್ತು ಮರು-ಸಕ್ರಿಯಗೊಳಿಸುವಿಕೆಗಾಗಿ ನಗರದ ಹಳೆಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ನಿಮ್ಮ ಹಣ-ನಿಮ್ಮ ಹಕ್ಕು’ ಅಭಿಯಾನ ಕುರಿತು ಜಾಗೃತಿ ಮತ್ತು ಪ್ರಗತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ನಿಷ್ಕ್ರಿಯ ಖಾತೆಗಳಲ್ಲಿರುವ ಹಣ ವ್ಯವಹಾರಗಳಲ್ಲಿ ಬಳಕೆಯಾಗಬೇಕು. ಅಂದಾಗ ಮಾತ್ರ ಅಭಿವೃದ್ಧಿ ಸಾಧ್ಯ. ಹೀಗಾಗಿ ಹೆಚ್ಚು ಶಿಬಿರ ಆಯೋಜಿಸುವ ಮೂಲಕ ನಿಗದಿತ ವೇಳೆಗೆ ಜಿಲ್ಲೆಯಲ್ಲಿರುವ ನಿಷ್ಕ್ರಿಯ ಖಾತೆಗಳನ್ನು ಇತ್ಯರ್ಥಗೊಳಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಹೇಳಿದರು.
ಹಣಕಾಸು ಸೇವೆಗಳ ಇಲಾಖೆಯು ಅ.3ರಿಂದ ಡಿ.31ರವರೆಗೆ ನಿಷ್ಕ್ರಿಯ ಖಾತೆಗಳು, ಹಕ್ಕು ಪಡೆಯದ ಠೇವಣಿಗಳು, ವಿಮಾ ಪಾಲಿಸಿ ಮೊತ್ತ, ಷೇರುಗಳನ್ನು ಇತ್ಯರ್ಥಪಡಿಸಲು ಅಭಿಯಾನ ಪ್ರಾರಂಭಿಸಿದೆ. ಗ್ರಾಹಕರಿಗೆ ಮತ್ತು ಅವರ ವಾರಸುದಾರರಿಗೆ ‘ನಿಮ್ಮ ಹಣ, ನಿಮ್ಮ ಹಕ್ಕು’ ಅಭಿಯಾನದಿಂದ ಅನುಕೂಲವಾಗಲಿದೆ. ಇದರ ಕುರಿತು ಶಿಬಿರ ಆಯೋಜಿಸಿ ಹೆಚ್ಚು ಅರಿವು ಮೂಡಿಸಬೇಕು ಎಂದು ಹೇಳಿದರು.ಲೀಡ್ ಬ್ಯಾಂಕ್ ಜಿಲ್ಲಾ ವ್ಯವಸ್ಥಾಪಕ ಗಿರೀಶ್ ವಿ. ಕುಲಕರ್ಣಿ ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ 2,73,484 ನಿಷ್ಕ್ರಿಯ ಖಾತೆಗಳಿದ್ದು, ಒಟ್ಟು ₹73.54 ಕೋಟಿ ಮೊತ್ತವಿದೆ. 10 ವರ್ಷಗಳಿಗೂ ಹೆಚ್ಚು ಕಾಲದಿಂದ ಬಾಕಿ ಇರುವ ನಿಷ್ಕ್ರಿಯ ಖಾತೆಗಳನ್ನು ಮುಚ್ಚುವ ಅಥವಾ ಕೆವೈಸಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಷ್ಕ್ರಿಯ ಖಾತೆಗಳನ್ನು ಮರು-ಸಕ್ರಿಯಗೊಳಿಸಿಕೊಳ್ಳಬೇಕು. ಈ ಹಣ ಸಂಬಂಧಪಟ್ಟ ಖಾತೆದಾರರಿಗೆ ಅಥವಾ ಅವರ ವಾರಸುದಾರರಿಗೆ ಸೇರಬೇಕಾಗಿದೆ. ಈ ನಿಟ್ಟಿನಲ್ಲಿ ವಿಶೇಷ ಜಂಟಿ ಶಿಬಿರಗಳನ್ನು ನಡೆಸಬೇಕು ಎಂದು ಸಂಬಂಧಿಸಿದ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿ ಸಿ. ಗೌತಮ್ ಮಾತನಾಡಿ, ನಿಷ್ಕ್ರಿಯ ಖಾತೆಗಳು, ಹಕ್ಕು ಪಡೆಯದ ಠೇವಣಿಗಳ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ರಾಷ್ಟ್ರೀಕೃತ ಮತ್ತು ಖಾಸಗಿ ಬ್ಯಾಂಕ್‌ಗಳಲ್ಲಿ ಹೊಂದಿರುವ ಖಾತೆಗಳನ್ನು ವರ್ಗೀಕರಣ ಮಾಡಬೇಕು. ಗ್ರಾಹಕರು ತಾವು ಯಾವ ಯಾವ ಶಾಖೆಗಳಲ್ಲಿ ಖಾತೆ ಹೊಂದಿದ್ದಾರೆ ಎಂಬುದರ ಕುರಿತು ಆಯೋಜಿಸುವ ವಿಶೇಷ ಶಿಬಿರಗಳಲ್ಲಿ ಅರಿವು ಮಾಹಿತಿ ನೀಡಬೇಕು. ಮುಖ್ಯವಾಗಿ ವರ್ಷಗಳ ಆಧಾರದ ಮೇಲೆ ಠೇವಣಿ ಮಾಡಿದ ಹಣದ ಮೇಲೆ ಇನ್ಸೆಂಟಿವ್ ನೀಡುವ ಕುರಿತು ಮನವರಿಕೆ ಮಾಡಿಕೊಡಬೇಕು ಎಂದು ಹೇಳಿದರು.ಆನ್‌ಲೈನ್ https://udgam.rbi.org.in ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲಿಸಬಹುದು ಅಥವಾ ಗ್ರಾಹಕರು ತಮ್ಮ ಹತ್ತಿರದ ಬ್ಯಾಂಕ್ ಶಾಖೆ, ಎಲ್‌ಐಸಿ ಕಚೇರಿಗೆ ಭೇಟಿ ನೀಡಿ, ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ನಿಷ್ಕ್ರಿಯ ಖಾತೆಗಳ ಮುಚ್ಚುವಿಕೆ ಮತ್ತು ಮರು-ಸಕ್ರಿಯಗೊಳಿಸುವಿಕೆಗಾಗಿ ಇತ್ಯರ್ಥಪಡಿಸಿಕೊಳ್ಳಬೇಕು. ಸಾರ್ವಜನಿಕರು ಈ ಸೌಲಭ್ಯವನ್ನು ಬಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಬ್ಯಾಂಕ್‌ಗಳಲ್ಲಿನ ದೀರ್ಘಕಾಲದಿಂದ ಹಕ್ಕು ಪಡೆಯದೇ ಉಳಿದಿರುವ ಬ್ಯಾಂಕ್ ಠೇವಣಿ ವಿಮೆ ಕಂತು ಮತ್ತು ಷೇರುಗಳನ್ನುಅವುಗಳ ಮಾಲೀಕರಿಗೆ ಮತ್ತು ಕಾನೂನುಬದ್ಧ ವಾರಸುದಾರರಿಗೆ ಅಪರ ಜಿಲ್ಲಾಧಿಕಾರಿ ಅವರು ಅಧಿಕೃತ ಪ್ರತಿ ಹಸ್ತಾಂತರಿಸಿದರು. 33 ಖಾತೆಗಳ ₹8 ಲಕ್ಷದ ಮೊತ್ತದ ಭಾರತೀಯ ಜೀವ ವಿಮೆ (ಎಲ್‌ಐಸಿ) ಇತ್ಯರ್ಥಗೊಳಿಸಿದ ಅಧಿಕಾರಿಗಳನ್ನು ಅಭಿನಂದಿಸಲಾಯಿತು.ನಿಷ್ಕ್ರಿಯ ಖಾತೆಯಲ್ಲಿ ₹22 ಸಾವಿರ ಇರುವುದು ನನಗೆ ತಿಳಿದಿರಲಿಲ್ಲ. ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿ, ನನ್ನ ಕೆವೈಸಿ ದಾಖಲೆ ಪಡೆದು ಹಣ ವರ್ಗಾವಣೆ ಮಾಡಿದ್ದಾರೆ. ಬಹಳ ಸಂತೋಷವಾಗಿದೆ ಎಂದು ನಿಷ್ಕ್ರಿಯ ಖಾತೆಯ ವಾರಸುದಾರರಾದ ವಸಂತ ತಿಳಿಸಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಳ್ಳಾರಿ ಪ್ರಾದೇಶಿಕ ವ್ಯವಸ್ಥಾಪಕ ರವಿ ಮೆಶ್ರಮ್ ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))