ಎಸ್.ಜಿ. ತೆಗ್ಗಿನಮನಿ
ನರಗುಂದ: ಯಾವುದೇ ಯೋಜನೆ, ಕಾರ್ಯ ಯಶಸ್ಸಿಗೆ ಅಗತ್ಯ ಸಿಬ್ಬಂದಿ ಬೇಕು. ಇಲ್ಲದಿದ್ದರೆ ಯೋಜನೆ ಹಳ್ಳ ಹಿಡಿಯುವುದು ಪಕ್ಕಾ. ಅದೇ ರೀತಿ ಪಟ್ಟಣದ ಸ್ವಚ್ಛತೆಗೆ ಅಗತ್ಯ ಸಿಬ್ಬಂದಿ ಇಲ್ಲದೇ ಸಮರ್ಪಕ ಕಸ ವಿಲೇವಾರಿ, ಚರಂಡಿ ಸ್ವಚ್ಛತೆಯೂ ಆಗದೇ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ.ಪುರಸಭೆ ವ್ಯಾಪ್ತಿಗೆ ಕಸ, ಚರಂಡಿ ಸ್ವಚ್ಛತೆಗೆ 60 ಪೌರಕಾರ್ಮಿಕರ ಇರಬೇಕು. ಆದರೆ ಕೇವಲ 31 ಕಾರ್ಮಿಕರು ಇದ್ದಾರೆ. ಅದರಲ್ಲಿ 29 ಕಾಯಂ ಕಾರ್ಮಿಕರು, 2 ಜನ ದಿನಗೂಲಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಸ ವಿಲೇವಾರಿಗೆ 13 ವಾಹನಗಳಿವೆ. ಇವುಗಳ ಚಾಲನೆಗೆ 11 ಜನ ಮಾತ್ರ ವಾಹನ ಚಾಲಕರು ಇದ್ದಾರೆ.
ಪಟ್ಟಣದ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳ ಬಹುತೇಕ ಚರಂಡಿ ಮತ್ತು ಖಾಲಿ ನಿವೇಶನಗಳಲ್ಲಿ ಕಸ, ಗಿಡಗಂಟಿಗಳು ಹಾಗೂ ಮಳೆ ನೀರು ನಿಂತ ಪರಿಣಾಮ ಗಬ್ಬೆದ್ದು ದುರ್ವಾಸನೆ ಬೀರುತ್ತಿವೆ. ಮಳೆನೀರು ಸಂಗ್ರಹವಾಗಿರುವುದರಿಂದ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿ ಡೆಂಘೀ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ಜಾಲಿ ಕಂಟಿ: ರಸ್ತೆಬದಿ ಕಸ ಎಸೆಯುವುದು ಸಾಮಾನ್ಯ. ಖಾಲಿ ನಿವೇಶನಗಳಲ್ಲಿ ಜಾಲಿ ಕಂಟಿ ಬೆಳೆದು ವಿಷಜಂತುಗಳ ಹಾವಳಿ ಹೆಚ್ಚಾಗಿದೆ. ಖಾಲಿ ನಿವೇಶನಗಳ ಮಾಲೀಕರಿಗೆ ನೋಟಿಸ್ ನೀಡುವುದು, ಕಸ ತೆರವುಗೊಳಿಸುವುದು, ಗಿಡಗಂಟಿಗಳನ್ನು ಸ್ವಚ್ಛಗೊಳಿಸುವುದು ಹಾಗೂ ಸೊಳ್ಳೆ ನಿಯಂತ್ರಣಕ್ಕಾಗಿ ಔಷಧಿ ಸಿಂಪಡಿಸುವಂಥ ಕ್ರಮ ಆಗುತ್ತಿಲ್ಲ.
ಸ್ವಚ್ಛತೆಗೆ ನಿರ್ಲಕ್ಷ್ಯದ ಕುರಿತು ಹಲವಾರು ಪುರಸಭೆ ಮುಖ್ಯಾಧಿಕಾರಿ, ಹಿರಿಯ ಆರೋಗ್ಯ ನಿರೀಕ್ಷಕರ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂಬುದು ಸಾರ್ವಜನಿಕರ ಅಳಲು.
ಪಟ್ಟಣದ ಚರಂಡಿ ಮತ್ತು ಕಸ ವಿಲೇವಾರಿ ಮಾಡಲು ತಕ್ಷಣವೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವುದು ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು ಹಾಗೂ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಗತ್ಯ ಕ್ರಮ: ಕಾರ್ಮಿಕರ ಸಮಸ್ಯೆಯಿಂದ ಕಸ ವಿಲೇವಾರಿಗೆ ತೊಂದರೆಯಾಗಿದೆ. ಆದರೂ ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲಿ ಚರಂಡಿ ಸ್ವಚ್ಛತೆ ಮತ್ತು ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧಿಕಾರಿ ಸುಭಾಸ ಖುದನಾಪೂರ ತಿಳಿಸಿದರು.ಕಸ ವಿಲೇವಾರಿ ಆಗುತ್ತಿಲ್ಲ: ಪಟ್ಟಣದಲ್ಲಿ ಸಮರ್ಪಕವಾಗಿ ಕಸ ವಿಲೇವಾರಿ ಆಗುತ್ತಿಲ್ಲ. ಸಾರ್ವಜನಿಕರ ಆರೋಗ್ಯ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಿ ಪುರಸಭೆ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಯಕರ್ನಾಟಕ ಸಂಘಟನೆಯ ಮುಖಂಡ ಬಸವರಾಜ ತಾವರೆ ತಿಳಿಸಿದರು.