ಎಐ ಮಿತಿ ಗುರುತಿಸಿಕೊಂಡು ಅದಕ್ಕೂ ಮೀರಿದ ಜ್ಞಾನ ಸಂಪಾದಿಸಿ

| Published : Jul 20 2025, 01:15 AM IST

ಸಾರಾಂಶ

ಪ್ರಸ್ತುತ ಎಲ್ಲಾ ಕ್ಷೇತ್ರಗಳನ್ನೂ ಎಐ ಪ್ರವೇಶಿಸಿರುವ ಕಾರಣ ಮಾಡಬೇಕಾದ ಕೆಲಸ ಬೇಗ ಆದರೂ ಅದರಿಂದ ಗುಣಾತ್ಮಕವಾದ ಕೆಲಸವನ್ನು ನಿರೀಕ್ಷಿಸಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ಮೈಸೂರು

ಕೃತಕಬುದ್ದಿಮತ್ತೆ (ಎಐ) ತಂತ್ರಜ್ಞಾನಕ್ಕಿರುವ ಮಿತಿಗಳೇ ನಮ್ಮ ಅಧ್ಯಯನದ ವಸ್ತುವಾಗಬೇಕು. ಆ ದೃಷ್ಟಿಯಲ್ಲಿ ನಮ್ಮ ಆಲೋಚನಾ ಪ್ರಕ್ರಿಯೆ ನಡೆಯಬೇಕು. ಪ್ರತಿಯೊಂದೂ ಕ್ಷೇತ್ರದಲ್ಲೂ ನಾವು ಎಐ ಗಿರುವ ಮಿತಿಯನ್ನು ಗುರುತಿಸಿಕೊಂಡು ಅದಕ್ಕೂ ಮೀರಿದ ಜ್ಞಾನವನ್ನು ಸಂಪಾದಿಸಿಕೊಳ್ಳಬೇಕು ಎಂದು ಚಲನಚಿತ್ರ, ರಂಗಭೂಮಿ ನಟ, ನಿರ್ದೇಶಕ ಪ್ರಕಾಶ್ ಬೆಳವಾಡಿ ಸಲಹೆ ನೀಡಿದರು.

ನಗರದ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನ (ಕಾವಾ) ಕುಂಚಕಾವ್ಯ ಸಾಂಸ್ಕೃತಿಕ ಸಮಿತಿಯನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಎಲ್ಲಾ ಕ್ಷೇತ್ರಗಳನ್ನೂ ಎಐ ಪ್ರವೇಶಿಸಿರುವ ಕಾರಣ ಮಾಡಬೇಕಾದ ಕೆಲಸ ಬೇಗ ಆದರೂ ಅದರಿಂದ ಗುಣಾತ್ಮಕವಾದ ಕೆಲಸವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ನೀವು ಅಧ್ಯಯನದಲ್ಲಿ ಸೃಜಶೀಲತೆಯಿಂದ ತೊಡಗಿಸಿಕೊಳ್ಳಿ ಎಂದರು.

ಎಐ ತಂತ್ರಜ್ಞಾನಕ್ಕೆ ನಾವು ಯಾವುದಾದರೂ ಕೆಲಸ ವಹಿಸಿದರೂ ಈವರೆಗೆ ವಿಶ್ವದಲ್ಲಿ ನಡೆದಿರುವ ಪ್ರಯೋಗಗಳು, ಪ್ರಯತ್ನಗಳು ಸೇರಿದಂತೆ ಎಲ್ಲಾ ಮಾಹಿತಿಯನ್ನು ಕ್ರೂಢೀಕರಿಸಿ ಫಲಿತಾಂಶವನ್ನು ನೀಡುತ್ತದೆ. ಇದರಿಂದ ತಕ್ಷಣಕ್ಕೆ ದೊಡ್ಡ ಪ್ರಮಾಣದ ಕೆಲಸ ಮಾಡಿದಂತಾದರೂ ಅಲ್ಲಿ ಗುಣಾತ್ಮಕ ಕೆಲಸ ಆಗಿರುವುದಿಲ್ಲ. ಏಕೆಂದರೆ ಎಐ ತಂತ್ರಜ್ಞಾನಕ್ಕೆ ಆಯ್ಕೆ ಮಾಡಿಕೊಂಡ ವಿಷಯದಲ್ಲಿ ಮುಂದೆ ಏನಾಗುತ್ತದೆ, ಸಾಧಕ ಬಾದಕಗಳೇನು ಎಂಬುದನ್ನು ಸ್ವತಃ ಮೌಲ್ಯಮಾಪನ ಮಾಡಿ ಹೇಳಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದರು.

ಕಾಲ ಕಳೆದಂತೆ ತಂತ್ರಜ್ಞಾನ ಬೆಳವಣಿಗೆ ಮನುಷ್ಯನಿಗಿರುವ ಅವಕಾಶಗಳನ್ನು ಕಿತ್ತುಕೊಳ್ಳುತ್ತವೆ. ಆದರೆ, ಸಂಪೂರ್ಣವಾಗಿ ಮನುಷ್ಯನ ಕೆಲಸ ಮಾಡಲು ಯಾವ ತಂತ್ರಜ್ಞಾನವೂ ಮಾಡಲು ಸಾಧ್ಯವಾಗುವುದಿಲ್ಲ. ತಂತ್ರಜ್ಞಾನದ ಈ ಹಿನ್ನಡೆಯನ್ನೇ ನಾವು ಬಂಡವಾಳ ಮಾಡಿಕೊಂಡು ನಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಎಐ ನಿಂದಾಗಿ ಮುಂದಿನ ದಿನಗಳಲ್ಲಿ ಶಿಕ್ಷಕರು ಪಾಠ ಮಾಡುವುದು ಬೇಕಾಗುವುದಿಲ್ಲ ಎಂದು ಹೇಳಿದರೂ, ಅದು ತನ್ನ ಎದುರಿಗಿರುವ ವಿದ್ಯಾರ್ಥಿಗಳ ಮನಃಸ್ಥಿತಿ, ಅವರ ಬುದ್ದಿಶಕ್ತಿ, ಜ್ಞಾನದ ಮಟ್ಟವನ್ನು ಅರಿತು ಅದಕ್ಕೆ ಅನುಗುಣವಾಗಿ ಅರ್ಥವಾಗುವಂತೆ ಪಾಠ ಮಾಡಲು ಸಾಧ್ಯವಾಗುವುದಿಲ್ಲ ಎಂದರು.

ಆರೋಗ್ಯ ಕ್ಷೇತ್ರದಲ್ಲಿ ತಂತ್ರಜ್ಞಾನದಿಂದ ಮಹತ್ತರವಾದ ಬದಲಾವಣೆಗಳಾಗಿವೆ. ಇದರಿಂದ ಪರಿಣಾಮಕಾರು ಚಿಕಿತ್ಸೆ ನೀಡಲು ಸಾಧ್ಯವಾಗಿದೆ. ದೊಡ್ಡ ಮಟ್ಟದ ಶಸ್ತ್ರಚಿಕಿತ್ಸೆಗಳನ್ನು ಕರಾರುವಕ್ಕಾಗಿ ಮಾಡುವಂತಹ ರೋಬೊಟ್‌ ಗಳು ಬಂದಿವೆ. ಅವುಗಳ ಕೊಡುಗೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಅವರು ಹೇಳಿದರು.

ದೃಶ್ಯ ಕಲಾವಿದ ಎಂ.ಎಸ್. ಉಮೇಶ್, ಕಾವಾ ಡೀನ್ ಎ. ದೇವರಾಜು, ಆಡಳಿತಾಧಿಕಾರಿ ನಿರ್ಮಲಾ ಮಠಪತಿ, ಗ್ರಾಫಿಕ್ ವಿಭಾಗದ ಮುಖ್ಯಸ್ಥ ಎ.ಪಿ. ಚಂದ್ರಶೇಖರ್ ಮೊದಲಾದವರು ಇದ್ದರು.

----

ಕೋಟ್...

ನಾವು ಓದುತ್ತಿರುವ ಕೋರ್ಸ್‌ ನಿಂದ ವಿದ್ಯಾರ್ಥಿಗಳು ಏನು ಪ್ರಯೋಜನ ಎಂದು ಕೇಳಿದರೆ ಅದು ತಪ್ಪಾಗುತ್ತದೆ. ನಾನು ಈ ಕೋರ್ಸ್ ಅನ್ನು ಬಳಕೆ ಮಾಡಿಕೊಂಡು ಯಾವ ರೀತಿ ಬೆಳೆಯಬಲ್ಲೆ ಎಂಬುದನ್ನು ಪ್ರಶ್ನೆ ಮಾಡಿಕೊಂಡು ಆ ನಿಟ್ಟಿನಲ್ಲಿ ಪ್ರಯತ್ನ ಹಾಕಬೇಕು.

- ಪ್ರಕಾಶ್ ಬೆಳವಾಡಿ, ಹಿರಿಯ ನಟ, ನಿರ್ದೇಶಕ