ಸಾರಾಂಶ
ಇಂಡಿ: ಸಹಕಾರಿ ಸಂಘಗಳು ಸಹಕಾರಿಯಾಗಿ ಕೆಲಸ ಮಾಡುತ್ತಿವೆ. ಇಂದು ಸಹಕಾರಿ ಸಂಸ್ಥೆಗಳು ಸಾಲ, ವಿವಿಧ ಸೌಲಭ್ಯ ನೀಡಿ ಮೇಲುಗೈ ಸಾಧಿಸಿವೆ. ಜನರನ್ನು ಸ್ವಾವಲಂಬಿಗಳನ್ನಾಗಿ ಮಾಡಿದ ಸಹಕಾರಿ ಸಂಘಗಳಿಂದ ವಿಜಯಪುರ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮುನ್ನುಗ್ಗುತ್ತಿರುವುದು ಸಂತಸದ ಸಂಗತಿ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.ಪಟ್ಟಣದಲ್ಲಿ ಬಿಎಲ್‌ಡಿಇ ಸೌಹಾರ್ದ ಸಹಕಾರಿ ಸಂಘದ 7 ನೇ ಶಾಖೆ ಉದ್ಘಾಟಿಸಿ ಮಾತನಾಡಿದರು, ಸಹಕಾರಿ ಸಂಘಗಳು ರೈತರು, ಆರ್ಥಿಕ ದುರ್ಬಲರ ಏಳಿಗೆಗೆ ಶ್ರಮಿಸಬೇಕು. ಹಾಗಾದಾಗ ಮಾತ್ರ ಸರ್ಕಾರದ ಕಾರ್ಯಕ್ರಮಗಳು ಬಡವರ ಅಭಿವೃದ್ದಿ ಕಾರ್ಯಕ್ರಮಗಳಾಗಿರುತ್ತವೆ. ಇಂಡಿಯಲ್ಲಿ ಆರಂಭಗೊಂಡ 7 ನೇ ಶಾಖೆ ಉತ್ತಮವಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸಿದರು.ಉದ್ಯಮಿ ಶ್ರೀಪತಿಗೌಡ ಬಿರಾದಾರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಜನರಿಗೆ ಆರ್ಥಿಕ ವ್ಯವಹಾರ ಮತ್ತು ಉಳಿತಾಯ ಮನೋಭಾವ ಬೆಳೆಸುವಲ್ಲಿ ಸಹಕಾರಿ ಸಂಘದ ಸಾಧನೆ ಇತರರಿಗೆ ಮಾದರಿಯಾಗಿದೆ. ಗ್ರಾಮೀಣ ಭಾಗದ ಹಳ್ಳಿಹಳ್ಳಿಗಳಲ್ಲಿ ಹಾಗೂ ನಗರ ಪ್ರದೇಶದ ವಾರ್ಡ್ ಗಳಲ್ಲಿ ಸಹಕಾರಿ ಸಂಘಗಳನ್ನು ಆರಂಭಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕು. ಬಿಎಲ್‌ಡಿಇ ಸೌಹಾರ್ದ ಸಹಕಾರಿ ಸಂಘ ಈ ಭಾಗದಲ್ಲಿ ಆರ್ಥಿಕ ಪ್ರಗತಿಗೆ ಸಹಕಾರಿಯಾಗಲಿ ಎಂದು ಹೇಳಿದರು.
ಬಂಥನಾಳದ ವೃಷಭಲಿಂಗ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಹಾಗೂ ಸಂಘದ ಅಧ್ಯಕ್ಷ ಸುನೀಲಗೌಡ ಪಾಟೀಲ, ಸ್ಥಳೀಯ ಮಂಡಳಿ ಅಧ್ಯಕ್ಷ ಶ್ರೀಪತಿಗೌಡ ಬಿರಾದಾರ, ಉಪಾಧ್ಯಕ್ಷ ಶರಣಬಸಪ್ಪ ಗುಡ್ಡಗಿ, ನಿರ್ದೇಶಕ ಮಹಾಂತೇಶ ಬಿರಾದಾರ, ಎಸ್.ಎಸ್.ಕನಮಡಿ, ಇಲಿಯಾಸ ಬೊರಾಮಣಿ, ಬಾಳು ಮುಳಜಿ ಇತರರು ಇದ್ದರು.