ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯಿಂದ ಕೊಡಗು ಪೊಲೀಸ್ ಸಾಂಸ್ಕೃತಿಕ ವೇದಿಕೆಯ ಉದ್ಘಾಟನೆ ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಭಾನುವಾರ ಅದ್ದೂರಿಯಾಗಿ ನೆರವೇರಿತು.ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸಾಂಸ್ಕೃತಿಕ ವೇದಿಕೆಯ ಮಹಾಪೋಷಕರಾದ ರಾಮರಾಜನ್, ಉದ್ಘಾಟಿಸಿದರು. ಚಲನಚಿತ್ರ ನಟಿಯರಾದ ಹರ್ಷಿಕಾ ಪೂಣಚ್ಚ ಹಾಗೂ ತೇಜಸ್ವಿನಿ ಶರ್ಮಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಾಂಸ್ಕೃತಿಕ ವೇದಿಕೆ ಉದ್ಘಾಟಿಸಿ ಮಾತನಾಡಿದ ರಾಮರಾಜನ್, ಪ್ರತಿದಿನ ಕೆಲಸದ ಒತ್ತಡದಲ್ಲಿರುವವರಿಗೆ ಒಂದಿಷ್ಟು ಮನೋರಂಜನೆಯ ಅವಶ್ಯಕತೆ ಇದ್ದು, ಅವರಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರ ತರಲು ಹಾಗೂ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಇಂಥ ಸಾಂಸ್ಕೃತಿಕ ಕಾರ್ಯಕ್ರಮಗಳು ಅವಶ್ಯ, ಈ ನಿಟ್ಟಿನಲ್ಲಿ ಜಿಲ್ಲೆಯ ಕೆಲವು ಪೊಲೀಸ್ ಅಧಿಕಾರಿಗಳು ನೀಡಿರುವ ಸಲಹೆಗೆ ಒತ್ತು ನೀಡಿ ಪ್ರಥಮ ಬಾರಿ ಈ ವೇದಿಕೆಯನ್ನು ಕೊಡಗು ಜಿಲ್ಲೆಯಲ್ಲಿ ಹುಟ್ಟು ಹಾಕಲಾಗಿದೆ ಎಂದರು.ಮುಂದೆ ಈ ವೇದಿಕೆ ಬಳಸಿಕೊಂಡು ಪೊಲೀಸ್ ಇಲಾಖೆಯಲ್ಲಿರುವ ಸಿಬ್ಬಂದಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಾ ಕಲೆ ಹಾಗೂ ಸಂಸ್ಕೃತಿಯನ್ನು ಬೆಳೆಸುವಲ್ಲಿ ಪ್ರಯತ್ನಿಶೀಲರಾಗಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬ ಪೊಲೀಸರಲ್ಲೂ ಕೂಡ ಒಂದೊಂದು ಪ್ರತಿಭೆಗಳು ಇದ್ದು, ಅವರು ಆ ಕ್ಷೇತ್ರದಲ್ಲಿ ದೊಡ್ಡವರು ಎಂದು ನಾನು ಭಾವಿಸಿದ್ದೇನೆ. ಅಂಥವರಿಗೆ ನಾವು ಗೌರವ ನೀಡುವುದು ಕೂಡ ನಮ್ಮ ಕರ್ತವ್ಯವಾಗಿದೆ ಎಂದು ಹೇಳಿದರು.‘ಶಕ್ತಿ’ ದಿನ ಪತ್ರಿಕೆಯ ಸಂಪಾದಕ ಹಾಗೂ ಕಲಾಪೋಷಕ ಜಿ. ಚಿದ್ವಿಲಾಸ್ ಮಾತನಾಡಿ, ಸಂಸ್ಕಾರ, ಸಂಸ್ಕೃತಿ ಹಾಗೂ ಶಿಸ್ತು ಇರುವ ಕುಟುಂಬ ಕೊಡಗು ಪೊಲೀಸ್ ಇಲಾಖೆಯ ಸುಂದರ ಮನೆ ಇದು. ರಾಜ್ಯದಲ್ಲಿ ಪ್ರಥಮ ಬಾರಿಗೆ ಕೊಡಗು ಜಿಲ್ಲೆಯಲ್ಲಿ ಪೊಲೀಸ್ ಸಾಂಸ್ಕೃತಿಕ ವೇದಿಕೆಯನ್ನು ಹುಟ್ಟು ಹಾಕಿದ ಹೆಗ್ಗಳಿಕೆ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಅಧೀಕ್ಷಕರಿಗೆ ಸಲ್ಲುತ್ತದೆ ಎಂದರು.
ಸಕಾರಾತ್ಮಕವಾಗಿ ಸ್ಪಂದಿಸುತ್ತಾ ಮತ್ತು ಬೇರೆಯವರಿಗೂ ಮಾರ್ಗದರ್ಶಕರಾಗಿರುವ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಅವರನ್ನು ದಸರಾ ಸಂದರ್ಭ ಸನ್ಮಾನಿಸಲು ಸಮಿತಿಯವರು ಭೇಟಿ ನೀಡಿದಾಗ, ಮಾದಕ ದ್ರವ್ಯ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದ ರಾಷ್ಟ್ರಮಟ್ಟದ ಖದೀಮರನ್ನು ಬಂಧಿಸಲು ಜಿಲ್ಲೆಯ ಹಲವು ಪೊಲೀಸರು ಶ್ರಮಿಸಿದ್ದಾರೆ ಅವರಿಗೆ ಸನ್ಮಾನವನ್ನು ಮಾಡಿ ಎಂದು ಹೇಳಿ 48 ಪೊಲೀಸರಿಗೆ ದಸರಾ ಸಂದರ್ಭ ಸಮಿತಿಯವರು ಸನ್ಮಾನಿಸಲು ಕಾರಣಕರ್ತರಾದರು ಎಂದು ಎಸ್ಪಿ ಅವರನ್ನು ಪ್ರಶಂಸಿಸಿದರು.ಚಲನಚಿತ್ರ ನಟಿ ತೇಜಸ್ವಿನಿ ಶರ್ಮಾ, ಕರಾವಳಿ ಸಾಂಸ್ಕೃತಿಕ ವೇದಿಕೆಯ ನೌಷದ್ ಕೆ.ಕೆ., ಕೇಶವ, ಜೀ ಕನ್ನಡ ಸರಿಗಮಪ ಆಡಿಷನ್ ಮುಖ್ಯಸ್ಥ ಸಚಿನ್ ಪ್ರಕಾಶ್ ಮಾತನಾಡಿದರು. ಸಭಾ ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಪೋಲಿಸ್ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ಕೆ.ಎಸ್ ಸುಂದರ್ ರಾಜ್ ಇದ್ದರು.
ಸನ್ಮಾನ ಕಾರ್ಯಕ್ರಮ:ಕಾರ್ಯಕ್ರಮದಲ್ಲಿ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಂನಲ್ಲಿ ಕೆಲಸ ನಿರ್ವಹಿಸುತ್ತಿರುವ, ಚಲನಚಿತ್ರ ನಟ ಹಾಗೂ ನಿರ್ಮಾಪಕ ವಿಜಯ್ ಇ.ಯು ಅವರನ್ನು ಅತಿಥಿಗಳಾದ ತೇಜಸ್ವಿನಿ ಶರ್ಮ, ಹರ್ಷಿಕಾ ಪೂಣಚ್ಚ, ಚಿದ್ವಿಲಾಸ್, ರಾಮರಾಜನ್ ಸನ್ಮಾನಿಸಿದರು.
ಮಡಿಕೇರಿ ವೃತ್ತ ನಿರೀಕ್ಷಕ ಪಿ.ಕೆ. ರಾಜು ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ, ಹೆಚ್ಚುವರಿ ಪೊಲೀಸ್ ಅಧೀಕ್ಷ ಸುಂದರ ರಾಜ್ ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿ, ಇಲಾಖೆಯಲ್ಲಿ ಕಾರ್ಯನಿರ್ವಹಿಸುವವರ ಕೆಲಸದ ಒತ್ತಡಗಳು, ಕೊಡಗು ಜಿಲ್ಲೆಯಲ್ಲಿ ಕಳೆದೆರಡು ವರ್ಷಗಳಿಂದ ಆದ ಪ್ರಕರಣಗಳ ಕುರಿತು ಮಾಹಿತಿ ನೀಡಿ, ಸಾಂಸ್ಕೃತಿಕ ಕಲಾವೇದಿಕೆಯ ಉದ್ದೇಶ ತಿಳಿಸಿದರು.ನಂತರ ಸರಿಗಮಪ ಕಲಾವಿದರಿಂದ ಸಂಗೀತ ಸಂಜೆ ಕಾರ್ಯಕ್ರಮ ಜರುಗಿತು. ಜಿಲ್ಲೆಯ ಎಲ್ಲ ಭಾಗಗಳಿಂದ ಪೊಲೀಸರು ಹಾಗೂ ಅವರು ಕುಟುಂಬ ವರ್ಗದವರು, ಸಾರ್ವಜನಿಕರು ಹಾಗೂ ಕಲಾ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.