ಭಾರತೀಯ ಕುಟುಂಬ ಪದ್ಧತಿ ಜನಜನಿತವಾಗಿದೆ

| Published : Jan 28 2025, 12:45 AM IST

ಸಾರಾಂಶ

ಸಣ್ಣಪುಟ್ಟ ಕಾರಣಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿದೆ.

ಮಹೇಂದ್ರ ದೇವನೂರುಕನ್ನಡಪ್ರಭ ವಾರ್ತೆ ಮೈಸೂರುಸಣ್ಣ, ಪುಟ್ಟ ವಿಷಯಗಳಿಗೆ ವಿಚ್ಛೇದನ ಪಡೆಯುತ್ತಿರುವ ಈ ಸಂದರ್ಭದಲ್ಲಿ ಭಾರತೀಯ ವಸುದೈವಕುಟುಂಬ ಪದ್ಧತಿಯು ಜನಜನಿತವಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಹೇಳಿದರು.ಶ್ರೀ ಸುತ್ತೂರು ಕ್ಷೇತ್ರದಲ್ಲಿ ಸೋಮವಾರ ಆಯೋಜಿಸಿದ್ದ ಸಾಮೂಹಿಕ ವಿವಾಹ ಮಹೋತ್ಸವ ಉದ್ಘಾಟಿಸಿ ಅವರು ಮಾತನಾಡಿ, ಭಾರತದಲ್ಲಿನ ವಸುದೈವ ಕುಟುಂಬಕಂ, ಆಚಾರ- ವಿಚಾರ, ಪರಂಪರೆಯನ್ನು ನಾವು ಅಳವಡಿಸಿಕೊಂಡಿರುವುದರಿಂದ ವಿದೇಶೀಯರು ಭಾರತದ ಬಗ್ಗೆ ಅಧ್ಯಯನ ಮಾಡುತ್ತಿದ್ದಾರೆ. ಸಣ್ಣಪುಟ್ಟ ಕಾರಣಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿದೆ. ಇದರಿಂದಾಗಿ ಭಾರತೀಯ ಪರಂಪರೆಯತ್ತ ನೋಡಲಾಗುತ್ತಿದೆ. ವಿವಿಧ ಕಾರಣಕ್ಕಾಗಿ ವಿದೇಶಗಳಲ್ಲಿ ವಿಚ್ಛೇದನ ಪ್ರಕರಣ ಹೆಚ್ಚಾಗುತ್ತಿರುವುದನ್ನು ನೋಡುತ್ತಿದ್ದೇವೆ ಎಂದರು.ಭಾರತದಲ್ಲಿ ವಿಚ್ಛೇದನವು ಯಾವುದೋ ಕಾರಣಕ್ಕೆ ನಡೆದು ಹೋಗುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ವಿಚ್ಛೇದನ ಹೆಚ್ಚಾಗುತ್ತಿದೆ. ಭಾರತೀಯ ಪರಂಪರೆಯ ಅಧ್ಯಯನ ಮಾಡುವುದಕ್ಕಾಗಿ ವಿದೇಶಿಯರು ಬರುತ್ತಿದ್ದಾರೆ. ಬಡತನ, ಸಿರಿತನದ ಸೋಂಕಿಲ್ಲದೆ ಸತಿಪತಿಗಳು ಪರಸ್ಪರ ಹೊಂದಾಗಿ ಬಾಳುತ್ತಿದ್ದಾರೆ ಎಂದರು.ಇತ್ತೀಚಿನ ದಿನಗಳಲ್ಲಿ ಸಾಮೂಹಿ ವಿವಾಹಗಳನ್ನು ಒಂದೇ ದಿನ ಒಂದೇ ಮುಹೂರ್ತದಲ್ಲಿ ನಡೆಸುವುದು ಕಷ್ಟ. ಇರುವ ಒಬ್ಬಿಬ್ಬರು ಮಕ್ಕಳಿಗೆ ಮದುವೆ ಮಾಡುವುದೇ ಕಷ್ಟವಾಗಿದೆ. ಅಂತದ್ದರಲ್ಲಿ ಸುತ್ತೂರಿನಲ್ಲಿ 155 ಜೋಡಿಗೆ ಸಾಮೂಹಿಕ ವಿವಾಹ ನೆರವೇರಿಸುವುದು ಸುಲಭದ ಮಾತಲ್ಲ. ಅದೊಂದು ಪವಾಡ ಎಂದು ಅವರು ಹೇಳಿದರು.ಜಾತ್ರಾ ಮಹೋತ್ಸವದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸುವುದು ಮಾತ್ರವಲ್ಲದೆ, ಪ್ರತಿ ತಿಂಗಳೂ ಸಾಮೂಹಿಕ ವಿವಾಹ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ನಾವು ಭಾಷಣದಲ್ಲಿ ಸರಳ ವಿವಾಹದ ಬಗ್ಗೆ ಮಾತನಾಡುತ್ತೇವೆ. ಆದರೆ ಮಾಡುವುದಿಲ್ಲ. ಮಾತಿಗೂ ಕೃತಿಗೂ ಸಂಬಂಧ ಇರುವುದಿಲ್ಲ. ತತ್ತ್ವಗಳನ್ನು ಹೇಳಿದರೂ ಆಚರಿಸುವುದಿಲ್ಲ ಎಂದರು.ಶ್ರೀಮಠದಲ್ಲಿ ತಾತ್ವಿಕ ಶಕ್ತಿಯನ್ನು ಮೈಗೂಡಿಸಿಕೊಂಡು ಮಠದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅಕ್ಷರ, ಅನ್ನ, ದಾಸೋಹದ ಕೆಲಸ ನಿರಂತರವಾಗಿ ನಡೆಯುತ್ತಿದೆ. ಶ್ರೀಮಠದಲ್ಲಿ ದನ ಕಾಯುತ್ತಿದ್ದವನಿಗೆ ಅಕ್ಷರ ಕಲಿಯುವ ಅವಕಾಶ ಕಲ್ಪಿಸಿ, ಇಂದು ಆತನನ್ನು ಸುಶಿಕ್ಷಿತನನ್ನಾಗಿ ಮಾಡಿರುವುದು ದೊಡ್ಡ ಪವಾಡ. ಇಲ್ಲಿ ನಾವು ಮಾಡಿರುವ ಎಲ್ಲಾ ಕರ್ಮಗಳನ್ನು ತೊಳೆದು ಪುಣ್ಯ ಕಟ್ಟಿಕೊಳ್ಳಬೇಕು ಎಂದು ಅವರು ಹೇಳಿದರು.ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಾತನಾಡಿ, ಸುತ್ತೂರು ಮಠದಲ್ಲಿ ಧರ್ಮ ಕಾರ್ಯದ ಜತೆಗೆ ಸಾಮೂಹಿಕ ವಿವಾಹ ನಡೆಸಿಕೊಂಡು ಬರಲಾಗುತ್ತಿದೆ. ಒಂದು ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ, ವಸತಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜಾತ್ರಾ ಮಹೋತ್ಸವ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ, ಧಾರ್ಮಿಕ, ಆಧ್ಯಾತ್ಮಿಕ, ರೈತರಿಗೆ ಅನುಕೂಲವಾಗುವ ಕೃಷಿ ಮೇಳ ನಡೆಯುತ್ತಿದೆ. ಮಕ್ಕಳ ಜವಾಬ್ದಾರಿ ಹೊರುವ ಜತೆಗೆ ಸನ್ಮಾರ್ಗದಲ್ಲಿ ಹೋಗುವಂತೆ ಮಕ್ಕಳನ್ನು ತಯಾರಿಸುವುದು ಸಾಮಾಜಿಕ ದೊಡ್ಡ ಹೊಣೆಗಾರಿಕೆ ಎಂದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಮಾತನಾಡಿ, ಸುತ್ತೂರು ಮಠದ ತಪೋಭೂಮಿಯಲ್ಲಿ ಅನ್ನ, ಅಕ್ಷರ, ಧಾರ್ಮಿಕ, ಆರೋಗ್ಯ ದಾಸೋಹವೇ ನಡೆಯುತ್ತಿದೆ. ಸಾಮೂಹಿಕ ವಿವಾಹದಲ್ಲಿ ಬಡವರ ಮಕ್ಕಳು ಮದುವೆಯಾಗಿ ನೆಮ್ಮದಿಯ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಸುತ್ತೂರು ಮಠವು ಅನ್ನ, ಅಕ್ಷರ ದಾಸೋಹದ ಮೂಲಕ ಸಮಾಜಕ್ಕೆ ನೆರವಾಗಿದೆ. ನಮ್ಮ ಪರಂಪರೆಯನ್ನು ಉಳಿಸಿಕೊಳ್ಳಬೇಕಾದರೆ ಮಠಮಾನ್ಯಗಳ ಕೊಡುಗೆ ಅಪಾರ ಎಂದರು.ಗದಗದ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ, ಪಳನಿ ಪುಲಿಪ್ಪನಿ ಸಿದ್ಧರ್ ಆಶ್ರಮದ ಜಲಾರ್ ಶಿವಾನಂದ ಪುಲಿಪ್ಪನಿ ಪಾತಿರಕರ ಸ್ವಾಮೀಜಿ ಮಾತನಾಡಿದರು.ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಮಾತನಾಡಿ, ಸುತ್ತೂರು ಜಾತ್ರೆ, ಅಮೋಘ, ವೈಭವಪೂರ್ಣ ಉತ್ಸವ. ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಮ್ಮ ಬಳಹ ವರ್ಷಗಳ ತಪಸ್ಸು, ಪರಿಶ್ರಮದಿಂದ ಇಷ್ಟು ದೊಡ್ಡ ಸಂಸ್ಥೆ ಕಟ್ಟಿದ್ದಾರೆ. ಇದು ನಮ್ಮ ದೇಶಕ್ಕೆ ಹೆಮ್ಮೆ ತರುವ ವಿಷಯ. ಕರ್ನಾಟಕ ಮಾತ್ರವಲ್ಲದೆ ದುಬೈ, ಅಮೆರಿಕಾದಲ್ಲೂ ಕನ್ನಡದ ಹಿರಿಮೆ, ಗರಿಮೆ, ಪುರಾತನ ಜ್ಞಾನದ ಬೆಳಕು ಪಸರಿಸುತ್ತಿರುವ ಶ್ರೇಯ ಶ್ರೀಗಳಿಗೆ ಸಲ್ಲುತ್ತದೆ ಎಂದರು.ರಾಜೇಂದ್ರ ಶ್ರೀಗಳ ಆಶೀರ್ವಾದ, ತಪೋಬಲದಿಂದ ಪ್ರಪಂಚದೆಲ್ಲೆಡೆ ಸನಾತನ ಧರ್ಮದ ಸುಗಂಧ ಹರಡುವಂತಾಗಿದೆ. ದೀಪವಿಲ್ಲದ ಗುಡಿ, ತಾಯಿ ಇಲ್ಲದ ಮನೆ ಎಂದೂ ಸರಿಯಾಗಿರುವುದಿಲ್ಲ. ಹಾಗೆಯೇ ಗುರುವಿಲ್ಲದವರ ಜೀವನವೂ ಅಪೂರ್ಣ. ಶ್ರೀಗಳು ಗುರು ಸ್ಥಾನದಲ್ಲಿ ನಿಂತು ಪ್ರತಿ ವರ್ಷ ಯಶಸ್ವಿಯಾಗಿ ಜಾತ್ರೆ ನಡೆಸುತ್ತಿದ್ದಾರೆ. ಎಲ್ಲರನ್ನು ಮಮತೆಯಿಂದ ಕಾಣುತ್ತಿದ್ದಾರೆ. ಎಲ್ಲರೂ ಒಂದು ಕಡೆ ಸೇರಿ ಸಮಾಜದ ಏಳಿಗೆಗೆ ಭಗವಂತನಲ್ಲಿ ಪ್ರಾರ್ಥಿಸುವುದೇ ಜಾತ್ರೆ ಎಂದರು.ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿರುವುದರಿಂದ ಭಗವಂತ ಎಲ್ಲರಿಗೂ ಆಶೀರ್ವಾದ ಮಾಡಿದ್ದಾನೆ. ಭಾರತ ಜಗದ್ಗುರು ಆಗಿ ದೇಶದ ಕೀರ್ತಿ ವಿಶ್ವದೆಲ್ಲೆಡೆ ಪಸರಿಸುತ್ತಿದ್ದು, ದೇಶದ ಸೌಂದರ್ಯ ಸವಿಯುತ್ತಿದ್ದಾರೆ ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಎಸ್ಪಿ ಎನ್. ವಿಷ್ಣುವರ್ಧನ್, ಉಡಿಗಾಲ ಕುಮಾರಸ್ವಾಮಿ ಇದ್ದರು.