ಮಂಗಳೂರಲ್ಲಿ ಬಾಲಕಿಯರ ಕ್ರೀಡಾ ವಸತಿ ನಿಲಯ ಲೋಕಾರ್ಪಣೆ

| Published : Aug 19 2024, 12:53 AM IST

ಸಾರಾಂಶ

2220 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಟ್ಟಡವು 2 ಮಹಡಿಗಳನ್ನು ಒಳಗೊಂಡಿದೆ. 10 ಕೊಠಡಿಗಳು, 10 ಶೌಚಾಲಯ, 10 ಸ್ನಾನಗೃಹವಿದೆ. ಸುಮಾರು 50 ರಿಂದ 60 ಬಾಲಕಿಯರಿಗೆ ವಸತಿ ಸೌಲಭ್ಯವನ್ನು ಇಲ್ಲಿ ಒದಗಿಸಬಹುದಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕ್ರೀಡಾ ಕ್ಷೇತ್ರದ ಅಭಿವೃದ್ಧಿ ಸಲುವಾಗಿ ಕ್ರೀಡಾಪಟುಗಳಿಗೆ ತರಬೇತಿ ನೀಡುವುದು ಸಹಿತ ಸೂಕ್ತ ಮಾರ್ಗದರ್ಶನ ನೀಡಲು ವಿಶೇಷ ಕ್ರೀಡಾ ಕಾರ್ಯಯೋಜನೆಯನ್ನು ಜಿಲ್ಲಾಡಳಿತದ ವತಿಯಿಂದ ಶೀಘ್ರದಲ್ಲಿ ಸಿದ್ದಪಡಿಸಲಾಗುವುದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಮಂಗಳಾ ಕ್ರೀಡಾಂಗಣದ ಬಳಿ ನಿರ್ಮಿಸಿರುವ ಬಾಲಕಿಯರ ಕ್ರೀಡಾ ವಸತಿ ನಿಲಯವನ್ನು ಗುರುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.ಸರ್ಕಾರ ಮಾತ್ರವಲ್ಲ, ಸಾರ್ವಜನಿಕ ನೆಲೆಯಿಂದಲೂ ಕ್ರೀಡಾಪಟುಗಳಿಗೆ ಅನುಕೂಲ ಮಾಡಿಕೊಡುವ ವ್ಯವಸ್ಥೆಗೆ ಆದ್ಯತೆ ನೀಡಬೇಕು. ನಮ್ಮ ಜಿಲ್ಲೆಯಲ್ಲಿ ಯಾವ ಕ್ರೀಡೆಗೆ ಹೆಚ್ಚು ಆದ್ಯತೆ ಇದೆ ಎಂಬುದನ್ನು ಮನಗಂಡು ಆ ಕ್ರೀಡೆಗೆ ಹೆಚ್ಚು ಒತ್ತು ನೀಡಬೇಕಿದೆ. ಇದಕ್ಕಾಗಿ ಪ್ರತ್ಯೇಕ ಕಾರ್ಯಯೋಜನೆ ರೂಪಿಸುವ ಅಗತ್ಯವಿದೆ. ಜಿಲ್ಲಾಧಿಕಾರಿ, ಶಾಸಕರು ಸಹಿತ ಜನಪ್ರತಿನಿಧಿಗಳ ಜತೆಗೆ ಈ ಕುರಿತಂತೆ ವಿಸ್ತೃತ ಚರ್ಚೆ ನಡೆಸಿ ಒಂದೆರಡು ತಿಂಗಳೊಳಗೆ ಅಂತಿಮ ರೂಪುರೇಷೆ ಸಿದ್ದಪಡಿಸಲಾಗುವುದು ಎಂದರು.ಅಧ್ಯಕ್ಷತೆ ವಹಿಸಿದ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಕ್ರೀಡಾ ಯೋಜನೆಗೆ ಮುಖ್ಯ ಅನುದಾನ ನೀಡುವ ಜತೆಗೆ ವ್ಯವಸ್ಥೆ ನಿರ್ವಹಣೆಗೆ ಹಣ ಮೀಸಲಿಡಬೇಕಿದೆ. ನೆಹರೂ ಮೈದಾನದ ಪಕ್ಕದಲ್ಲಿ ಖಾಲಿ ಇರುವ ಜಾಗದಲ್ಲಿ ಕಬಡ್ಡಿ, ಕುಸ್ತಿ ತರಬೇತಿಗೆ ಮೀಸಲಿಡಬೇಕಿದೆ ಎಂದರು.

ಬೆಂಗ್ರೆಯಲ್ಲಿ ಗಾಲ್ಫ್‌ ಕೋರ್ಸ್‌ಗೆ ಮೀಸಲಿಟ್ಟಜಾಗವನ್ನು ಕ್ರಿಕೆಟ್‌ ಸ್ಟೇಡಿಯಂಗೆ ಮೀಸಲಿಡಬೇಕು ಹಾಗೂ ಕರಾವಳಿ ಉತ್ಸವ ಮೈದಾನದ ಮೂಲಭೂತ ವ್ಯವಸ್ಥೆ ಸುಧಾರಣೆಗೆ ಆದ್ಯತೆ ನೀಡಬೇಕಿದೆ ಎಂದರು.ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಕರ್ನಾಟಕ ಗೇರು ಅಭಿವೃದ್ದಿ ನಿಗಮ ಅಧ್ಯಕ್ಷೆ ಮಮತಾ ಡಿ.ಎಸ್‌.ಗಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿಕೆ., ಮನಪಾ ಸದಸ್ಯರಾದ ಸಂಧ್ಯಾ ಮೋಹನ್‌ ಆಚಾರ್‌, ಎ.ಸಿ.ವಿನಯ್‌ರಾಜ್‌, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌, ಜಿಲ್ಲಾ ಪಂಚಾಯತ್‌ ಸಿಇಒ ಡಾ. ಆನಂದ್‌, ಪ್ರೊಬೆಷನರಿ ಅಧಿಕಾರಿ ಶ್ರವಣ್‌ ಕುಮಾರ್‌ ಇದ್ದರು.ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಪ್ರದೀಪ್‌ ಡಿಸೋಜಾ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

60 ಬಾಲಕಿಯರಿಗೆ ವಸತಿ ಸೌಲಭ್ಯ2220 ಚ.ಅಡಿ ವಿಸ್ತೀರ್ಣದಲ್ಲಿ ನಿರ್ಮಾಣವಾಗಿರುವ ಕಟ್ಟಡವು 2 ಮಹಡಿಗಳನ್ನು ಒಳಗೊಂಡಿದೆ. 10 ಕೊಠಡಿಗಳು, 10 ಶೌಚಾಲಯ, 10 ಸ್ನಾನಗೃಹವಿದೆ. ಸುಮಾರು 50 ರಿಂದ 60 ಬಾಲಕಿಯರಿಗೆ ವಸತಿ ಸೌಲಭ್ಯವನ್ನು ಇಲ್ಲಿ ಒದಗಿಸಬಹುದಾಗಿದೆ.