ಸಾರಾಂಶ
ಕನ್ನಡಪ್ರಭ ವಾರ್ತೆ
ಹುಬ್ಬಳ್ಳಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ eGov ಫೌಂಡೇಷನ್ ಸಹಯೋಗದಲ್ಲಿ ಟೆಲಿ ಐಸಿಯು ಹಬ್ (ಕ್ಲಸ್ಟರ್) ಉದ್ಘಾಟನೆ ಇಲ್ಲಿನ ಕಿಮ್ಸ್‌ನಲ್ಲಿ ಜ. 6ರಂದು ನಡೆಯಲಿದೆ.
ಬೆಳಗ್ಗೆ 10ಗಂಟೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಹೊಸ ಟೆಲಿಐಸಿಯು ಹಬ್‌ಗೆ ಚಾಲನೆ ನೀಡಲಿದ್ದಾರೆ. 10 ಹಾಸಿಗೆಯ ಐಸಿಯು ಇದಾಗಿದೆ. ಉತ್ತರ ಕರ್ನಾಟಕದ 10 ತಾಲೂಕು ಆಸ್ಪತ್ರೆಗಳೊಂದಿಗೆ ಸಂಪರ್ಕ ಹೊಂದಿರಲಿದೆ.
ಏನಿದು ಟೆಲಿಐಸಿಯು ?
10 ಹಾಸಿಗೆಯ ಐಸಿಯು ಸರ್ಕಾರ, ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದ ಯೋಜನೆ ಆಗಿದೆ. ಇದನ್ನು ಕರ್ನಾಟಕದ ಇ-ಗವರ್ನಮೆಂಟ್ಸ್ ಫೌಂಡೇಶನ್ ಮತ್ತು ಕರುಣಾ ಟ್ರಸ್ಟ್ ನಿರ್ವಹಿಸಲಿವೆ.
10 ತಾಲೂಕಾಸ್ಪತ್ರೆಗಳಲ್ಲಿ ಪ್ರತಿಯೊಂದು ತಾಲೂಕಾಸ್ಪತ್ರೆಯಲ್ಲಿ 10 ಹಾಸಿಗೆಯುಳ್ಳ ಐಸಿಯು ಇರಲಿದೆ. ಜಮಖಂಡಿ, ಭಟ್ಕಳ, ಯಲ್ಲಾಪುರ, ನರಗುಂದ, ಗೋಕಾಕ, ಸವದತ್ತಿ, ಬಸವನ ಬಾಗೇವಾಡಿ, ಶಿಗ್ಗಾಂವಿ, ಹಾವೇರಿ, ಕುಂದಗೋಳ ಹೀಗೆ 10 ತಾಲೂಕಾಸ್ಪತ್ರೆಗಳಲ್ಲಿ ದಾಖಲಾಗುವ ರೋಗಿಗಳಿಗೆ ಕಿಮ್ಸ್‌ನ ಟೆಲಿ ಐಸಿಯು ಕ್ಲಸ್ಟರ್‌ನಿಂದ ವೈದ್ಯರು ಸಲಹೆ ಸೂಚನೆ ನೀಡಲಿದ್ದಾರೆ.
ಇಲ್ಲಿ ಸಿಗುವ ಸಲಹೆ ಮೇರೆಗೆ ಅಲ್ಲಿನ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ. ಈ ಚಿಕಿತ್ಸೆಯ ಸಲಹೆಗಳೆಲ್ಲ ಕ್ಯಾಮೆರಾ ಮೂಲಕವೇ ದೊರೆಯಲಿದೆ.10 ಹಾಸಿಗೆಯ ಐಸಿಯು ಯೋಜನೆಯೂ ಸಣ್ಣ ಪುಟ್ಟ ಪಟ್ಟಣಗಳು, ಹಳ್ಳಿಗಳಿಗೆ ಕ್ಲಿಷ್ಟಕರವಾದ ಆರೋಗ್ಯ ಸೇವೆ ಪೂರೈಸಲು ಸಹಕಾರಿಯಾಗಲಿದೆ.
ದೂರದ ಆಸ್ಪತ್ರೆಗಳಿಗೆ ತಜ್ಞರನ್ನು ಸಂಪರ್ಕಿಸುವ, ಸರ್ಕಾರಿ ವೈದ್ಯಕೀಯ ಕಾಲೇಜು, ಜಿಲ್ಲಾ ಆಸ್ಪತ್ರೆಗಳಲ್ಲಿನ ಹಬ್‌ಗಳೊಂದಿಗೆ ಹಬ್-ಎನ್-ಸ್ಪೋಕ್ ಮಾದರಿಯಲ್ಲಿ ಟೆಲಿ ಐಸಿಯು ವ್ಯವಸ್ಥೆ ನಿಯೋಜಿಸುವದಾಗಿದೆ.
ವೈದ್ಯಕೀಯ ಉಪಕರಣ, ಕೆರ್ ಸಾಫ್ಟವೇರ್ ಮತ್ತು ಕ್ರಿಟಿಕಲ್ ಕೇರ್ ತರಬೇತಿ ಮತ್ತು ಐಸಿಯು ಪ್ರೋಟೋಕಾಲ್ ಪ್ರಮಾಣೀಕರಿಸುವ ಕುರಿತು ಸಮಗ್ರ ತರಬೇತಿ ನೀಡುವುದು. ಯೋಜನೆಯ ಪ್ರಭಾವ ಮತ್ತು ಸಮರ್ಥನೀಯತೆ ಗರಿಷ್ಠಗೊಳಿಸಲು ಸಮುದಾಯದ ಭಾಗವಹಿಸುವಿಕೆ ಹೆಚ್ಚಿಸುವುದಾಗಿದೆ ಇದರ ಉದ್ದೇಶವಾಗಿದೆ.
ಈ ಯೋಜನೆಗೆ ಕ್ರಿಪ್ಲೋ ರಿಲೀಫ್, ಗಿವ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಪರಿವರ್ತನ್, ವಿನೋದ್ ಖೋಸ್ಲಾ ಮತ್ತು ಮೈಸೂರು ಕೆಆರ್ ಆಸ್ಪತ್ರೆಯ 10 ಬೆಡ್‌ಐಸಿಯು ಮತ್ತು ಟೆಲಿ ಐಸಿಯು ಹಬ್‌ನಿಂದ ಧನಸಹಾಯವನ್ನು 10 ಬೆಡ್ ಐಸಿಯು ಅಧ್ಯಕ್ಷ ಶ್ರೀಕಾಂತ್ ನಾದಮುನಿ ಮಾಡಿದ್ದಾರೆ.
ಐಐಟಿ ಬಾಂಬೆಯಲ್ಲಿ ಇ-ಗವರ್ನಮೆಂಟ್ಸ್ ಫೌಂಡೇಶನ್, ಕರುಣಾ ಟ್ರಸ್ಟ್, ಹ್ಯಾಮಿಲ್ಟನ್ ಮೆಡಿಕಲ್, ಗೂಗಲ್ ಕ್ಲೌಡ್ ಮತ್ತು ಕೊಯಿಟಾ ಸೆಂಟರ್ ಫಾರ್ ಡಿಜಿಟಲ್ ಹೆಲ್ತ್ ಸೇರಿದಂತೆ ಹಲವಾರು ಎನ್‌ಜಿಒ ಮತ್ತು ಉದ್ಯಮ ಪಾಲುದಾರರು ಈ ಯೋಜನೆ ಕಾರ್ಯಗತಗೊಳಿಸಲು ಕೈ ಜೋಡಿಸಿದ್ದಾರೆ.
ಕಿಮ್ಸ್‌ನಲ್ಲಿ ಟೆಲಿಐಸಿಯು ಹಬ್‌ನ್ನು ಜ. 6ರಂದು ಸಚಿವರು ಉದ್ಘಾಟಿಸಲಿದ್ದಾರೆ. ತಾಲೂಕಾಸ್ಪತ್ರೆಗಳೊಂದಿಗೆ ಇದು ಲಿಂಕ್ ಪಡೆದಿರುತ್ತದೆ. ಅಲ್ಲಿನ ರೋಗಿಗಳಿಗೆ ಇಲ್ಲಿನ ತಜ್ಞ ವೈದ್ಯರು ಸಲಹೆ ಸೂಚನೆ ನೀಡುತ್ತಾರೆ. ಅದರಂತೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ತಾಲೂಕಾಸ್ಪತ್ರೆಗಳಲ್ಲು ಗುಣಮಟ್ಟದ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ ಎಂದು ಧಾರವಾಡ ಡಿಎಚ್‌ಒ ಶಶಿಕಲಾ ಪಾಟೀಲ ಹೇಳಿದ್ದಾರೆ.