21ರಂದು ಜಿಲ್ಲಾ ಸಹಕಾರ ಬ್ಯಾಂಕ್‌ ಶತಮಾನೋತ್ಸವ ಭವನ ‘ಉನ್ನತಿ’ ಉದ್ಘಾಟನೆ

| Published : Jan 13 2024, 01:33 AM IST

21ರಂದು ಜಿಲ್ಲಾ ಸಹಕಾರ ಬ್ಯಾಂಕ್‌ ಶತಮಾನೋತ್ಸವ ಭವನ ‘ಉನ್ನತಿ’ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಶತಮಾನೋತ್ಸವ ಭವನ ‘ಉನ್ನತಿ’ಯ ಉದ್ಘಾಟನಾ ಸಮಾರಂಭ 21 ರಂದು ನಡೆಯಲಿದೆ. ಜ.19 ಮತ್ತು 20ರಂದು ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ವಾಹನ ಮೇಳ ಯಂತ್ರೋಪಕರಣಗಳ ಹಾಗೂ ಕೃಷಿ ಸಾಲ ಮೇಳ ಆಯೋಜಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ ಶತಮಾನ ಪೂರ್ಣಗೊಳಿಸಿರುವ ಹಿನ್ನೆಲೆ ಮಡಿಕೇರಿಯಲ್ಲಿ ರು.8.44 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಲಾಗಿರುವ ನೂತನ ಶತಮಾನೋತ್ಸವ ಭವನ ‘ಉನ್ನತಿ’ಯ ಉದ್ಘಾಟನಾ ಸಮಾರಂಭ 21 ರಂದು ನಡೆಯಲಿದೆ.ನಗರದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ಉದ್ದೇಶಿತ ಕಟ್ಟಡವನ್ನು ಎರಡು ವರ್ಷಗಳ ಅಲ್ಪಾವಧಿಯಲ್ಲಿ ನಿರ್ಮಿಸಲಾಗಿದ್ದು, ಪ್ರಗತಿಯ ಪ್ರತೀಕವಾಗಿ ‘ಉನ್ನತಿ’ ಎಂದು ಹೆಸರಿಡಲಾಗಿದೆ ಎಂದರು.ಶತಮಾನೋತ್ಸವ ಸಂಭ್ರಮದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು,14ರಂದು ಸಂಜೆ 7 ಗಂಟೆಗೆ ನೂತನ ಶತಮಾನೋತ್ಸವ ಕಟ್ಟಡದ ವಾಸ್ತು ಪೂಜೆ ಮತ್ತು ವಾಸ್ತು ಬಲಿ, ಜ.15 ರಂದು ಬೆಳಗ್ಗೆ 7 ಗಂಟೆಗೆ ಗಣಹೋಮ ಹಾಗೂ 10.30ಕ್ಕೆ ಸತ್ಯನಾರಾಯಣ ಪೂಜೆ ನಡೆಯಲಿದೆ.ಜ.19 ಮತ್ತು 20ರಂದು ಬ್ಯಾಂಕ್ ಗ್ರಾಹಕರು, ಕೃಷಿಕರು ಹಾಗೂ ಜಿಲ್ಲೆಯ ಜನರಿಗಾಗಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಗಾಂಧಿ ಮೈದಾನದಲ್ಲಿ ಜಿಲ್ಲಾ ಮಟ್ಟದ ವಾಹನ ಮೇಳ ಯಂತ್ರೋಪಕರಣಗಳ ಹಾಗೂ ಕೃಷಿ ಸಾಲ ಮೇಳ ಆಯೋಜಿಸಲಾಗಿದೆ. ಸಾಲ ಮೇಳದಂದು ಬ್ಯಾಂಕ್ ವತಿಯಿಂದ ವಾಹನ ಖರೀದಿಗಾಗಿ ಪಡೆಯುವ ಸಾಲದ ಮೊತ್ತದ ಮೇಲೆ ಶೇ.5ರಷ್ಟು ಹಾಗೂ ಕೃಷಿ ಉಪಯೋಗಿ ಯಂತ್ರೋಪಕರಣಗಳ ಖರೀದಿದಾರರಿಗೆ ಸಾಲದ ಮೊತ್ತದ ಮೇಲೆ ಶೇ.7ರಷ್ಟು ರಿಯಾಯಿತಿ ನೀಡಲಾವುದು. ಸಾಲದ ಮೇಲಿನ ಸಂಸ್ಕರಣಾ ಶುಲ್ಕಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.ಜ.21 ರಂದು ಬೆಳಿಗ್ಗೆ 10 ಗಂಟೆಗೆ ಬ್ಯಾಂಕ್ ನ ಉನ್ನತಿ ಭವನವನ್ನು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಉದ್ಘಾಟಿಸಲಿದ್ದಾರೆ. ಆಡಳಿತ ಮಂಡಳಿ ಸಭಾಂಗಣವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ, ಬ್ಯಾಂಕಿನ ಭದ್ರತಾ ಕೊಠಡಿಯನ್ನು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಉದ್ಘಾಟಿಸಲಿದ್ದಾರೆ. ಕಾವೇರಿ ಪ್ರತಿಮೆಯನ್ನು ಶಾಸಕ ಡಾ.ಮಂತರ್ ಗೌಡ, ಬ್ಯಾಂಕ್ ನ ಸ್ಥಾಪಕಾಧ್ಯಕ್ಷ ರಾವ್‌ ಬಹದ್ದೂರ್ ಕೊಡಂದೇರ ಕುಟ್ಟಯ್ಯ ಅವರ ಪ್ರತಿಮೆಯನ್ನು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಅನಾವಣಗೊಳಿಸಲಿದ್ದಾರೆ. ದಿ.ಪಂದ್ಯಂಡ ಬೆಳ್ಯಪ್ಪ ಸಭಾಂಗಣವನ್ನು ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿ ಪ್ರಕಾಶ್ ಉದ್ಘಾಟಿಸಲಿದ್ದಾರೆ ಎಂದರು..ಬ್ಯಾಂಕ್ ನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ನಿರ್ದೇಶಕರಾದ ಹೊಟ್ಟೆಯಂಡ ರಮೇಶ್‌, ಕನ್ನಂಡ ಸಂಪತ್, ಕಿಮ್ಮುಡಿರ ಜಗದೀಶ್ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಮಾಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.