16 ರಂದು ಮಹಾಂತೇಶ ಕವಟಗಿಮಠ ಫೌಂಡೇಶನ್‌ ಉದ್ಘಾಟನೆ

| Published : Jan 13 2024, 01:31 AM IST

ಸಾರಾಂಶ

ಸಮಾಜಮುಖಿ ಸೇವೆಗೆ ನನ್ನ ಜನ್ಮದಿನದ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಮಹಾಂತೇಶ ಕವಟಗಿಮಠ ಫೌಂಡೇಶನ್‌ ಉದ್ಘಾಟನಾ ಸಮಾರಂಭ ಜ.16 ರಂದು ಬೆಳಗ್ಗೆ 10.30ಕ್ಕೆ ಸವದತ್ತಿಯ ಕೆಎಲ್‌ಇ ಸಂಸ್ಥೆಯ ಎಸ್‌.ವಿ.ಎಸ್‌.ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮಾಜಮುಖಿ ಸೇವೆಗೆ ನನ್ನ ಜನ್ಮದಿನದ ಹಿನ್ನೆಲೆಯಲ್ಲಿ ಸ್ಥಾಪಿಸಲಾದ ಮಹಾಂತೇಶ ಕವಟಗಿಮಠ ಫೌಂಡೇಶನ್‌ ಉದ್ಘಾಟನಾ ಸಮಾರಂಭ ಜ.16 ರಂದು ಬೆಳಗ್ಗೆ 10.30ಕ್ಕೆ ಸವದತ್ತಿಯ ಕೆಎಲ್‌ಇ ಸಂಸ್ಥೆಯ ಎಸ್‌.ವಿ.ಎಸ್‌.ಬೆಳ್ಳುಬ್ಬಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಆವರಣದಲ್ಲಿ ನಡೆಯಲಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಕವಟಗಿಮಠ ಕುಟುಂಬ ಶತಮಾನಗಳಿಂದ ಸಮಾಜಮುಖಿ ಕಾರ್ಯದಲ್ಲಿ ತೊಡಗುತ್ತ ಬಂದಿದೆ. ಕೃಷಿ, ಶಿಕ್ಷಣ, ಸಹಕಾರಿ, ವ್ಯಾಪಾರ, ಸರಾಫಿವೃತ್ತಿ ಹಾಗೂ ರಾಜಕೀಯದಲ್ಲಿ ಮಹತ್ತರವಾಗಿ ತೊಡಗಿಸಿಕೊಂಡು ನಮ್ಮ ಕುಟುಂಬ ಮೂರು ತಲೆಮಾರುಗಳಿಂದ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತ ಬಂದಿದೆ. ಈಗ ನಮ್ಮ ತಾಯಿಯ ಆಸೆಯಂತೆ ನನ್ನ ಹೆಸರಿನಲ್ಲಿ ಫೌಂಡೇಶನ್‌ ಸ್ಥಾಪಿಸಲಾಗಿದೆ. ಈ ಮೂಲಕ ಶಿಕ್ಷಣ, ಆರೋಗ್ಯ,ಸಂಸ್ಕೃತಿ ಮತ್ತು ಸಂಸ್ಕಾರಹಾಗೂ ಸಹಕಾರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲಾಗುವುದು ಎಂದರು.

ಅಂದು ಮಹಾಂತೇಶ ಕವಟಗಿಮಠ ಫೌಂಡೇಶನ್‌ ಉದ್ಘಾಟನಾ ಸಮಾರಂಭ ಹಾಗೂ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಆರೋಗ್ಯ ಉಚಿತ ತಪಾಸಣೆ ಹಾಗೂ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಯಾಗಿ ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ ಜೋಶಿ ಆಗಮಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಗ್ರಂಥ ಲೋಕಾರ್ಪಣೆಗೊಳಿಸುವರು. ಸುತ್ತೂರ ಕ್ಷೇತ್ರದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ, ಹುಬ್ಬಳ್ಳಿ ಮೂರು ಸಾವಿರ ಮಠದ ಡಾ.ರಾಜಯೋಗೀಂದ್ರ ಸ್ವಾಮೀಜಿ, ಇಂಚಲದ ಶಿವಾನಂದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಸ್ವಾಮೀಜಿ, ನಾಗನೂರು ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ, ಹೊಸದುರ್ಗ ಭಗೀರಥಪೀಠದ ಡಾ.ಪುರುಷೋತ್ತಮಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಕೆಎಲ್‌ಇ ಸಂಸ್ಥೆಯಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅಧ್ಯಕ್ಷತೆ ವಹಿಸುವರು. ಅಲ್ಲದೇ, ಉತ್ತರ ಕರ್ನಾಟಕ 75 ಮಠಾಧೀಶರು ಆಗಮಿಸುವರು. 10 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.

ನಾನು ಬೆಳಗಾವಿ ಬಿಜೆಪಿ ಟಿಕೆಟ್‌ ಆಕಾಂಕ್ಷಿ: ಕವಟಗಿಮಠ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಕ್ಷೇತ್ರದಿಂದ ಸ್ಪರ್ಧಿಸಲು ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದೇನೆ. ಪಕ್ಷ ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ರಾಜಕೀಯದಲ್ಲಿ ನಾನು ಏಳುಬೀಳುಗಳನ್ನು ಕಂಡಿದ್ದೇನೆ. ಚುನಾವಣೆಯಲ್ಲಿ ಸೋತಿದ್ದರೂ ನಾನು ಮನೆಯಲ್ಲಿ ಕುಳಿತುಕೊಳ್ಳಲಿಲ್ಲ. ಜನ ಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡಿದ್ದೇನೆ. ಹಾಗಾಗಿ, ಜನ ನನ್ನ ಜೊತೆಗಿದ್ದಾರೆ. ಪಕ್ಷ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನನಗೆ ಅವಕಾಶ ನೀಡಿದರೆ ಜನರ ಋಣ ತೀರಿಸುವೆ. ಪಕ್ಷವು ನನ್ನನ್ನು ಗುರುತಿಸುವ ವಿಶ್ವಾಸವಿದೆ ಎಂದು ತಿಳಿಸಿದರು.

ಈ ವೇಳೆ ಕೆ.ವಿ.ಪಾಟೀಲ, ಶರತಚಂದ್ರ ಕವಟಗಿಮಠ, ಸಿ ಆರ್ ಪಾಟೀಲ, ಪ್ರಮೋದ ಕೋಚರಿ, ಶಿವಯೋಗಿಮಠ, ರಾಜೇಂದ್ರ ಮುತಗೇಕರ, ಪ್ರಶಾಂತ ಹಿರೇಮಠ ಇದ್ದರು.

------------ಮಹಾರಾಷ್ಟ್ರಸರ್ಕಾರದ ಮಹಾತ್ಮ ಫುಲೆ ಜನಾರೋಗ್ಯ ವಿಮೆ ಕೆಎಲ್‌ಇ ಆಸ್ಪತ್ರೆಯಲ್ಲಿ ಜಾರಿಯಲ್ಲಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.

-ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ ಮಾಜಿ ಸದಸ್ಯ.