ಸಾರಾಂಶ
ಜಲಜೀವನ್ ಮಿಷನ್ ಯೋಜನೆಯ ಕುಂದುಕೊರತೆ ಸಭೆ
ಕನ್ನಡಪ್ರಭ ವಾರ್ತೆ ಅರಸೀಕೆರೆಬಿಜೆಪಿ ಸರ್ಕಾರದ ಅವಧಿಯಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಸನ ಜಿಲ್ಲೆಗೆ ಬರುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ವ್ಯಂಗ್ಯವಾಡಿದರು.
ತಾಲೂಕಿನ ಪುರಲೇಹಳ್ಳಿ, ಹಬ್ಬನಘಟ್ಟ, ಡಿಎಂ ಕುರ್ಕೆ ಗ್ರಾಪಂ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಜಲಜೀವನ್ ಮಿಷನ್ ಯೋಜನೆಯ ಕುಂದುಕೊರತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ವಾಸ್ತವ ಗೊತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಳೆಯ ಕಾಮಗಾರಿಗಳನ್ನು ಉದ್ಘಾಟಿಸಲು ಜಿಲ್ಲೆಗೆ ಕರೆ ತರುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.ಜಿಲ್ಲೆಯ ಸಣ್ಣ ಹಳ್ಳಿಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು ಎನ್ನುವ ಸಂಕಲ್ಪ ಪ್ರಧಾನಿ ನರೇಂದ್ರ ಮೋದಿ ಅವರದ್ದಾಗಿದೆ. ಆದ್ದರಿಂದಲೇ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲು ಸಹಸ್ರಾರು ಕೋಟಿ ರು.ಅನುದಾನ ನೀಡಿದ್ದಾರೆ. ಸ್ಥಳೀಯ ಅಧಿಕಾರಿ ವರ್ಗ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯ ಸಾಫಲ್ಯಕ್ಕೆ ಶ್ರಮಿಸಬೇಕು. ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಒಳಗೊಂಡಂತೆ ಎಲ್ಲ ಬಗೆಯ ಮೂಲಸೌಕರ್ಯ ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು. ಕ್ಷೇತ್ರದಲ್ಲಿ ಶೇ.೯೦ರಷ್ಟು ಒಳ್ಳೆಯ ಅಧಿಕಾರಿಗಳಿದ್ದಾರೆ. ಆದರೆ ಕೆಲವರು ಬೇರೆಯವರ ಕಬಂಧ ಬಾಹುವಿಗೆ ಸಿಲುಕಿದ್ದಾರೆ. ಅವರನ್ನು ಹೇಗೆ ಬಿಡಬಿಸಬೇಕು ಎನ್ನುವುದು ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಲ್ಲೆಗೆ ಬಿಡಿಗಾಸಿನ ಅನುದಾನ ನೀಡಿಲ್ಲ. ಆದರೂ ಸರ್ಕಾರಿ ಕಾರ್ಯಕ್ರಮಗಳ ನೆಪದಲ್ಲಿ ಮತಯಾಚನೆಗೆ ಬರುತ್ತಿದ್ದಾರೆ. ಇವರ ನಾಟಕಕ್ಕೆ ತಕ್ಕಪಾಠ ಕಲಿಸುವ ಪ್ರಜ್ಞಾವಂತಿಕೆ ಮತದಾರರಲ್ಲಿದೆ ಎಂದು ತಿರುಗೇಟು ನೀಡಿದರು.
ತೆಂಗು ಬೆಳೆಗಾರರಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದು ಕೊಬ್ಬರಿ ನೋಂದಣಿಯಲ್ಲಿ ಆಗಿದ್ದ ಲೋಪವನ್ನು ಪತ್ತೆಹಚ್ಚಿ ನೋಂದಣಿ ಸಂಪೂರ್ಣ ರದ್ದು ಮಾಡಿಸಿದ್ದೇನೆ. ಇದರಿಂದ ನೈಜ ರೈತರಿಗೆ ಬೆಂಬಲ ಬೆಲೆ ಯೋಜನೆಯ ಪ್ರಯೋಜನ ತಲುಪಲಿದೆ. ಕಳೆದ ಮೂರ‍್ನಾಲ್ಕು ವರ್ಷದಿಂದ ಸಮರ್ಪಕ ಕುಡಿಯುವ ನೀರು ದೊರೆಯುತ್ತಿಲ್ಲ, ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸಿದ್ದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಆದೇಶ ಇದುವರೆಗೂ ಜಾರಿಗೊಂಡಿಲ್ಲ. ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಬಸ್ ಸೌಲಭ್ಯ ಕಲ್ಪಿಸುವಂತೆ ಕೇಳಿದರೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಿದ್ದು ನ್ಯಾಯ ಒದಗಿಸಬೇಕು ಎಂದು ಪುರಲೇಹಳ್ಳಿ, ಹರಪನಹಳ್ಳಿ, ಕೋಡಿಹಳ್ಳಿ, ಬ್ಯಾಡರಹಳ್ಳಿ ಸೇರಿದಂತೆ ಹಲವು ಗ್ರಾಮಸ್ಥರು ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಮನವಿ ಮಾಡಿದರು.ಎಲ್ಲವನ್ನೂ ಸಮಾಧಾನದಿಂದ ಆಲಿಸಿದ ಸಂಸದರು ತಕ್ಷಣವೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಕರೆ ಮಾಡಿ ಜನರ ತೊಂದರೆ ಸರಿಪಡಿಸಿ ಎಂದು ತಾಕೀತು ಮಾಡಿದರು.
ಪುರಲೇಹಳ್ಳಿ ಗ್ರಾಪಂ ಅಧ್ಯಕ್ಷೆ ನೀಲಾಬಾಯಿ ರಾಜಾನಾಯ್ಕ್, ಸದಸ್ಯ ಜಯರಾಮ್, ಮುಖಂಡರಾದ ಹೊಸೂರು ಗಂಗಾಧರ್, ಪಂಚಾಕ್ಷರಿ, ಭೋಜಾನಾಯ್ಕ್, ಚಿಕ್ಕಮ್ಮನಹಳ್ಳಿ ನಾಗರಾಜ್, ಕೆಂಕೆರೆ ಕೇಶವಮೂರ್ತಿ, ಶೇಖನಾಯ್ಕ್, ಭೈರಗೊಂಡನಹಳ್ಳಿ ಉಮೇಶ್ ಇದ್ದರು.ಹಬ್ಬನಘಟ್ಟ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕುಂದುಕೊರತೆ ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಪಾಲ್ಗೊಂಡರು.