ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ ಸಮಿತಿ ವತಿಯಿಂದ ಕನ್ನಡ ಭವನದ ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಚುಟುಕು ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕ ಉದ್ಘಾಟನೆಗೊಂಡಿತು.ನಗರದ ಪತ್ರಿಕಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರು ಕನ್ನಡ ಭವನದ ಜಿಲ್ಲಾಧ್ಯಕ್ಷರು ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷರೂ ಆಗಿರುವ ಬೊಳ್ಳಜಿರ ಬಿ.ಅಯ್ಯಪ್ಪ, ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ, ಕನ್ನಡ ಭವನದ ಉಪಾಧ್ಯಕ್ಷೆ ತೆನ್ನಿರ ಟೀನಾ ಚಂಗಪ್ಪ, ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಅವರಿಗೆ ಕನ್ನಡ ಬಾವುಟ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು.
ನಂತರ ಮಾತನಾಡಿದ ಕನ್ನಡ ಭವನದ ಸ್ಥಾಪಕ ಸಂಚಾಲಕ ಡಾ.ವಾಮನ್ ರಾವ್ ಬೇಕಲ್, ಚುಟುಕು ಪರಿಷತ್ತಿನ ಬೆಳವಣಿಗೆ ಹೇಗೆ ಎಂಬುದು ಪ್ರಶ್ನಾರ್ಥಕವಾಗಿತ್ತು. ಈ ಸಂದರ್ಭದಲ್ಲಿ ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂಬ ನಿಟ್ಟಿನಲ್ಲಿ ಸ್ವಂತವಾಗಿ ಸಮಿತಿ ರಚಿಸಿದ್ದು, ಇಂದು ಜಿಲ್ಲಾ ವ್ಯಾಪಿ ಪಸರಿಸುತ್ತಿದೆ ಎಂದರು.ಇಂದು ಕೊಡಗಿನಲ್ಲಿ ಕನ್ನಡ ಭವನ ಮತ್ತು ಚುಟುಕು ಪರಿಷತ್ ಘಟಕ ರಚನೆಯಾಗಿದ್ದು, ಹೊಸ ಆಶಾಭಾವನೆ ಮೂಡಿಸಿದೆ. ಸಾಹಿತ್ಯ ಕ್ಷೇತ್ರದ ಬಗ್ಗೆ ಯುವ ಜನತೆಯಲ್ಲಿ ಆಲಸ್ಯ ಭಾವನೆ ಉಂಟಾಗಿದ್ದು, ಯುವ ಜನತೆ ತಿರುಗಿ ನೋಡದ ಸ್ಥಿತಿಯಲ್ಲಿದೆ. ಯುವ ತಲೆಮಾರು ಮನಸ್ಸು ಮಾಡಿದರೆ ಮಾತ್ರ ಕನ್ನಡ ಸಂಸ್ಕೃತಿಯ ಉಳಿವು ಸಾಧ್ಯ ಎಂದು ಹೇಳಿದರು.
ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕಾಸರಗೋಡು ಜಿಲ್ಲಾಧ್ಯಕ್ಷ ವಿರಾಜ್ ಅಡೂರು ಪ್ರಾಸ್ತಾವಿಕವಾಗಿ ಮಾತನಾಡಿ, ಉದಯೋನ್ಮುಖ ಸಾಹಿತಿಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿಮನೆಯಲ್ಲಿ ಗ್ರಂಥಾಲಯಗಳನ್ನು ನಿರ್ಮಿಸಬೇಕು. ಆ ಮೂಲಕ ಪುಸ್ತಕ ಜಾಗೃತಿ ಆಗಬೇಕು. ಪುಸ್ತಕಗಳು ಓದುವುದರಿಂದ ಜಾಗೃತಿಯನ್ನು ಮೂಡಿಸುತ್ತದೆ ಮತ್ತು ಜ್ಞಾನವನ್ನು ಹೆಚ್ಚಿಸುತ್ತದೆ. ಪೋಷಕರು ಆದಷ್ಟು ಮಕ್ಕಳಿಗೆ ಅನುಕೂಲವಾದ ಪುಸ್ತಕಗಳನ್ನು ಇಡಬೇಕು. ಮಕ್ಕಳಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸಿದರೆ ಮುಂದಿನ ದಿನಗಳಲ್ಲಿ ಸಾಹಿತ್ಯಸಕ್ತರಾಗುತ್ತಾರೆ ಎಂದರು.ಕರ್ನಾಟಕ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಬಿ.ಜಿ.ಅನಂತಶಯನ ಮಾತನಾಡಿ, ಎಲ್ಲಾ ಕ್ಷೇತ್ರಗಳಲ್ಲೂ ಕೊಡಗು ಅತ್ಯುನ್ನತ ಸ್ಥಾನದಲ್ಲಿ ನಿಂತಿದೆ. ಮಹಾದಂಡನಾಯಕನಾಗಿ ಕೊಡಗು ಜಿಲ್ಲೆಯ ಹಿರಿಮೆಯನ್ನು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರು ಹೆಚ್ಚಿಸಿದ್ದಾರೆ. ಸಾಂಸ್ಕೃತಿಕ, ಕ್ರೀಡೆ, ಸಿನಿಮಾ, ಸಾಮಾಜಿಕ ಕ್ಷೇತ್ರ ಸೇರಿದಂತೆ ಸಾಹಿತ್ಯ ಕ್ಷೇತ್ರದಲ್ಲೂ ಕೊಡಗಿನವರ ಕೊಡುಗೆ ಅಪಾರವಿದ್ದು, ಬರಹಗಾರರ ಸಂಖ್ಯೆಯೂ ಹೆಚ್ಚುತ್ತಿದೆ. ಕನ್ನಡದ ಉಳಿವಿಗೆ ಪಣ ತೊಟ್ಟಿರುವ ನೂತನ ಘಟಕಗಳಿಗೆ ಜಿಲ್ಲೆಯ ಜನತೆ ಸಹಕರಿಸಬೇಕೆಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಭವನದ ಜಿಲ್ಲಾಧ್ಯಕ್ಷ ಹಾಗೂ ಚುಟುಕು ಸಾಹಿತ್ಯ ಪರಿಷತ್ತಿನ ಗೌರವಾಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿದರು.ಹಿರಿಯ ಸಾಹಿತಿ ನಾಗೇಶ್ ಕಾಲೂರು ಚುಟುಕು ಸಾಹಿತ್ಯದ ವಿಮರ್ಶೆ ಮಾಡಿದರು. ಕಾರ್ಯಕ್ರಮದಲ್ಲಿ ಕನ್ನಡ ಭವನದ ಸ್ಥಾಪಕ ಸಂಚಾಲಕಿ ಸಂಧ್ಯಾರಾಣಿ ಟೀಚರ್, ಕನ್ನಡ ಭವನ ಕೇಂದ್ರ ಸಮಿತಿಯ ಉಪಾಧ್ಯಕ್ಷ ಕೆ.ಪಿ.ರಾಜೇಶ್ ಚಂದ್ರ ಉಪಸ್ಥಿತರಿದ್ದರು. ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷೆ ಎಂ.ಎ.ರುಬೀನಾ ಸ್ವಾಗತಿಸಿ, ಕನ್ನಡ ಭವನದ ನಿರ್ದೇಶಕಿ ಹರ್ಷಿತಾ ಶೆಟ್ಟಿ ನಿರೂಪಿಸಿ, ಕನ್ನಡ ಭವನದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ವಂದಿಸಿದರು.