ದರ್ಗಾ ಸಮಿತಿ ಅಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಸೇರಿದಂತೆ ಹಲವು ಉಲಮಾ-ಉಮರಾಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಾಟೆಕಲ್: ಸುಮಾರು 21 ವರ್ಷಗಳಿಂದ ವಿವಿಧ ಪ್ರಮುಖ ಮೊಹಲ್ಲಾಗಳಲ್ಲಿ ದಅವಾ ಹಾಗೂ ಪಳ್ಳಿ ದರ್ಸ್ಗಳನ್ನು ನಡೆಸಿ, ನೂರಾರು ಶಿಷ್ಯರನ್ನು ಸಮಾಜಕ್ಕೆ ಸಮರ್ಪಿಸಿದ ಪರಪ್ಪು ಐ.ಪಿ. ಅಬ್ದುರ್ರಝ್ಝಾಕ್ ಅಹ್ಸನಿ ಅಲ್ ಅಫ್ಝಲಿ ಉಸ್ತಾದರ ನೇತೃತ್ವದಲ್ಲಿ ನಾಟೆಕಲ್ ಸಮೀಪ ನೂತನವಾಗಿ ಸ್ಥಾಪಿಸಲಾದ ದಾರುಲ್ ಮಅರಿಫ ಎಜುಕೇಶನಲ್ ಟ್ರಸ್ಟ್ನ ಅಧೀನದ ಹಿಫ್ಳ್ ಹಾಗೂ ದರ್ಸ್ ಸಂಸ್ಥೆಯು ನವೆಂಬರ್ 1ರ ಭಾನುವಾರ ಸಂಜೆ ಉದ್ಘಾಟನೆಗೊಂಡಿತು.ಸಂಜೆ 3 ಗಂಟೆಗೆ ಉಳ್ಳಾಲ ಸಯ್ಯಿದ್ ಮದನಿ ಮಖಾಂನಲ್ಲಿ ಅಬ್ದುರ್ರಶೀದ್ ಮದನಿ ಆಲಪ್ಪುಝ ಅವರ ನೇತೃತ್ವದಲ್ಲಿ ಝಿಯಾರತ್ ನಡೆಯಿತು. ದರ್ಗಾ ಸಮಿತಿ ಅಧ್ಯಕ್ಷರಾದ ಹನೀಫ್ ಹಾಜಿ ಉಳ್ಳಾಲ ಸೇರಿದಂತೆ ಹಲವು ಉಲಮಾ-ಉಮರಾಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಅಸರ್ ನಮಾಝಿನ ಬಳಿಕ ಸಂಸ್ಥೆಯ ಆವರಣದಲ್ಲಿ ಅಲ್ ರಾತಿಬುಲ್ ಕುಬ್ರಾ ನಾಗೂರು ಮಜ್ಲಿಸ್ ನಡೆಯಿತು. ಅಸ್ಸಯ್ಯಿದ್ ಅಲವಿ ಅಲ್ ಬುಖಾರಿ ಕರ್ಕಿ ತಂಙಳ್ ಅವರು ಮಜ್ಲಿಸ್ಗೆ ನೇತೃತ್ವ ನೀಡಿ ವಿಶೇಷ ಪ್ರಾರ್ಥನೆ ನಡೆಸಿದರು.ಸಂಸ್ಥೆಯ ಸಾರಥಿ ಐ.ಪಿ. ಅಬ್ದುರ್ರಝ್ಝಾಕ್ ಅಹ್ಸನಿ ಉಸ್ತಾದರು ಪ್ರಾಸ್ತಾವಿಕವಾಗಿ ಮಾತನಾಡಿ, ಇದುವರೆಗೆ ದರ್ಸ್ ಅತ್ಯುತ್ತಮವಾಗಿ ನಡೆಯಲು ಸಹಕರಿಸಿದ ಹಾಗೂ ಪ್ರಸ್ತುತ ಸಹಕಾರ ನೀಡುತ್ತಿರುವ ಸರ್ವರನ್ನೂ ಸ್ಮರಿಸಿ, ಎಲ್ಲರಿಗಾಗಿ ವಿಶೇಷ ಪ್ರಾರ್ಥನೆ ನಡೆಸಿದರು.ಸಂಬಾರತ್ತೋಟ ಜಮಾಅತ್ ಅಧ್ಯಕ್ಷರಾದ ಇಬ್ರಾಹಿಂ ಹಾಜಿ ಸೇರಿದಂತೆ ಹಲವು ಗಣ್ಯರು, ದರ್ಸ್ ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿಗಳು ಹಾಗೂ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮಗ್ರಿಬ್ ನಮಾಝಿನ ಬಳಿಕ ಬಹುಮಾನ್ಯ ಅಸ್ಸಯ್ಯಿದ್ ಪೂಕುಂಞಿ ತಂಙಳ್ ಉದ್ಯಾವರ ಅವರ ದುಆ ಹಾಗೂ ಅಮೂಲ್ಯ ಉಪದೇಶದೊಂದಿಗೆ ದರ್ಸ್ಗೆ ಅಧಿಕೃತ ಚಾಲನೆ ನೀಡಲಾಯಿತು.ಸಂಸ್ಥೆಯ ಅಧೀನದಲ್ಲಿ ದಾರುಲ್ ಮಅರಿಫ ಹಿಫ್ಳುಲ್ ಖುರ್ಆನ್, ದಾರುಲ್ ಮಅರಿಫ ಜನರಲ್ ಮದ್ರಸ, ದಾರುಲ್ ಮಅರಿಫ ಇಂಗ್ಲಿಷ್ ಮೀಡಿಯಂ ಮದ್ರಸ ಹಾಗೂ ದಾರುಲ್ ಮಅರಿಫ ಹನಫಿ ಮದ್ರಸ ಸೇರಿದಂತೆ ವಿವಿಧ ಶೈಕ್ಷಣಿಕ ವಿಭಾಗಗಳು ಕಾರ್ಯನಿರ್ವಹಿಸಲಿವೆ.