ಕಿಮ್ಸ್‌ನಲ್ಲಿ ಮಕ್ಕಳ ತೀವ್ರ ನಿಗಾ ಘಟಕ ಉದ್ಘಾಟನೆ

| Published : Feb 12 2024, 01:30 AM IST

ಸಾರಾಂಶ

ಕಿಮ್ಸ್‌ ಆಸ್ಪತ್ರೆಯಲ್ಲಿ ನೂತನವಾಗಿ ಉನ್ನತ ದರ್ಜೆಗೇರಿಸಿರುವ ಕೊಠಾರಿ ಮಾನವ ಸೇವಾ ಕೇಂದ್ರ ಸುಧಾರಿತ ಮಕ್ಕಳ ತೀವ್ರ ನಿಗಾ ಘಟಕ (ಪಿಡಿಯಾಟ್ರಿಕ್‌ ಐಸಿಯು)ವನ್ನು ಭಾನುವಾರ ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ನೂತನವಾಗಿ ಉನ್ನತ ದರ್ಜೆಗೇರಿಸಿರುವ ಕೊಠಾರಿ ಮಾನವ ಸೇವಾ ಕೇಂದ್ರ ಸುಧಾರಿತ ಮಕ್ಕಳ ತೀವ್ರ ನಿಗಾ ಘಟಕ (ಪಿಡಿಯಾಟ್ರಿಕ್‌ ಐಸಿಯು)ವನ್ನು ಭಾನುವಾರ ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು.

ಉದ್ಘಾಟನೆ ಮಾಡಿದ ಮಣಕವಾಡದ ಶ್ರೀಗುರು ಅನ್ನದಾನೇಶ್ವರ ಮಹಾಂತಮಠದ ಅಭಿನವ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ಉಳ್ಳವರು ದಾನ ಮಾಡುವ ಮೂಲಕ ಸರಕಾರಿ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ಅಭಿವೃದ್ಧಿ ಮಾಡಿ ಬಡವರ ಪಾಲಿಗೆ ಉತ್ತಮ ವ್ಯವಸ್ಥೆ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.

ಬಂಗಾರ ಧರಿಸಿದವರು, ದೊಡ್ಡ ಮನೆ, ಆಸ್ತಿಯುಳ್ಳವರು ದೊಡ್ಡವರಲ್ಲ. ಜಗತ್ತಿನಲ್ಲಿ ಕೆಳಗೆ ಬಿದ್ದವರನ್ನು ಮೇಲೆ ಎತ್ತುವವರು ದೊಡ್ಡವರಾಗುತ್ತಾರೆ. ಇಂತಹ ಅಪರೂಪದ ಸಾಲಿಗೆ ಸೋಹನಲಾಲ್‌ ಕೊಠಾರಿ ಅವರು ಸೇರುತ್ತಾರೆ. ಪ್ರತಿಯೊಬ್ಬರೂ ಒಳ್ಳೆಯ ಕಾರ್ಯ ಮಾಡಬೇಕು ಎಂದು ತಿಳಿಸಿದರು.

ಕಿಮ್ಸ್‌ ಪ್ರಭಾರ ನಿರ್ದೇಶಕ ಡಾ. ಎಸ್‌.ಎಫ್‌. ಕಮ್ಮಾರ ಮಾತನಾಡಿ, ಮಕ್ಕಳ ಆರೋಗ್ಯ ಸೌಲಭ್ಯ ಮತ್ತು ಸೇವೆಗಳನ್ನು ಹೆಚ್ಚಿಸುವಲ್ಲಿ ಕೊಠಾರಿ ಮಾನವ ಸೇವಾ ಕೇಂದ್ರ ಪ್ರೋತ್ಸಾಹದಾಯಕವಾಗಿದೆ. ಹೆಚ್ಚಿನ ದಾನಿಗಳು ಇಂತಹ ಕಾರ್ಯಕ್ಕೆ ಮುಂದಾದರೆ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದರು.

ಮಾಜಿ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಮಾತನಾಡಿ, ಇದೊಂದು ಉತ್ತಮ ಕಾರ್ಯ. ಮೂರು ತಿಂಗಳ ಅವಧಿಯಲ್ಲಿ ಇಂತಹ ಕಾರ್ಯ ಮಾಡಿ ಕೊಟ್ಟಿದ್ದಕ್ಕೆ ಕಿಮ್ಸ್‌ ಪರ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ದಾನಿ ಸೋಹನಲಾಲ್‌ ಕೊಠಾರಿ ಮಾತನಾಡಿ, ಹುಬ್ಬಳ್ಳಿ ಜನ ನನ್ನ ಕೈ ಹಿಡಿದು ಬೆಳೆಸಿದ್ದಾರೆ. ಅವರ ಋುಣ ನನ್ನ ಮೇಲಿದೆ. ಜನರ ಸೇವೆ ಮಾಡಬೇಕೆಂಬ ನಿಟ್ಟಿನಲ್ಲಿ ಈ ಕೇಂದ್ರ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಡಿಮ್ಹಾನ್ಸ್‌ ಪ್ರಭಾರ ನಿರ್ದೇಶಕ ಡಾ. ಅರುಣಕುಮಾರ ಸಿ. ಅವರು ಸಚಿವ ಸಂತೋಷ ಲಾಡ್‌ ಕಳಿಸಿದ್ದ ಸಂದೇಶವನ್ನು ಓದಿದರು.

ಆಲ್‌ ಇಂಡಿಯಾ ಜೈನ್‌ ಯೂಥ್‌ ಫೆಡರೇಷನ್‌ನ ಮಹಾವೀರ ಲಿಂಬ್‌ ಸೆಂಟರ್‌ ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಘಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.

ಧಾರವಾಡ ಡಿಎಚ್‌ಒ ಡಾ. ಶಶಿ ಪಾಟೀಲ, ಸಿಎಒ ಶಿವಾನಂದ ಭಜಂತ್ರಿ, ಡಾ. ವಿನೋದ ರಟಗೇರಿ, ಡಾ.ಪ್ರಕಾಶ ವಾರಿ, ನರೇಶಲಾಲ್‌ ಕೊಠಾರಿ, ಸುರೇಶಕುಮಾರ ಕೊಠಾರಿ, ಮಜೇಥಿಯಾ ಫೌಂಡೇಷನ್‌ ಚೇರ್ಮನ್‌ ಜಿತೇಂದ್ರ ಮಜೇಥಿಯಾ ಇತರರು ಇದ್ದರು.