ಯೋಗಾಭ್ಯಾಸದಿಂದ ಮಾನಸಿಕ ಒತ್ತಡ ಕಡಿಮೆ

| Published : Nov 10 2024, 01:40 AM IST

ಸಾರಾಂಶ

ದೇಶದ ಯೋಗ ಇಂದು ವಿಶ್ವದಲ್ಲಿಯೇ ಜನ ಮನ್ನಣೆ ಗಳಿಸಿದ್ದು ಪ್ರತಿಯೊಬ್ಬರೂ ಯೋಗ ಕಲಿತು ಅದರ ಯೋಗ್ಯತೆಯನ್ನು ಇತರರಿಗೂ ಸಾರಬೇಕೆಂದರು

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ನಿರಂತರವಾಗಿ ನಿಯಮಿತ ಸಮಯದಲ್ಲಿ ಯೋಗಾಭ್ಯಾಸ ಮಾಡಿದರೆ ಆರೋಗ್ಯ ವೃದ್ದಿಯಾಗುವುದರ ಜತೆಗೆ ಮಾನಸಿಕ ಒತ್ತಡವು ಕಡಿಮೆಯಾಗಲಿದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದಲ್ಲಿ ಶನಿವಾರ ಬೆಳಗ್ಗೆ ಸುಮುಖ ಯೋಗ ಕೇಂದ್ರದ ವತಿಯಿಂದ ನಡೆದ ಹನುಮಾಸನ ಮಕ್ಕಳ ಗ್ಲೋಬಲ್ ಯೋಗ ರೆಕಾರ್ಡ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ಯಾಂತ್ರಿಕ ಬದುಕು ನಡೆಸುತ್ತಿರುವ ನಮಗೆ ಪ್ರಸ್ತುತ ಯೋಗದ ಅವಶ್ಯಕತೆ ಇದೆ ಎಂದರು.

ಅಗತ್ಯ ತರಬೇತಿ ಪಡೆದು ಮನೆಯಲ್ಲಿಯೇ ಯೋಗ ಮಾಡಿ ಎಂದು ಸಲಹೆ ನೀಡಿದ ಶಾಸಕರು ದೇಶದ ಯೋಗ ಇಂದು ವಿಶ್ವದಲ್ಲಿಯೇ ಜನ ಮನ್ನಣೆ ಗಳಿಸಿದ್ದು ಪ್ರತಿಯೊಬ್ಬರೂ ಯೋಗ ಕಲಿತು ಅದರ ಯೋಗ್ಯತೆಯನ್ನು ಇತರರಿಗೂ ಸಾರಬೇಕೆಂದರು. ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಯೋಗ ತರಬೇತಿ ಕೇಂದ್ರ ಆರಂಭಿಸಲು ಕ್ರಮ ಕೈಗೊಳ್ಳುವುದಾಗಿ ನುಡಿದರು.

1,101 ಮಕ್ಕಳಿಂದ ಏಕಕಾಲಕ್ಕೆ ಹನುಮಾಸನದ ಮೂಲಕ ಮಕ್ಕಳ ಗ್ಲೋಬಲ್ ಯೋಗ ರೆಕಾರ್ಡ್ ಕಾರ್ಯಕ್ರಮ ಮಾಡಿರುವುದು ಎಲ್ಲರೂ ಹೆಮ್ಮೆಪಡುವ ವಿಚಾರ ಎಂದರಲ್ಲದೆ, ಇಂತಹ ಕಾರ್ಯಕ್ರಮದ ಮೂಲಕ ಅಭೂತಪೂರ್ವ ಸಾಧನೆ ಮಾಡಿರುವವರು ಅಭಿನಂದನೆಗೆ ಅರ್ಹರು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಬೆಂಗಳೂರಿನ ಪತಂಜಲಿ ಯೋಗ ಟ್ರಸ್ಟ್ ಅಧ್ಯಕ್ಷ ಡಾ. ಪ್ರಕಾಶ್ ಗುರೂಜಿ ಮಾತನಾಡಿ, ಯೋಗ ಚೈತನ್ಯದ ಚಿಲುಮೆಯಾಗಿದ್ದು, ಇದನ್ನು ನಿತ್ಯ ಅಭ್ಯಾಸ ಮಾಡಿದರೆ ರೋಗ ಮುಕ್ತರಾಗಿ ಜೀವನ ಪೂರ್ತಿ ಬದುಕಬಹುದು ಎಂದು ತಿಳಿಸಿದರು.

ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಟ್ರಸ್ಟ್ ನ ಮುಖ್ಯಸ್ಥ ಡಾ. ದೇವರಾಜ ಯೋಗಿ ಗುರೂಜಿ, ಕೆ ಆರ್ ನಗರ ಪತಂಜಲಿ ಯೋಗ ಟ್ರಸ್ಟ್ ಅಧ್ಯಕ್ಷ ಪಿ. ಆರ್. ವಿಶ್ವನಾಥಶೆಟ್ಟಿ, ನವ ನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ. ಎನ್ ಬಸಂತ್, ರಾಜೀವ್ ಗಾಂಧಿ ಹೌಸಿಂಗ್ ಸೊಸೈಟಿ ನಿರ್ದೇಶಕ ಜಿ.ಕೆ. ಹರೀಶ್, ಬಿಇಒ ಆರ್.ಕೃಷ್ಣಪ್ಪ ಮಾತನಾಡಿದರು.

1101ಕ್ಕೂ ಅಧಿಕ ಮಕ್ಕಳು ಯೋಗದ ಮೂಲಕ ಸಾಮೂಹಿಕವಾಗಿ ಮಾಡಿದ ಹನುಮಾಸನ ಎಲ್ಲರ ಗಮನ ಸೆಳೆದು ನೆರೆದಿದ್ದವರ ಪ್ರಶಂಸೆಗೆ ಪಾತ್ರವಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಸಿ. ಅರವಿಂದ ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶ ಎಸ್. ಚಂದನ್ ಅವರು ವಿದ್ಯಾರ್ಥಿಗಳಿಗೆ ಶುಭಕೋರಿದರು.

ಡಿಡಿಪಿಐ ಜವರೇಗೌಡ, ಯೋಗಾಚಾರ್ಯ ಡಾ.ಪಿ.ಎನ್. ಗಣೇಶ್ ಕುಮಾರ್, ಉಪ ತಹಸೀಲ್ದಾರ್ ಎಚ್.ಆರ್. ಅರುಣ್ ಕುಮಾರ್, ಗ್ರಾಪಂ ಸದಸ್ಯ ಕೆ.ಪಿ. ಜಗದೀಶ್, ಯೋಗ ಗುರುಗಳಾದ ರೇವಣ್ಣ, ಯೋಗಮಣಿ, ಮಹದೇವ್, ಉಮೇಶ್, ಯೋಗಪಟುಗಳಾದ ಮಣಿಕಂಠ, ಎಚ್.ಆರ್. ನವೀನ್ ಕುಮಾರ್, ಪುರಸಭೆ ಸದಸ್ಯರಾದ ನಟರಾಜು, ಶಿವುನಾಯಕ್, ಸೈಯದ್ ಸಿದ್ದಿಕ್, ಮಾಜಿ ಸದಸ್ಯರಾದ ರಾ.ಜ. ಶ್ರೀಕಾಂತ್, ಕೆ. ವಿನಯ್, ನಗರ ಯೋಜನಾ ಪ್ರಾಧಿಕಾರದ ನಿರ್ದೇಶಕ ಕೆ.ಎನ್. ಪ್ರಸನ್ನಕುಮಾರ್ ಇದ್ದರು.