ರಾಮನಗರ: ವಿಶೇಷಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನಗಳ ವಿತರಣೆ, ನಗರಸಭೆಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಎನ್‌ಜಿಟಿ ಅನುದಾನದಡಿ ಒಳಚರಂಡಿ ಕಾಮಗಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಚಾಲನೆ ನೀಡಿದರು

ರಾಮನಗರ: ವಿಶೇಷಚೇತನರಿಗೆ ಯಂತ್ರ ಚಾಲಿತ ತ್ರಿಚಕ್ರ ವಾಹನಗಳ ವಿತರಣೆ, ನಗರಸಭೆಯಿಂದ ಕೈಗೊಂಡಿರುವ ವಿವಿಧ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಎನ್‌ಜಿಟಿ ಅನುದಾನದಡಿ ಒಳಚರಂಡಿ ಕಾಮಗಾರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಚಾಲನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಆ‍ವರಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀ ಕ್ಯಾಪ್, ಟೊಯೋಟೊ ಅಕ್ಸಸರಿಸ್, ಭಾಷ್ ಕಂಪನಿಯ ಸಿಎಸ್‌ಆರ್ ಅನುದಾನದಲ್ಲಿ ಜಿಲ್ಲಾ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ವತಿಯಿಂದ 46 ವಿಕಲಚೇತನ ಫಲಾನುಭವಿಗಳಿಗೆ ಹೀರೋ ಮತ್ತು ಟಿವಿಎಸ್ ಕಂಪನಿಯ ಯಂತ್ರ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಿದರು.

ಬಳಿಕ ಕಾಂಗ್ರೆಸ್ ಭವನದ ನಿರ್ಮಾಣ ಕಾಮಗಾರಿ ವೀಕ್ಷಿಸಿದರು. ಅಲ್ಲಿಂದ ನಗರಸಭೆ ಕಚೇರಿಗೆ ಆಗಮಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮಾರ್ಗಮಧ್ಯೆ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಅದ್ಧೂರಿ ಸ್ವಾಗತ ಕೋರಲಾಯಿತು.

ಕೆಂಪೇಗೌಡರ ಪ್ರತಿಮೆ ಅನಾವರಣ:

ನಗರಸಭೆ ಆವರಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವಣ್ಣ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದ ಡಿ.ಕೆ.ಶಿವಕುಮಾರ್‌, ಡಿ.ದೇವರಾಜ ಅರಸು ಸಭಾಂಗಣ ಉದ್ಘಾಟಿಸಿದ ಬಳಿಕ ನಗರಸಭೆಯ ಅವರಣದಲ್ಲಿ ಪ್ರತಿಷ್ಠಾಪಿಸಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಅನಾವರಣಗೊಳಿಸಿ ಪುಷ್ಪಾರ್ಚನೆ ಮಾಡಿದರು.

ಇದೇ ವೇಳೆ ಹಸಿರು ನ್ಯಾಯಾಧಿಕರಣ(ಎನ್‌ಜಿಟಿ) ಅನುದಾನ 22 ಕೋಟಿ ರುಪಾಯಿ ವೆಚ್ಚದ ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು. ಅಲ್ಲಿಂದ ವಾಟರ್ ಟ್ಯಾಂಕ್ ವೃತ್ತದಲ್ಲಿ ನಿರ್ಮಿಸಿರುವ ಕ್ಲಾಕ್ ಟವರ್ ಲೋಕಾರ್ಪಣೆ ಮಾಡಿದರು.

ನಂತರ ಐಜೂರು ವೃತ್ತಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೂಗುಚ್ಛ ನೀಡಿ ಮಲ್ಲಿಗೆ ಹಾರದ ಜೊತೆಗೆ ಬೃಹತ್ ಗಾತ್ರದ ಸೇಬಿನ ಹಾರ ಹಾಕಿ ಬರ ಮಾಡಿಕೊಂಡರು. ಬಳಿಕ ಹಳೇ ಬೆಂಗಳೂರು - ಮೈಸೂರು ರಸ್ತೆಯಲ್ಲಿ ನಿರ್ಮಿಸಿರುವ ಫುಡ್ ಸ್ಟ್ರೀಟ್ ಅನ್ನು ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಿದರು.

ಕಿಟ್ ಗಳ ವಿತರಣೆಗೆ ಚಾಲನೆ:

ಅಲ್ಲಿಂದ ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ನಗರಸಭೆ ಪರವಾಗಿ 11,200 ಮಂದಿ ಅಸಂಘಟಿತ ಕಾರ್ಮಿಕರಿಗೆ ವಿಮಾ ಬಾಂಡ್ , 250 ಸ್ವ-ಸಹಾಯ ಸಂಘಗಳ ಕಚೇರಿಗೆ ಉಪಯುಕ್ತವಾಗುವಂತೆ ಸ್ಟೇಷನರಿ ವಸ್ತುಗಳು ಹಾಗೂ ಸಂಗ್ರಹಕ್ಕೆ ಟ್ರಂಕ್ ವಿತರಣೆ, ದರ್ಜಿ ಸಮುದಾಯದ ಅರ್ಹರಿಗೆ ಹೊಲಿಗೆ ಯಂತ್ರಗಳು, ನಗರಸಭೆ ವ್ಯಾಪ್ತಿಯ ಸುಮಾರು 70 ಮಂದಿ ಟೀ ವ್ಯಾಪಾರಸ್ಥರಿಗೆ ಕಪ್ ಗಳನ್ನು ಸ್ಟೆರಿಲೈಸ್ ಮಾಡುವ ಎಲೆಕ್ಟ್ರಿಕ್ ಸ್ಟೀಮರ್ ಸಾಂಕೇತಿಕವಾಗಿ ವಿತರಿಸಿದರು.

2500 ಮಂದಿ ಬಿದಿ ಬದಿ ವ್ಯಾಪಾರಿಗಳ ಅನುಕೂಲಕ್ಕಾಗಿ ಸ್ಟೇನ್ಲೆಸ್ ಸ್ಟೀಲ್ ಫ್ಲಾಸ್ಕ್ ಗಳು, ಮರಗೆಲಸಗಾರರು ಮತ್ತು ಬಾರ್ ಬೆಂಡರ್ ಗಳಿಗೆ ಟೂಲ್ ಕಿಟ್ ಗಳು, 650 ಮಂದಿ ಆಟೋ ಚಾಲಕರಿಗೆ ಎರಡು ಜೊತೆ ಸಮವಸ್ತ್ರ, 250ಕ್ಕೂ ಹೆಚ್ಚು ಮಂದಿ ಫಿಲೇಚರ್ ಕಾರ್ಮಿಕರಿಗೆ ಸಮವಸ್ತ್ರ, 130 ಅಲೆಮಾರಿ ಕುಟುಂಬಗಳು ಸ್ವಾವಲಂಭಿಗಳಾಗಲು ನೆರವಿನ ಸೌಲಭ್ಯವನ್ನು ವಿತರಿಸುವ ಕಾರ್ಯಕ್ಕೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಾಲಕೃಷ್ಣ, ಶಾಸಕರಾದ ಯೋಗೇಶ್ವರ್, ಎಂಎಲ್ಸಿ ಎಸ್. ರವಿ, ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಕೆಎಂಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್, ಜಿಲ್ಲಾಧಿಕಾರಿ ಯಶವಂತ್ ವಿ ಗುರುಕರ್, ಎಸ್ಪಿ ರೋಹನ್ ಜಗದೀಶ್, ಜಿಪಂ ಸಿಇಒ ಅನ್ಮೋಲ್ ಜೈನ್ ಮತ್ತಿತರರು ಹಾಜರಿದ್ದರು.

5ಕೆಆರ್ ಎಂಎನ್ 4,5,6.ಜೆಪಿಜಿ

4.ರಾಮನಗರ ನಗರಸಭೆ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿರುವ ನಾಡಪ್ರಭು ಕೆಂಪೇಗೌಡ ಪ್ರತಿಮೆಯನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಿದರು.

5.ರಾಮನಗರ ನಗರಸಭೆ ಆವರಣದಲ್ಲಿ ಡಿ.ದೇವರಾಜ ಅರಸು ಸಭಾಂಗಣ ಉದ್ಘಾಟಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಡಿ.ದೇವರಾಜ ಅರಸುರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

6.ರಾಮನಗರದ ವಾಟರ್ ಟ್ಯಾಂಕ್ ವೃತ್ತದಲ್ಲಿ ನಿರ್ಮಿಸಿರುವ ಕ್ಲಾಕ್ ಟವರ್ ಅನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಾರ್ಪಣೆ ಮಾಡಿದರು.