ಕನ್ನಡಪ್ರಭ ವಾರ್ತೆ ನಾಗಮಂಗಲ
ತಾಲೂಕಿನ ಹಾಲ್ತಿ ಗ್ರಾಮದ ಹೊರವಲಯದ ಶ್ರೀಮಲ್ಲಿಕಾರ್ಜುನಸ್ವಾಮಿ ದೇವಾಲಯದ ಮಹಾಧ್ವಾರದ ನೂತನ ರಾಜಗೋಪುರ ಉದ್ಘಾಟನೆ ಹಾಗೂ ಮಹಾ ಕುಂಭಾಭಿಷೇಕದ ಪ್ರಯುಕ್ತ ಫೆ.11ರಿಂದ 13ರವರೆಗೆ ಹೋಮ ಹವನಾದಿ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನಡೆಯಲಿವೆ ಎಂದು ಆದಿಚುಂಚನಗಿರಿಯ ಸ್ವರ್ಗಾಶ್ರಮ ಹಾಲ್ತಿ ಹಾಗೂ ಮೈಸೂರು ಶಾಖಾ ಮಠದ ವ್ಯವಸ್ಥಾಪಕ ಶ್ರೀಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.ತಾಲೂಕಿನ ಸ್ವರ್ಗಾಶ್ರಮ ಹಾಲ್ತಿ ಶಾಖಾ ಮಠದಲ್ಲಿ ಸೋಮವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಹಾಲ್ತಿ ಗ್ರಾಮದ ಪ್ರಕೃತಿ ಸೌಂದರ್ಯದ ಬೆಟ್ಟದ ಸಾಲಿನ ಗುಹೆಯಲ್ಲಿ ನೆಲೆಸಿರುವ ಉದ್ಭವ ಲಿಂಗದ ನೆತ್ತಿಯ ಮೇಲೆ ಸದಾಕಾಲ ಗಂಗಾಜಲ ಹರಿಯುವ ಶ್ರೀಮಲ್ಲಿಕಾರ್ಜುನಸ್ವಾಮಿ ಸನ್ನಿಧಿಯು ಪರಶುರಾಮರ ಕ್ಷೇತ್ರವೆಂದು ಖ್ಯಾತಿ ಹೊಂದಿದೆ. ಈ ದೇವಾಲಯವು ಮಾನವ ನಿರ್ಮಿತವಲ್ಲದ ಗುಹಾಂತರ ದೇವಾಲಯವಾಗಿದೆ ಎಂದರು.
ಇಂತಹ ಸುಂದರ ತಾಣದ ಬೆಟ್ಟದ ತಪ್ಪಲಿನಲ್ಲಿರುವ ಸ್ವರ್ಗಾಶ್ರಮದಲ್ಲಿ ನೆಲೆಸಿದ್ದ ಶ್ರೀಅಮರಾನಂದ ಪರಮಹಂಸ ಶ್ರೀಗಳು ನಾಡಿನಾದ್ಯಂತ ಆಧ್ಯಾತ್ಮಿಕ ಜ್ಞಾನವನ್ನು ಬೋಧಿಸುತ್ತಾ ಅಪಾರ ಭಕ್ತವೃಂದವನ್ನು ಗಳಿಸಿದ್ದರು. ಅವರ ತಪೋಬಲ ಹಾಗೂ ಭೈರವೈಕ್ಯ ಡಾ.ಬಾಲಗಂಗಾಧರನಾಥ ಶ್ರೀಗಳ ಕೃಪಾಶೀರ್ವಾದಿಂದ ಸ್ವರ್ಗಾಶ್ರಮದಲ್ಲಿ ಮಲ್ಲಿಕಾರ್ಜುನಸ್ವಾಮಿ, ಭ್ರಮರಾಂಬದೇವಿ ಹಾಗೂ ಪರಿವಾರ ದೇವತೆಗಳ ದೇಗುಲಗಳು ಲೋಕಾರ್ಪಣೆಗೊಂಡಿದ್ದು, ದೇವಾಲಯದ ಮಹಾದ್ವಾರದಲ್ಲಿ 64 ಅಡಿ ಎತ್ತರದ ರಾಜಗೋಪುರ ನಿರ್ಮಿಸಲಾಗಿದೆ ಎಂದರು.ನೂತನ ರಾಜಗೋಪುರ ಉದ್ಘಾಟನೆ ಹಾಗೂ ಕುಂಭಾಭಿಷೇಕದ ಪ್ರಯುಕ್ತ ಮೂರು ದಿನಗಳ ಕಾಲ ನಡೆಯುವ ವಿವಿಧ ಧಾರ್ಮಿಕ ಕೈಂಕರ್ಯಗಳ ದಿವ್ಯ ಸಾನಿಧ್ಯವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ವಹಿಸುವರು ಎಂದರು.
ಫೆ.11 ಮತ್ತು 12 ರಂದು ಗಂಗಾಪೂಜೆ, ಗಣಪತಿ ಪೂಜೆ, ಪುಣ್ಯಾಹ, ಸಂಕಲ್ಪ, ಪಂಚಗವ್ಯ ಸೇರಿದಂತೆ ಹಲವು ಬಗೆಯ ಹೋಮ ಹವನಾದಿ ಪೂಜಾ ವಿಧಿ ವಿಧಾನಗಳು, ನೂತನ ರಾಜಗೋಪುರ ಕಲಶಗಳಿಗೆ ಸಂಪ್ರೇಕ್ಷಣೆ, ಶಯ್ಯಾಧಿವಾಸ ಪೂಜೆ, ಪೂರ್ಣಾಹುತಿ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಈ ಧಾರ್ಮಿಕ ಕೈಂಕರ್ಯದಲ್ಲಿ ತಾಲೂಕಿನ ವಿವಿಧ ಗ್ರಾಮಗಳ 60 ಗ್ರಾಮದೇವತೆಗಳ ಉತ್ಸವ ಮೂರ್ತಿಗಳು ಪಾಲ್ಗೊಳ್ಳಲಿವೆ ಎಂದರು.
ಫೆ.13ರ ಶುಕ್ರವಾರ ಭ್ರಮರಾಂಬ ಸಮೇತ ಶ್ರೀಮಲ್ಲಿಕಾರ್ಜುನಸ್ವಾಮಿಗೆ ಮಹಾ ಕುಂಭಾಭಿಷೇಕದ ನಂತರ 64 ಅಡಿ ಎತ್ತರದ ನೂತನ ರಾಜಗೋಪುರವನ್ನು ಡಾ.ನಿರ್ಮಲಾನಂದನಾಥ ಶ್ರೀಗಳು ಲೋಕಾರ್ಪಣೆ ಮಾಡುವರು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಮಾಜಿ ಸಚಿವ ಸಾ.ರಾ.ಮಹೇಶ್, ಮಾಜಿ ಶಾಸಕ ಸುರೇಶ್‌ಗೌಡ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಮತ್ತು ಗಣ್ಯರು ಭಾಗಿಯಾಗಲಿದ್ದಾರೆ. ಲೋಕಕಲ್ಯಾಣಾರ್ಥವಾಗಿ ನಡೆಸುತ್ತಿರುವ ಈ ಧಾರ್ಮಿಕ ಕೈಂಕರ್ಯದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರ ಮತ್ತು ಶ್ರೀಗಳ ದರ್ಶನಾಶೀರ್ವಾದ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪಟ್ಟಣದ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಬಿ.ಕೆ.ಲೋಕೇಶ್ ಇದ್ದರು.