ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗೆ ಮೋಸವಾಗುತ್ತಿದ್ದು, ಪ್ರಧಾನಿ ಮೋದಿಯವರು ಈ ಕುರಿತು ಗಮನ ಹರಿಸಬೇಕೆಂದು ಸಿರಿಗೆರೆ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಶ್ರೀ ಹೇಳಿದರು.ನಗರದ ಶೇರಾಪುರ ಹನುಮಂತ ದೇವರ ದೇವಸ್ಥಾನದ ಕಳಸಾರೋಹಣ ಹಾಗೂ ಹನುಮಂತ ದೇವರ ಪರುವಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಬೆಳೆ ವಿಮಾ ಕಂಪನಿಗೆ ಮಾತ್ರ ದೊಡ್ಡ ಲಾಭವಿದ್ದು ರೈತರಿಗೆ ನಷ್ಟ ಉಂಟಾಗುತ್ತಿದೆ. ಇದನ್ನು ನಾವು ಒಪ್ಪುವುದಿಲ್ಲ ಎಂದರು. ನಷ್ಟಕ್ಕೀಡಾದ ರೈತನಿಗೆ ಪರಿಹಾರ ನೀಡಲು ಜಮೀನಿನ 7 ವರ್ಷದ ಬೆಳೆಯ ಹಾಗೂ ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೆಳೆಗಳ ಸ್ಥಿತಿಗತಿ, ಅಂಕಿ ಅಂಶ ಆಧಾರಿಸುತ್ತಾರೆ, ಯಾವ ಐಎಎಸ್ ಅಧಿಕಾರಿ ಈ ಯೋಜನೆ ನಿಯಮ ರೂಪಿಸಿದ್ದಾರೋ ತಿಳಿಯದು. ನಷ್ಟಕ್ಕೀಡಾದ ರೈತನ ಜಮೀನಿನ 7 ವರ್ಷದ ಅಂಕಿ, ಅಂಶದ ಅಗತ್ಯವಿಲ್ಲ, ಜೊತೆಗೆ ಒಂದು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಭೌಗೋಳಿಕ ಸ್ಥಿತಿಗಳು ಏಕರೂಪವಾಗಿರುವುದಿಲ್ಲ. ನನಗೆ ಪ್ರಧಾನಿ ಮೋದಿಯವರು ಸಂಪರ್ಕಕ್ಕೆ ಸಿಕ್ಕಲ್ಲಿ ಅವರಿಗೆ ಈ ಬಗ್ಗೆ ಮನವರಿಕೆ ಮಾಡಿ ಬೆಳೆ ವಿಮಾ ಕಂಪನಿ ನಿಯಮಾವಳಿ ಬದಲಿಸಲು ಆಗ್ರಹಿಸುತ್ತೇನೆ ಎಂದರು.
ಚಂದ್ರನಲ್ಲಿ ಶೋಧನೆ ಹಂತದ ತಂತ್ರಜ್ಞಾನ ಹೊಂದಿರುವ ನಮಗೆ ವಿವಿಧ ಕಾರಣಗಳಿಗೆ ಬೆಳೆ ಹಾನಿಗೀಡಾಗಿ ನಷ್ಟಕ್ಕೀಡಾದ ರೈತನಿಗೆ ಪರಿಹಾರ ನೀಡಲು ಅಸಂಬದ್ಧ ನಿಯಮಾವಳಿ ಹೊಂದಿರುವುದು ಸರಿಯಲ್ಲ. ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ, ಜನ ಸಾಮಾನ್ಯರ ಪರ ಎಂದರು.ಹೊಸ ಅಥವಾ ನವೀಕರಿಸಿದ ದೇವಾಲಯಗಳಲ್ಲಿ ದೇವರ ಮೂರ್ತಿಗಳಿಗೆ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ನಮಗೆಲ್ಲ ಪ್ರಾಣವಾಯು ಆಗಿರುವ ದೇವರಿಗೆ ಪ್ರಾಣ ಪ್ರತಿಷ್ಠಾಪನೆ ಎನ್ನುವುದು ಸರಿಯಲ್ಲ, ಅದರ ಬದಲು ಭಕ್ತಿ ಪ್ರತಿಷ್ಠಾಪನೆ ಎನ್ನಬೇಕೆಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ದೇವಸ್ಥಾನವು ರಸ್ತೆ ಜಾಗದಲ್ಲಿದೆ ಎಂದು ಶ್ರೀಗಳ ಹೇಳಿದ್ದಾರೆ. ಸೂಕ್ತ ನಿವೇಶನ ಹೊಂದಿ ಸಮುದಾಯ ಭವನ ನಿರ್ಮಿಸಿ ಈ ದೇವಸ್ಥಾನವನ್ನು ಅಭಿವೃದ್ಧಿಪಡಿಸಬೇಕಿದೆ ಎಂದರು. ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಮಾತನಾಡಿ, ಹಲವು ದೇವಸ್ಥಾನಗಳು ಜೂಜುಕಟ್ಟೆಯಾಗಿ ಪರಿವರ್ತನೆಯಾಗಿವೆ. ಆದರೆ ಈ ದೇವಸ್ಥಾನ ಉತ್ತಮವಾಗಿ ನಿರ್ವಹಣೆಯಾಗುತ್ತಿದೆ. ಸಿರಿಗೆರೆ ಶ್ರೀಗಳು ಸರ್ಕಾರಗಳ ಮೇಲೆ ಹಿಡಿತ ಸಾಧಿಸಿ, ರೈತರ ಸಂಕಷ್ಟಗಳಿಗೆ ಸ್ಪಂದಿಸುತ್ತಿರುವುದು ಶ್ಲಾಘನೀಯ ಎಂದರು.ಮಾಜಿ ಶಾಸಕ ಎಸ್.ರಾಮಪ್ಪ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಎಸ್.ಎಂ.ವೀರೇಶ್ ಹನಗವಾಡಿ, ನಗರಸಭೆ ಮಾಜಿ ಸದಸ್ಯ ಡಿ.ಹೇಮಂತ್‍ರಾಜ್, ಹರಿಹರ ತಾಲೂಕು ಸಾಧು ವೀರಶೈವ ಸಮಾಜದ ಅಧ್ಯಕ್ಷ ಗೌಡ್ರ ಮಹದೇವಪ್ಪ, ಕಾರ್ಯದರ್ಶಿ ಹಲಸಬಾಳು ಶಿವಾನಂದಪ್ಪ, ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಚನ್ನಬಸಪ್ಪ, ಕಾರ್ಯದರ್ಶಿ ಎಂ.ಆರ್.ತಿಪ್ಪೇಸ್ವಾಮಿ, ಖಜಾಂಚಿ ಕೆ.ಜಿ.ಮುನೀಂದ್ರ ಹಾಗೂ ಭಕ್ತರಿದ್ದರು.