ನಾಳೆ ಚಿಕ್ಕೋಡಿಯಲ್ಲಿ ಕೆಎಲ್‌ಇ ಸ್ಕೂಲ್‌ ಉದ್ಘಾಟನೆ

| Published : Feb 27 2024, 01:31 AM IST

ನಾಳೆ ಚಿಕ್ಕೋಡಿಯಲ್ಲಿ ಕೆಎಲ್‌ಇ ಸ್ಕೂಲ್‌ ಉದ್ಘಾಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕೋಡಿಯಲ್ಲಿ ಫೆ.28ರಂದು ಬೆಳಗ್ಗೆ 10.30ಕ್ಕೆ ಕೆಎಲ್ಇ ಸಂಸ್ಥೆಯ ನೂತನ ಸಿಬಿಎಸ್ಸಿ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ ನಡೆಯಲಿದ್ದು, ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ‌.ಪ್ರಭಾಕರ ಕೋರೆ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಚಿಕ್ಕೋಡಿಯಲ್ಲಿ ಫೆ.28ರಂದು ಬೆಳಗ್ಗೆ 10.30ಕ್ಕೆ ಕೆಎಲ್ಇ ಸಂಸ್ಥೆಯ ನೂತನ ಸಿಬಿಎಸ್ಸಿ ಆಂಗ್ಲ ಮಾಧ್ಯಮ ಶಾಲೆ ಉದ್ಘಾಟನೆ ನಡೆಯಲಿದ್ದು, ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ‌.ಪ್ರಭಾಕರ ಕೋರೆ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಅತಿಥಿಗಳಾಗಿ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಆಗಮಿಸಲಿದ್ದಾರೆ. ಕರ್ನಾಟಕ ಸರ್ಕಾರದ ದೆಹಲಿ ಎರಡನೇ ಪ್ರತಿನಿಧಿ ಪ್ರಕಾಶ ಹುಕ್ಕೇರಿ, ಶಾಸಕ ಗಣೇಶ ಹುಕ್ಕೇರಿ, ಲೋಕಸಭಾ ಸದಸ್ಯ ಅಣ್ಣಾಸಾಹೇಬ ಜೊಲ್ಲೆ, ಚಿಕ್ಕೋಡಿ ಪುರಸಭೆಯ ಮಾಜಿ ಅಧ್ಯಕ್ಷ ಪ್ರವೀಣ ಕಾಂಬಳೆ ಆಗಮಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕೆಎಲ್‍ಇ ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಕೌಜಲಗಿ ವಹಿಸಲಿದ್ದಾರೆ. ಕೇಂದ್ರ ವಿದೇಶಾಂಗ ಸಚಿವ ಡಾ.ಎಸ್‌.ಜೈಶಂಕರ ಅವರು 1977ರಲ್ಲಿ ಕೆಲ ತಿಂಗಳ ಕಾಲ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹಾಗಾಗಿ, ಅವರನ್ನು ನಮ್ಮ ಸಂಸ್ಥೆಯ ಶಾಲೆ ಉದ್ಘಾಟನೆಗೆ ಆಹ್ವಾನಿಸಲಾಗಿದೆ ಎಂದರು.

ಕರ್ನಾಟಕ, ಮಹಾರಾಷ್ಟ್ರ ಮೊದಲುಗೊಂಡು 15 ಸಿಬಿಎಸ್‍ಸಿ ಶಾಲೆಗಳನ್ನು, 7 ರಾಜ್ಯ ಪಠ್ಯಕ್ರಮದ ಆಂಗ್ಲ ಮಾಧ್ಯಮ ಶಾಲೆಗಳನ್ನು ಕೆಎಲ್‍ಇ ಸಂಸ್ಥೆಯು ಮುನ್ನಡೆಸುತ್ತಿದೆ. ಈ ಶಾಲೆಗಳಲ್ಲಿ ಒಟ್ಟು 21,000ಕ್ಕೂ ಅಧಿಕ ವಿದ್ಯಾರ್ಥಿಗಳು ಶಾಲಾ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಅಂತೆಯೇ ಚಿಕ್ಕೋಡಿಯ ಕೆಎಲ್‍ಇ ಸ್ಕೂಲ್ 2020ರಲ್ಲಿ ಪ್ರಾರಂಭಗೊಂಡಿತು. 5 ಎಕರೆ ನಿವೇಶನದಲ್ಲಿ 1,05,000 ಚ.ಅಡಿ ವಿಸ್ತೀರ್ಣದಲ್ಲಿ ಪ್ರಸ್ತುತ ಭವ್ಯವಾದ ಶಾಲೆಯ ಕಟ್ಟಡವನ್ನು ₹17 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಅತ್ಯಂತ ವೈವಿಧ್ಯಪೂರ್ಣವಾಗಿರುವ ಈ ಶಾಲಾ ಕಟ್ಟಡದಲ್ಲಿ ವಿಶೇಷವಾದ ಹೈಟೆಕ್ ವರ್ಗಕೋಣೆಗಳಿವೆ. ಅತ್ಯಾಧುನಿಕವಾದ ವಿಜ್ಞಾನ, ಕಂಪ್ಯೂಟರ್ ಪ್ರಯೋಗಾಲಯಗಳು, ಗ್ರಂಥಾಲಯ, ಕ್ರೀಡಾ ವಿಭಾಗ, ಸಂಗೀತ ತರಬೇತಿ ಹಾಗೂ ಭವ್ಯವಾದ ಉದ್ಯಾನವನ್ನು ಹೊಂದಿದೆ. ಸುತ್ತ-ಮುತ್ತಲಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗಾಗಿ ಬಸ್‍ನ ಸೌಲಭ್ಯವನ್ನು ಒದಗಿಸಲಾಗಿದೆ. ಆವರಣದಲ್ಲಿ ಸಿಸಿಟಿವಿ ಕ್ಯಾಮರಾಗಳು, ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ಶೌಚಾಲಯಗಳನ್ನು ಒದಗಿಸಲಾಗಿದೆ. ಸಂಸ್ಥೆಯು ಗುಣಮಟ್ಟದ ಶಿಕ್ಷಣ ನೀಡುತ್ತ ಬಂದಿದೆ. ಪ್ರಸ್ತುತ ಶಾಲೆಯಲ್ಲಿ ನರ್ಸರಿಯಿಂದ 8ನೇ ತರಗತಿಯವರೆಗೆ 400 ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 50 ಕ್ಕೂ ಅಧಿಕ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ವಿವರಿಸಿದರು.

1916 ರಲ್ಲಿ ಸ್ಥಾಪನೆಗೊಂಡ ಕೆಎಲ್‍ಇ ಸಂಸ್ಥೆಯು 108 ವರ್ಷಗಳ ತನ್ನ ಚರಿತ್ರೆಯಲ್ಲಿ ಶೈಕ್ಷಣಿಕ, ಆರೋಗ್ಯ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಜಾಗತಿಕ ಮನ್ನಣೆಗೆ ಪಾತ್ರವಾಗಿದೆ. 1,38,000 ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದು, 18,000 ಸಿಬ್ಬಂದಿ ವರ್ಗದವರು ಸೇವೆ ಸಲ್ಲಿಸುತ್ತಿದ್ದಾರೆ.

ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಸಂಸ್ಥೆ:

ಶಿಕ್ಷಣದ ಇಂದಿನ ಎಲ್ಲ ಬೇಕು-ಬೇಡಿಕೆಗಳನ್ನು ಪೂರೈಸಿರುವ ಸಂಸ್ಥೆ ಅಂತಾರಾಷ್ಟ್ರೀಯ ಮಟ್ಟದ ಗುಣಾತ್ಮಕತೆಯನ್ನು ನೀಡುತ್ತಾ ಬಂದಿದೆ. ಶಿಶುವಿಹಾರದಿಂದ ಸ್ನಾತಕೋತ್ತರವರೆಗೆ ಮೌಲಿಕ ಶಿಕ್ಷಣವನ್ನು ನೀಡಿ ಅಗಾಧವಾಗಿ ಬೆಳೆದು ನಿಂತಿದೆ. ಅಸಂಖ್ಯ ಪ್ರತಿಭಾವಂತರನ್ನು ರೂಪಿಸಿದೆ. ರಾಷ್ಟ್ರಕ್ಕೆ ಅದ್ವಿತೀಯ ವೈದ್ಯರನ್ನು, ಅಭಿಯಂತರರನ್ನು, ಸಾಹಿತಿಗಳನ್ನು, ಉದ್ಯಮಿಪತಿಗಳನ್ನು, ಶಿಕ್ಷಕರನ್ನು ನೀಡಿದ ಖ್ಯಾತಿ ಕೆಎಲ್‍ಇ ಸಂಸ್ಥೆಯದು. ಸಂಸ್ಥೆಯ ಬಹುಸಂಖ್ಯೆಯ ಶಿಕ್ಷಣ ಸಂಸ್ಥೆಗಳು ಹಾಗೂ ಆರೋಗ್ಯ ಸೇವಾ ಕೇಂದ್ರಗಳು ಗ್ರಾಮೀಣ ಭಾಗದಲ್ಲಿಯೇ ಇರುವುದನ್ನು ಗಮನಿಸಬಹುದು. ರೈತರ, ಕಾರ್ಮಿಕ ವರ್ಗದ ಮಕ್ಕಳ ಶೈಕ್ಷಣಿಕ ವಿಕಾಸಕ್ಕಾಗಿ ಉನ್ನತ ದರ್ಜೆಯ ಶಿಕ್ಷಣ ಕೇಂದ್ರಗಳನ್ನು ಇಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಿದರು.

ಕೆಎಲ್ಇ ಸಂಸ್ಥೆಯ ತಾಲೂಕು ಮಟ್ಟದ 17ನೇ ಸಿಬಿಎಸ್ಸಿ ಆಂಗ್ಲ ಮಾಧ್ಯಮ ಶಾಲೆಯನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೇ ಅಥಣಿ, ಸವದತ್ತಿ, ಬೈಲಹೊಂಗಲ, ಗದಗ, ಹಾವೇರಿ, ನಿಪ್ಪಾಣಿ, ಮಹಾರಾಷ್ಟ್ರ ಹಾಗೂ ಬೆಂಗಳೂರಿನಲ್ಲಿ ಸಿಬಿಎಸ್ಸಿ ಶಾಲೆಯನ್ನು ‌ಕೆಎಲ್ಇ ಸಂಸ್ಥೆ ಪ್ರಾರಂಭಿಸಿದೆ ಎಂದರು. ಇತ್ತೀಚಿನ ದಿನಮಾನಗಳಲ್ಲಿ ನೌಕರಿ ಸಲುವಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಜ್ಞಾನದ ಸಲುವಾಗಿ ಯಾರೂ ಶಿಕ್ಷಣ ಪಡೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

₹3600 ಕೋಟಿ ಬಜೆಟ್‌ ಮಂಡನೆ:

ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿ ಸಭೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು ₹3600 ಕೋಟಿ ಬಜೆಟ್‌ ಮಂಡನೆ ಮಾಡಿದೆ. ಸಂಸ್ಥೆಯ ಕ್ಯಾನ್ಸರ್‌ ಆಸ್ಪತ್ರೆ ಕಟ್ಟಡ ಸೇರಿದಂತೆ ವಿವಿಧ ಶಾಲಾ ಕಟ್ಟಡಗಳ ಕಾಮಗಾರಿ ಕೈಗೊಳ್ಳಲಾಗುವುದು. ಮುಂಬೈ ಸ್ಕೂಲ್‌ ಕಟ್ಟಡ ಉದ್ಘಾಟನೆ ಮುಂಬರುವ ಜೂನ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದರು.

ಪಕ್ಷ ಟಿಕೆಟ್‌ ನೀಡಿದರೆ ಅಮಿತ್‌ ಸ್ಪರ್ಧೆ:

ಮುಂಬರುವ ಲೋಕಸಬಾ ಚುನಾವಣೆಯಲ್ಲಿ ಚಿಕ್ಕೋಡಿ ಕ್ಷೇತ್ರದಿಂದ ತಮ್ಮ ಪುತ್ರ ಅಮಿತ ಕೋರೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಪಕ್ಷದ ಹೈಕಮಾಂಡ್‌ ಅವಕಾಶ ನೀಡಿದರೆ ಸ್ಪರ್ಧೆ ಮಾಡಬಹುದು ಎಂದು ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹೇಳಿದರು.

ಹಾಲಿ ಸಂಸದರು ಸೇರಿದಂತೆ ಎಲ್ಲರೂ ಬಿಜೆಪಿ ಟಿಕೆಟ್‌ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ ಅವಕಾಶ ನೀಡಿದರೆ ಅಮಿತ ಸ್ಪರ್ಧೆ ಮಾಡಬಹುದು. ನಮ್ಮ ಸಂಪರ್ಕ ಚಿಕ್ಕೋಡಿಯಲ್ಲಿದೆ. 2 ಸಕ್ಕರೆ ಕಾರ್ಖಾನೆಗಳಿವೆ. ಹೀಗಾಗಿ ಅಮಿತ್ ಚಿಕ್ಕೋಡಿಯಿಂದ ಸ್ಪರ್ಧೆ ಮಾಡಬಹುದು ಎಂದರು.

ರಾಜಕೀಯ ಎರಡು ವಿಚಾರಕ್ಕೆ ಮಾಡಬೇಕು. ನಾವೆಲ್ಲ ಮೌಲ್ಯಾಧಾರಿತವಾಗಿ ರಾಜಕೀಯ ಮಾಡಿದವರು. ಈಗ ಆ ರಾಜಕೀಯ ನಡೆಯುತ್ತಾ ಎಂದು ಪ್ರಶ್ನಸಿದ ಅವರು, ಬೆಳಗಾವಿ ಉತ್ತರ ಕ್ಷೇತ್ರದಿಂದ ಸ್ಪರ್ಧಿಸುವಂತೆ ಬಿಜೆಪಿ ಮುಖಂಡರು ಕಳೆದ ಚುನಾವಣೆಯಲ್ಲಿ ಅಮಿತನನ್ನು ಸಂಪರ್ಕ ಮಾಡಿದ್ದರು. ಆದರೆ, ಆತನಿಗೆ ಸ್ಪರ್ಧೆ ಮಾಡುವ ಮನಸಿರಲಿಲ್ಲ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಡಾ.ಪ್ರೀತಿ ದೊಡವಾಡ, ಡಾ. ದೀಪಾ ಮೆಟಗುಡ್‌, ಡಾ. ಸುನೀಲ ಜಲಾಲಪುರೆ ಹಾಗೂ ಕಾರ್ಯದರ್ಶಿ ಬಿ.ಜಿ.ದೇಸಾಯಿ ಉಪಸ್ಥಿತರಿದ್ದರು.

ನನ್ನ ಮಕ್ಕಳಿಗೆ ರಾಜಕೀಯ ಮಾಡುವಂತೆ ನಾನು ಯಾವುದೇ ಒತ್ತಾಯ ಮಾಡಿಲ್ಲ. ಮಾಡುವುದೂ ಇಲ್ಲ. ಅವರ ಇಷ್ಟದಂತೆಯೇ ಅವರು ಬಿಸಿನೆಲ್‌ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಇಚ್ಛೆಯಂತೆಯೇ ಅವರು ರಾಜಕೀಯಕ್ಕೆ ಬರುವುದಾದರೇ ಬರಲಿ.

-ಡಾ‌.ಪ್ರಭಾಕರ ಕೋರೆ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು.