ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರಿನ ಬೆಂಗ್ರೆ ಪರಿಸರದ ಸುಮಾರು 600 ಕುಟುಂಬಗಳಿಗೆ 1994 ನೇ ಇಸವಿಯಲ್ಲಿ ಕೊಡಲಾಗಿದ್ದ ಹಕ್ಕುಪತ್ರಗಳಲ್ಲಿ ಚೆಕ್ ಬಂದಿ ಹಾಗೂ ಸರ್ವೇ ನಂಬರ್ ಇಲ್ಲದ ಮನೆಗಳಿಗೆ ಹೊಸದಾಗಿ ತಿದ್ದುಪಡಿ ಮಾಡಿ 2023 ರ ಜನವರಿ- ಫೆಬ್ರವರಿ ವೇಳೆ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ನಂತರದ ದಿನಗಳಲ್ಲಿ ಸ್ಥಗಿತಗೊಂಡಿದ್ದ ಮುಂದಿನ ಪ್ರಕ್ರಿಯೆಗಳು ಈಗ ಮತ್ತೆ ಚಾಲನೆಗೊಂಡಿವೆ ಎಂದು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಹೇಳಿದರು.ಕಳೆದ ವರ್ಷ ಹಕ್ಕುಪತ್ರಗಳನ್ನು ಪಡೆದುಕೊಂಡಿದ್ದ 600 ಕುಟುಂಬಗಳು ನಿರಪೇಕ್ಷಣಾ ಪತ್ರಕ್ಕಾಗಿ (ಎನ್‌ಒಸಿ) ಮಂಗಳೂರಿನ ಕಂದಾಯ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ ಸಂದರ್ಭದಲ್ಲಿ ಚುನಾವಣೆಗಳು ಎದುರಾಗಿ ಎಲ್ಲ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದವು. ಇದೀಗ ಮತ್ತೆ ಈ ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಬಂಧಪಟ್ಟ ಎಲ್ಲ ಅಧಿಕಾರಿಗಳ ಸಭೆಯನ್ನು ನಡೆಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಗಳೂರಿಗೆ ಆಗಮಿಸಿದ್ದಾಗ ಈ ವಿಚಾರವನ್ನು ಗಮನಕ್ಕೆ ತಂದಿದ್ದಲ್ಲದೇ, ಎರಡೆರಡು ಬಾರಿ ಅಧಿವೇಶನದಲ್ಲೂ ಪ್ರಸ್ತಾಪಿಸಿ ಕಂದಾಯ ಸಚಿವರ ಗಮನಕ್ಕೂ ತರಲಾಗಿತ್ತು. ಜೊತೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳ ಜೊತೆಯಲ್ಲೂ ಚರ್ಚೆ ನಡೆಸಲಾಗಿದ್ದು ಶೀಘ್ರದಲ್ಲೇ ನಿರಪೇಕ್ಷಣಾ ಪತ್ರ ಲಭಿಸಲಿದೆ. ಕೂಡಲೇ ಗ್ರಾಮ ಲೆಕ್ಕಾಧಿಕಾರಿಯವರ ಕಚೇರಿಯನ್ನು ಸಂಪರ್ಕಿಸಿ ನಿರಪೇಕ್ಷಣಾ ಪತ್ರವನ್ನು (ಎನ್‌ಒಸಿ) ಪಡೆದುಕೊಂಡು ಅದನ್ನು ಪಾಲಿಕೆಗೆ ಸಲ್ಲಿಸಿ ಖಾತಾವನ್ನು ಪಡೆದುಕೊಳ್ಳುವಂತೆ ಶಾಸಕರು ಪ್ರಕಟಣೆಯಲ್ಲಿ ತಿಳಿಸಿದರು.
ಮರು ಹಣ ಪಾವತಿಗೆ ಆಕ್ಷೇಪ: ಇನ್ನು ಈ ಪರಿಸರದ ಉಳಿದ ಸುಮಾರು 200ಕ್ಕೂ ಅಧಿಕ ಕುಟುಂಬಗಳು 1994ನೇ ಇಸವಿಯಲ್ಲಿ ಹಕ್ಕು ಪತ್ರವನ್ನು ಪಡೆದುಕೊಳ್ಳುವಾಗ ಸರ್ಕಾರಕ್ಕೆ ಹಣ ಪಾವತಿ ಮಾಡಿದ ಬಗ್ಗೆ ದಾಖಲೆಗಳು ಲಭ್ಯವಿಲ್ಲದೇ ತಾಂತ್ರಿಕ ದೋಷವುಂಟಾಗಿತ್ತು. ಹಾಗಾಗಿ ಅವರೆಲ್ಲರೂ ಮತ್ತೆ ಸರ್ಕಾರಕ್ಕೆ ಹಣವನ್ನು ಪಾವತಿಸಬೇಕಾಗಿ ನೂತನ ಸರ್ಕಾರ ಆದೇಶ ಹೊರಡಿಸಿದ್ದು ಈ ಬಗ್ಗೆ ನನ್ನ ಆಕ್ಷೇಪವಿದೆ ಎಂದಿದ್ದಾರೆ.