ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯಪಾಲರು ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ಬಿಜೆಪಿ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಇಂತಹ ವರ್ತನೆ ಖಂಡಿಸಿ ಆ.೧೯ರ ಸೋಮವಾರ ಬೆಳಿಗ್ಗೆ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಗೃಹಮಂಡಳಿ ಅಧ್ಯಕ್ಷ ಕೆ.ಎಂ. ಶಿವಲಿಂಗೇಗೌಡ ತಿಳಿಸಿದರು.ತುರ್ತು ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಈ ರಾಜ್ಯದಲ್ಲಿ ರಾಜಕೀಯ ಷಡ್ಯಂತ್ರ ನಡೆಯುತ್ತಿದ್ದು, ರಾಜ್ಯಪಾಲರು ಮುಖ್ಯಮಂತ್ರಿಗಳ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದಾರೆ. ನೀವು ಬಿಜೆಪಿ ಅವರ ಕೈಗೊಂಬೆಯಾಗಿ, ರಾಜ್ಯಪಾಲರ ಕಚೇರಿಯನ್ನೇ ಬಿಜೆಪಿ ಮುಖಂಡರ ಅಂಗಳವನ್ನಾಗಿ ಮಾಡಿಕೊಂಡಿದ್ದಾರೆ. ಕೇಂದ್ರ ಸರ್ಕಾರದ ಏಜೆಂಟರ ರೀತಿ ವರ್ತಿಸುತ್ತಿದ್ದಾರೆ. ರಾಜ್ಯಪಾಲರ ಕಚೇರಿಯನ್ನು ಅಪವಿತ್ರ ಮಾಡುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.ಇಡೀ ರಾಜ್ಯಾದ್ಯಂತ ಸೋಮವಾರ ಪ್ರತಿಭಟನೆ ಮಾಡಲು ಕೆಪಿಸಿಸಿ ಅಧ್ಯಕ್ಷರು ಆದೇಶ ನೀಡಿದ್ದಾರೆ. ಬಿಜೆಪಿ-ಜೆಡಿಎಸ್ ಒಕ್ಕೂಟ ಷಡ್ಯಂತ್ರದ ರಾಜಕಾರಣ ಮಾಡುತ್ತಿದ್ದು, ಬಿಜೆಪಿಯವರು ಯಾವತ್ತೂ ಜನತೆಯ ಬಹುಮತದಿಂದ ಆರಿಸಿಕೊಂಡು ಅಧಿಕಾರ ಮಾಡಿಲ್ಲ. ಪಾದಯಾತ್ರೆ ಮಾಡಿ ವೈಯಕ್ತಿಕವಾಗಿ ಕಿತ್ತಾಡಿಕೊಂಡು ಮುಗಿಸಿದ್ರು. ಪಾದಯಾತ್ರೆಯಲ್ಲಿ ಸಿದ್ದರಾಮಯ್ಯ ಇಂತಹ ಅಪರಾಧ ಮಾಡವ್ರೆ ಅಂತ ಹೇಳಲಿಲ್ಲ. ರಾಜ್ಯಪಾಲರು ಮೊದಲು ಶೋಕಾಸ್ ನೋಟಿಸ್ ಕೊಟ್ರು. ಎಲ್ಲರಿಂದಲೂ ಸಿದ್ದರಾಮಯ್ಯ ಅವರ ಮೇಲೆ ಕೇಸ್ ಹಾಕಿಸಿದ್ದಾರೆ. ಸಿದ್ದರಾಮಯ್ಯ ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಅನುಮತಿ ಕೊಟ್ಟು ಈಗ ಕೇಸ್ ಹಾಕ್ಸಿದ್ದಾರೆ. ಒಂದು ಪ್ರಿಲಿಮಿನರಿ ತನಿಖೆ ಮಾಡದೆ ಅನುಮತಿ ನೀಡಿದ್ದಾರೆ.
ಸಿದ್ದರಾಮಯ್ಯ ಅವರಿಗೆ ಮಸಿ ಬಳೆಯಲು, ಕಪ್ಪು ಚುಕ್ಕೆ ಇಡಲು ಈ ರೀತಿ ಮಾಡುತ್ತಿದ್ದು, ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ರಾಜ್ಯಾದ್ಯಂತ ದೊಡ್ಡ ಮಟ್ಟದ ಆಂದೋಲನ ಆರಂಭವಾಗುತ್ತದೆ ಎಂದು ಎಚ್ಚರಿಸಿದರು. ಬಿಜೆಪಿಯವರು ಕಾಂಗ್ರೆಸ್ ಸರ್ಕಾರ ಅತಂತ್ರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರ ಆಸೆ ಈ ಬಾರಿ ಈಡೇರಲ್ಲ. ಸೋಮವಾರ ಬೆಳಿಗ್ಗೆ ೧೦ ಕ್ಕೆ ಹಾಸನದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು. ಸಿದ್ದರಾಮಯ್ಯ ರಾಜೀನಾಮೆ ಆಗ್ರಹ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ಸಿದ್ದರಾಮಯ್ಯ ರಾಜೀನಾಮೆ ಕೇಳಿ ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಇವರನ್ನು ಕೆಳಗೆ ಇಳಿಸಿದ್ರೆ ಮುಖ್ಯಮಂತ್ರಿ ಸ್ಥಾನಕ್ಕೆ ಕಿತ್ತಾಟ ಶುರುವಾಗುತ್ತದೆ. ಆ ಲಾಭವನ್ನು ನಾವು ಪಡೆಯೋಣ ಎಂದು ಬಿಜೆಪಿಯವರು ಕಾಯುತ್ತಿದ್ದಾರೆ. ಆದ್ರೆ ಈ ಬಾರಿ ಆ ರೀತಿ ಆಗೋದಿಲ್ಲ ಎಂದ ಶಿವಲಿಂಗೇಗೌಡ ಗುಡುಗಿದರು.ಸಿಎಂ ಅವರನ್ನೇ ಟಾರ್ಗೆಟ್ ಮಾಡಿರುವ ರಾಜ್ಯಪಾಲರ ನಡೆ ಅನುಮಾನ ಮೂಡಿಸಿದೆ. ನಾವೆಲ್ಲರೂ ಸಿಎಂ ಬೆನ್ನ ಹಿಂದೆ ಇದ್ದೇವೆ, ಅವರ ಪರವಾಗಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಯಾವ ಷಡ್ಯಂತ್ರಕ್ಕೂ ಸಿಎಂ ಹೆದರುವವರಲ್ಲ, ಅವರ ಹೆಸರಿಗೆ ಕಳಂಕ ತರುವ ಪ್ರಯತ್ನದ ವಿರುದ್ಧ ನಾವೆಲ್ಲರೂ ಪಕ್ಷಾತೀತವಾಗಿ, ಜಾತ್ಯತೀತವಾಗಿ ಹೋರಾಡಬೇಕಿದೆ. ಹಾಗಾಗಿ ನಾಳೆ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿರುವ ಹೋರಾಟಕ್ಕೆ ಹೆಚ್ಚು ಜನರು ಭಾಗಿಯಾಗಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಪ್ರತಿಭಟನೆ ಹೊರಟು ಎನ್.ಆರ್. ವೃತ್ತದ ಮೂಲಕ ಡಿಸಿ ಕಚೇರಿ ತಲುಪಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್, ಮಾಧ್ಯಮ ಪ್ರಚಾರ ಸಮಿತಿ ಅಧ್ಯಕ್ಷರಾದ ದೇವರಾಜೇಗೌಡ, ಮುಖಂಡರಾದ ಬಿ.ಪಿ. ಮಂಜೇಗೌಡ, ಪಟೇಲ್ ಶಿವಪ್ಪ, ಮಲ್ಲಿಗೆವಾಳ್ ದೇವಪ್ಪ ಇತರರು ಇದ್ದರು.*ಹೇಳಿಕೆ1ರಾಜ್ಯದ ಜನಪ್ರಿಯ ಮುಖ್ಯಮಂತ್ರಿ ಹಾಗೂ ಜನಾನುರಾಗಿ ನಾಯಕ ಸಿಎಂ ಸಿದ್ದರಾಮಯ್ಯ. ಅವರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಖಂಡನೀಯ. ರಾಜ್ಯಪಾಲರ ಈ ನಿಲುವಿಗೆ ನಮ್ಮ ಧಿಕ್ಕಾರ ಇದೆ ಎಂದರು. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರ ಹಿಂದೆ ರಾಜಕೀಯ ದುರುದ್ದೇಶ ಅಡಗಿದೆ.
- ಶ್ರೇಯಸ್ ಪಟೇಲ್, ಸಂಸದ