ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಪ್ರಾಚೀನ ಕಾಲದಲ್ಲಿ ನಮ್ಮ ಹಿರಿಯರು ಆರೋಗ್ಯ, ಚಿಕಿತ್ಸೆಗಾಗಿ ಗಿಡಮೂಲಿಕೆಗಳನ್ನು ಅವಲಂಬಿಸಿದ್ದರು. ಈ ಸಸ್ಯ ಔಷಧ ಕುರಿತ ಜ್ಞಾನವೇ ಆಯುರ್ವೇದವೆಂದು ಕರೆಯಲಾಗುತ್ತದೆ. ತೃತೀಯ ಜಗತ್ತಿನ ದೇಶಗಳಲ್ಲಿ ಒಂದಾದ ಭಾರತದಲ್ಲೂ ಸಸ್ಯಗಳ ದಾಖಲೀಕರಣ ಕ್ರಮಬದ್ಧವಾಗಿಲ್ಲ. ಹೀಗಾಗಿ, ತುರ್ತಾಗಿ ಔಷಧ ಸಸ್ಯಗಳ ರಕ್ಷಣೆ ಹಾಗೂ ದಾಖಲೀಕರಣ ಆಗಬೇಕಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.ನಗರದ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ, ಮೈಸೂರು ವಿವಿ ಸಸ್ಯಶಾಸ್ತ್ರ ಅಧ್ಯಯನ ವಿಭಾಗವು 9ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯ ಔಷಧಿ ಸಸ್ಯಗಳ ಮೊನೊಗ್ರಾಫ್ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.ದಶಕದ ಹಿಂದೆ ಶೇ.2 ರಷ್ಟು ಬಳಕೆಯಾಗುತ್ತಿದ್ದ ಆಯುರ್ವೇದ ಔಷಧ ಪ್ರಮಾಣವು ಪ್ರಸ್ತುತ ಶೇ.28ಕ್ಕೆ ಏರಿದೆ. ಹೀಗಾಗಿ, ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚು ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಮೊನೊಗ್ರಾಫ್ ಮಾಡುವ ಬಗೆಯನ್ನು ಕ್ರಮ ಬದ್ಧವಾಗಿ ಅರಿಯಬೇಕು ಎಂದು ಅವರು ಹೇಳಿದರು.ಸರ್ಕಾರಿ ಆಯುರ್ವೇದ ಮಹಾವಿದ್ಯಾಲಯದೊಂದಿಗೆ ಮೈಸೂರು ವಿವಿ ಒಪ್ಪಂದ ಮಾಡಿಕೊಂಡು ಸಂಶೋಧನಾ ಕ್ಷೇತ್ರದಲ್ಲಿ ಮಾಡುವ ಕಾರ್ಯದ ಬಗ್ಗೆ ಈಗಾಗಲೇ ಚರ್ಚೆ ನಡೆದಿದ್ದು, ಪರಿಣಾಮ ಈ ಕಾರ್ಯಾಗಾರ ಆಯೋಜಿಸಲಾಗಿದೆ. 207 ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವುದು ಸ್ವಾಗತಾರ್ಹ ಎಂದರು.ಪ್ರಕೃತಿ ಮೂಲದವರಾದರೂ ಅದರೊಂದಿಗೆ ಇರಲು ಇಷ್ಟಪಡುತ್ತಿಲ್ಲ. ನಗರೀಕರಣದ ಪರಿಣಾಮ ನಗರಗಳಿಗೇ ಹೆಚ್ಚು ಗಮನ ಕೊಡುತ್ತಿದ್ದೇವೆ. ಪೋಷಕರು, ಸ್ನೇಹಿತರು ಬದುಕಿನಲ್ಲಿ ಎಷ್ಟು ಮುಖ್ಯವೋ ಅಷ್ಟೇ ಗಿಡ ಮರಗಳೂ ಮುಖ್ಯವೆಂದು ಯುವ ಸಮುದಾಯ ಅರಿಯಬೇಕು. ಮಲೆನಾಡಿನಲ್ಲಿ ಒಂದು ಮನೆಯಿದ್ದರೆ, ಅದರ ಸುತ್ತ ಯಾವ್ಯಾವ ಗಿಡ ಇರಬೇಕೆಂದು ಹಿರಿಯರು ನಿರ್ಧರಿಸಿ ಬೆಳೆಸುತ್ತಿದ್ದರು. ಇದೀಗ ಔಷಧೀಯ ಗುಣವುಳ್ಳ ಸಸ್ಯಗಳನ್ನು ಯಾರಿಗೂ ಗುರುತಿಸಲೂ ಆಗುತ್ತಿಲ್ಲ. ಅವುಗಳ ಸಂಖ್ಯೆಯೂ ಕಡಿಮೆ ಆಗುತ್ತಿದೆ. ಪಶ್ಚಿಮಘಟ್ಟಗಳಲ್ಲೇ ಈ ಪರಿಸ್ಥಿತಿ ಬಂದಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ಸರ್ಕಾರಿ ಆಯುರ್ವೇದ ಕಾಲೇಜು ನಿವೃತ್ತ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ಸರ್ಕಾರಿ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಕಾಲೇಜು ಪ್ರಾಂಶುಪಾಲ ಡಾ. ರಾಧಾಕೃಷ್ಣ ರಾಮರಾವ್, ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದ ಸಹಾಯಕ ನಿರ್ದೇಶಕ ಡಾ.ಎಲ್.ಎನ್. ಶೆಣೈ, ಪ್ರೊ. ಗುರುಬಸವರಾಜ್, ಸಸ್ಯಶಾಸ್ತ್ರ ವಿಭಾಗದ ವಿಭಾಗದ ಮುಖ್ಯಸ್ಥ ಪ್ರೊ. ರಾಜ್ ಕುಮಾರ್ ಎಚ್. ಗಾರಂಪಳ್ಳಿ, ಪ್ರೊ. ಜನಾರ್ಧನ್, ಪ್ರೊ. ಅಮೃತೇಶ್ ಮೊದಲಾದವರು ಇದ್ದರು.----ಕೋಟ್...ಒಂದು ಗಿಡಮೂಲಿಕೆಯೂ ವಿವಿಧ ಔಷಧೀಯ ಗುಣ ಹೊಂದಿರುತ್ತದೆ. ಔಷಧ ಸಸ್ಯಗಳ ರಕ್ಷಿಸುವ ಹಾಗೂ ಅವುಗಳ ಬಗ್ಗೆ ಅರಿವು ಮೂಡಿಸುವ ಕಾರ್ಯ ಎಲ್ಲೆಡೆ ಆಗಬೇಕು.- ಡಾ. ಸತ್ಯನಾರಾಯಣ ಭಟ್, ನಿವೃತ್ತ ಪ್ರಾಂಶುಪಾಲ, ಸರ್ಕಾರಿ ಆಯುರ್ವೇದ ಕಾಲೇಜು