ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದ ಮಾಸ್ಟರ್ಸ್ ಕ್ರೀಡಾಪಟುಗಳಿಗೆ ಸ್ಥಗಿತಗೊಂಡ ಮಾಸಾಶನ ಮರು ಜಾರಿ ಮಾಡಲು ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ಬಿ. ನಾಗೇಂದ್ರ ಭರವಸೆ ನೀಡಿದರು. ಮಂಗಳಾ ಕ್ರೀಡಾಂಗಣದಲ್ಲಿ ಶನಿವಾರ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಸಹಭಾಗಿತ್ವದಲ್ಲಿ ದ.ಕ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ವತಿಯಿಂದ 42ನೇ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು.ಸರ್ಕಾರ ಈಗಾಗಲೇ ಕ್ರೀಡಾ ಇಲಾಖೆಯ ಮೂಲಕ ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹವನ್ನು ನೀಡುತ್ತಿದೆ. ರಾಜ್ಯದ ಕುಸ್ತಿ ಪಟುಗಳಿಗೆ ಈಗಾಗಲೇ ಮಾಶಾಸನ ನೀಡಲಾಗುತ್ತಿದೆ. ಇದರಂತೆಯೇ ಉಳಿದ ಕ್ರೀಡೆಗಳಲ್ಲಿ ಪದಕ ಗೆದ್ದವರಿಗೆ ಮಾಸಾಶನ ಸಿಗುವಂತೆ ಸಿಎಂ ಅವರ ಜತೆ ಚರ್ಚೆ ನಡೆಸಿ ಬಜೆಟ್‌ನಲ್ಲಿ ಅದಕ್ಕೊಂದು ಮೊತ್ತ ಮೀಸಲು ಇಡುವಂತೆ ಯೋಜಿಸಲಾಗುವುದು ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಶಿಕ್ಷಣಕಾಶಿ ಮಾತ್ರವಲ್ಲ ಕ್ರೀಡೆಯಲ್ಲೂ ಸಾಕಷ್ಟುಗುರುತಿಸಿಕೊಂಡಿದೆ. ಇಲ್ಲಿನ ಸಾಕಷ್ಟು ಕ್ರೀಡಾಪಟುಗಳು ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಇವರಿಗೆ ಸರ್ಕಾರದ ಮಟ್ಟದಿಂದ ನೆರವು ಸಿಕ್ಕಿದರೆ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಿದೆ ಎಂದರು.ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿ, ಸರ್ಕಾರ ಕ್ರೀಡೆಯಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಉದ್ಯೋಗ ನೀಡುವ ಮೂಲಕ ಅವರಿಗೆ ನೆರವಾಗಬೇಕು ಎಂದರು.
ದ.ಕ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಗೌರವಾಧ್ಯಕ್ಷ ಐವನ್ ಡಿಸೋಜಾ ಪ್ರಾಸ್ತಾವಿಕ ಮಾತನಾಡಿ, ಈ ಕ್ರೀಡಾಕೂಟದ ಮೂಲಕ ಮಾಸ್ಟರ್ಸ್ ಅಥ್ಲೆಟಿಕ್ಸ್‌ಗಳನ್ನು ಸರ್ಕಾರ ಗುರುತಿಸುವ ಕೆಲಸ ಮಾಡಬೇಕು. ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಜಿಲ್ಲೆಯಿಂದ 60 ಮಂದಿ ಆಯ್ಕೆಯಾಗಿದ್ದರು. ಆದರೆ ಆರ್ಥಿಕ ಕೊರತೆಯಿಂದಾಗಿ 26 ಮಂದಿಗೆ ಮಾತ್ರ ಭಾಗವಹಿಸಲು ಸಾಧ್ಯವಾಗಿದೆ. ಇಂತಹ ಕ್ರೀಡಾಪಟುಗಳಿಗೆ ಆರ್ಥಿಕ ಶಕ್ತಿಯನ್ನು ತುಂಬಿಸುವ ಕೆಲಸ ಮುಂದಿನ ಬಜೆಟ್‌ನಲ್ಲಿ ಸರ್ಕಾರ ಮಾಡಬೇಕು ಎಂದರು.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಮುಡಾ ಮಾಜಿ ಅಧ್ಯಕ್ಷ ತೇಜೋಮಯ, ಪಾಲಿಕೆ ವಿಪಕ್ಷ ನಾಯಕ ಪ್ರವೀಣ್‌ಚಂದ್ರ ಆಳ್ವ, ರಾಜೀವ್ ಗಾಂಧಿ ವಿವಿ ಸಿಂಡಿಕೇಟ್ ಸದಸ್ಯ ಡಾ.ಇಫ್ತಿಕರ್ ಆಲಿ, ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಎಚ್. ಜಯರಾಮಯ್ಯ, ದ.ಕ. ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ.ಜಗದೀಶ್ ಶೆಟ್ಟಿ, ಕಾರ್ಯದರ್ಶಿ ಪ್ರಚಿತಾ ಕೆ, ಖಜಾಂಚಿ ನಂದ ಕುಮಾರ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕ ರವಿ ನಾಯಕ್ ಇದ್ದರು.
ಸಾಧಕರಿಗೆ ಸನ್ಮಾನರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಕ್ರೀಡಾ ಸಾಧಕರಾದ ಗಿರಿಧರ ಸಾಲ್ಯಾನ್, ಆನಂದ ಸೋನ್ಸ್, ಮೈಕಲ್ ಡಿಸೋಜಾ, ನೇಮಿರಾಜ್ ಬಳ್ಳಾಲ್, ರಾಧಾಕೃಷ್ಣ, ಹೊನ್ನಯ್ಯ, ರೋಬಿಸ್ಸನ್, ಯು.ಬಿ.ರೈ, ಕುಮಾರಸ್ವಾಮಿ, ಲಕ್ಷ್ಯ ಅವರನ್ನು ಸಚಿವ ನಾಗೇಂದ್ರ ಅವರು ಸನ್ಮಾನಿಸಿದರು.