ಸಾರಾಂಶ
ಹಾವೇರಿ: ನಗರದ ಪಶು ಆಸ್ಪತ್ರೆ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಪಶು ರೋಗ ತನಿಖಾ ಪ್ರಯೋಗಾಲಯ ಮತ್ತು ಮಾಹಿತಿ ಕೇಂದ್ರವನ್ನು ಬುಧವಾರ ಪಶು ಸಂಗೋಪನೆ ಹಾಗೂ ರೇಷ್ಮೆ ಖಾತೆ ಸಚಿವ ಕೆ. ವೆಂಕಟೇಶ ಉದ್ಘಾಟಿಸಿದರು.
ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆ ಸಹಯೋಗದೊಂದಿಗೆ ನಿರ್ಮಿಸಿದ್ದ ನೂತನ ಕಟ್ಟಡವನ್ನು ಸಚಿವರು ಲೋಕಾರ್ಪಣೆಗೊಳಿಸಿದರು.ಇದೇ ವೇಳೆ ಹಾಜರಿದ್ದ ಪಶು ಆಸ್ಪತ್ರೆಯ ವೈದ್ಯಾಕಾರಿಗಳು ಹಾವೇರಿ ತಾಲೂಕು ಹಾಂವಸಿ, ಬಸಾಪುರ ಗ್ರಾಮಗಳಲ್ಲಿ ಹೊಸ ಪಶು ಚಿಕಿತ್ಸಾಲಯ ಮಂಜೂರು ಮಾಡುವುದು, ಮರೋಳ, ಕೋಣನತಂಬಿಗಿ, ಹಾವನೂರ ಗ್ರಾಮಗಳಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡುವುದು, ಹೊಸರಿತ್ತಿ, ನೆಗಳೂರು, ಹಾವನೂರ ಸೇರಿದಂತೆ ವಿವಿಧೆಡೆ ಖಾಲಿ ಇರುವ ಡಿ ದರ್ಜೆ ಸಿಬ್ಬಂದಿ ಭರ್ತಿಗೆ ಕ್ರಮವಹಿಸುವಂತೆ ಮನವಿ ಸಲ್ಲಿಸಿದರು. ಜತೆಗೆ ಸವಣೂರು ತಾಲೂಕು ಕಳಸೂರು ಗ್ರಾಮಕ್ಕೆ ಪಶು ಆಸ್ಪತ್ರೆ ನಿರ್ಮಾಣಕ್ಕೆ ಗ್ರಾಮಸ್ಥರು ಬೇಡಿಕೆಯನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಧಾನಸಭೆ ಉಪ ಸಭಾಧ್ಯಕ್ಷ ಹಾಗೂ ಶಾಸಕ ರುದ್ರಪ್ಪ ಲಮಾಣಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎಫ್.ಎನ್.ಗಾಜಿಗೌಡ್ರ, ಹಾವೇಮುಲ್ ಅಧ್ಯಕ್ಷ ಬಸವರಾಜ ಅರಬಗೊಂಡ, ಹಾಲು ಒಕ್ಕೂಟದ ನಿರ್ದೇಶಕ ಹನುಮಂತಗೌಡ ಭರಮಣ್ಣವರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೆನಹಳ್ಳಿ, ಮುಖಂಡರಾದ ಎಂ.ಎಂ. ಮೈದೂರ, ಶ್ರೀಧರ ದೊಡ್ಡಮನಿ, ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಎಸ್.ವಿ. ಸಂತಿ, ಸಹಾಯಕ ನಿರ್ದೇಶಕ ಡಾ. ಪರಮೇಶ್ವರ ಹುಬ್ಬಳ್ಳಿ ಸೇರಿದಂತೆ ಮತ್ತಿತರರು ಹಾಜರಿದ್ದರು.ರೈತ ಸಂಘದಿಂದ ಸಚಿವರಿಗೆ ಮನವಿಬ್ಯಾಡಗಿ:
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರಾದ ಡಾ. ಎಚ್.ವಿ. ವೆಂಕಟೇಶ ಅವರಿಗೆ ರೈತ ಸಂಘದ ಕಾರ್ಯಕರ್ತರು ರೇಷ್ಮೆ ಬೆಳೆಗಾರ ಸಮಸ್ಯೆ ಕುರಿತು ಬುಧವಾರ ಮನವಿ ಸಲ್ಲಿಸಿದರು.ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಹಾಗೂ ಬ್ಯಾಡಗಿ ತಾಲೂಕಿನಲ್ಲಿ ಅತಿಹೆಚ್ಚು ರೇಷ್ಮೆ ಬೆಳೆಯ ರೈತರಿದ್ದಾರೆ. ಕೆಲವೊಂದು ಗ್ರಾಮದಲ್ಲಿ ರೇಷ್ಮೆ ಬೆಳೆ ನಂಬಿ ಜೀವನ ನಡೆಸುತ್ತಿದ್ದು, ಈ ಹಿಂದೆ ರೈತರಿಗೆ ರೇಷ್ಮೆಯಿಂದ ಸಾಕಷ್ಟು ಲಾಭ ಸಿಗುತ್ತಿತ್ತು. ಆದರೆ, ಈಗ ಹಲವು ಕಾರಣಗಳಿಂದ ರೈತರು ನಷ್ಟದ ಹಾದಿಯಲ್ಲಿದ್ದಾರೆ. ಚಾಕಿ ಕೇಂದ್ರಗಳಿಂದ ರೈತರಿಗೆ ಬಾರಿ ಪ್ರಮಾಣದಲ್ಲಿ ಮೋಸ ವಾಗುತಿದ್ದು, ಈ ಕುರಿತು ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಗಳು ರೈತರಿಗೆ ನ್ಯಾಯ ಕೊಡಿಸುವಲ್ಲಿ ವಿಫಲವಾಗಿದ್ದಾರೆ.ಇಲಾಖೆಯಲ್ಲಿ ಸಿಬ್ಬಂದಿ ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಪರಿಣಾಮ ರೈತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಸುಮಾರು ನಾಲ್ಕೈದು ವರ್ಷಗಳಿಂದ ರೇಷ್ಮೆ ಬೆಳೆಗಾರರ ಕಚ್ಚಾ ಹಾಗೂ ಪಕ್ಕಾ ಮನೆಗಳಿಗೆ ಸಹಾಯಧನ ಬಿಡುಗಡೆಯಾಗಿಲ್ಲ. ರೇಷ್ಮೆ ಕೃಷಿಗೆ ಅಗತ್ಯ ಔಷಧಿ, ಚಂದ್ರಿಕೆ ಇತ್ಯಾದಿಗಳ ಪೂರೈಕೆ ಇಲ್ಲದಂತಾಗಿದೆ. ಈ ಕುರಿತು ಸ್ಥಳೀಯ ಅಧಿಕಾರಿಗಳು ರೈತರನ್ನು ನಿರ್ಲಕ್ಷಿಸುತ್ತಿದ್ದಾರೆ. ಕಚೇರಿಯಲ್ಲಿ ಒಬ್ಬರೇ ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಸಕಾಲಕ್ಕೆ ರೈತರಿಗೆ ಸೌಲಭ್ಯ ಸಿಗದಂತಾಗಿದೆ ಎಂದು ದೂರಿದರು.ಇದಕ್ಕೆ ಸ್ಪಂದಿಸಿದ ಸಚಿವರು, ಸ್ಥಳೀಯ ಶಾಸಕ ಬಸವರಾಜ ಶಿವಣ್ಣನವರ ಜೊತೆ ಕೆಲಕಾಲ ಚರ್ಚಿಸಿದರು. ಬಳಿಕ ಖಾಯಂ ಹುದ್ದೆ ಸಿಬ್ಬಂದಿ ಇಲ್ಲವಾದಲ್ಲಿ ಗುತ್ತಿಗೆ ಆಧಾರದ ಮೇಲೆ ಸಿಬ್ಬಂದಿ ನೇಮಿಸಿಕೊಳ್ಳಲು ಸೂಚಿಸಿದರು, ಜಿಲ್ಲೆಯ ಕೃಷಿ ಹಾಗೂ ಪಶುಸಂಗೋಪನ ಇಲಾಖೆ ಸಮಸ್ಯೆಗಳಿಗೆ ಶೀಘ್ರದಲ್ಲೆ ನ್ಯಾಯ ಒದಗಿಸುವೆ. ಸಮಸ್ಯೆಗಳ ಇತ್ಯರ್ಥಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಸ್ಪಂದಿಸುವ ಭರವಸೆ ನೀಡಿದರು.
ಈ ವೇಳೆ ರೈತ ಸಂಘದ ತಾಲೂಕಾಧ್ಯಕ್ಷ ರುದ್ರಗೌಡ್ರ ಕಾಡನಗೌಡ್ರ, ಜಾನ್ ಪುನೀತ್, ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ರುದ್ರಪ್ಪ ಹೊಂಕಣ, ನಾಗರಾಜ ಆನ್ವೇರಿ, ಬೀರಪ್ಪ ಬಣಕಾರ, ರಾಜಣ್ಣ ಕಳ್ಳಿಹಾಳ, ಶ್ರೀನಿವಾಸ ಕುರಕುಂದಿ, ಆಶ್ರಯ ಸಮಿತಿ ಅಧ್ಯಕ್ಷ ಮುನ್ನ ಎರೆಶೀಮಿ, ಸದಸ್ಯ ಗಿರೀಶ ಇಂಡಿಮಠ, ದುರ್ಗೇಶ ಗೋಣೆಮ್ಮನವರ, ಶಂಕರ ಕುಸಗೂರು, ದಾನಪ್ಪ ಚೂರಿ ಇತರರಿದ್ದರು.