ಚಾ.ನಗರದಲ್ಲಿ ಸಾಯಿಬಾಬಾ ಮಂದಿರ ಲೋಕಾರ್ಪಣೆ

| Published : Jun 17 2024, 01:46 AM IST

ಸಾರಾಂಶ

ಚಾಮರಾಜನಗರದ ಫಾರೆಸ್ಟ್ ನರ್ಸರಿ ಹತ್ತಿರ ವಿವೇಕ ನಗರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಫಾರೆಸ್ಟ್ ನರ್ಸರಿ ಹತ್ತಿರ ವಿವೇಕ ನಗರದಲ್ಲಿ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಭಾನುವಾರ ಲೋಕಾರ್ಪಣೆಗೊಳಿಸಲಾಯಿತು.

ಶ್ರೀ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ವತಿಯಿಂದ ಸುಮಾರು ₹4 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಮಂದಿರ ಉದ್ಘಾಟನೆ ಪ್ರಯುಕ್ತ ಮಹಾರಾಷ್ಟ್ರದ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಪ್ರಧಾನ ಅರ್ಚಕ ಶ್ರೀ ಪಂಡಿತ್ ಅಮಿತ್ ದೇಶ್‌ಮುಕ್ ಅವರು ಹೋಮ, ಹವನ ದೇವತೆ ಕಾರ್ಯಗಳನ್ನು ನೆರವೇರಿದರು.

ಬಳಿಕ ತಿ.ನರಸೀಪುರದ ತ್ರಿವೇಣಿ ಸಂಗಮದಿಂದ ಜಲವನ್ನು ತಂದು ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಸಾಯಿಬಾಬಾ ಮಂದಿರಕ್ಕೆ ಕೊಂಡೊಯ್ದು ಸಾಯಿಬಾಬಾ ವಿಗ್ರಹ ಮತ್ತು ಧ್ಯಾನಾಂಜನೇಯ ಸ್ವಾಮಿ ಪ್ರಾಣ ಪ್ರತಿಷ್ಠಾಪನೆ, ಮಂದಿರದ ಮಹಾಕುಂಭಾಭಿಷೇಕ, ಮಹಾಮಂಗಳಾರತಿ ನಡೆಯಿತು. ಶನಿವಾರ ಗಣಪತಿ ಹೋಮ, ನವಗ್ರಹ ಹೋಮ, ವಾಸ್ತು ಹೋಮ, ಪ್ರಾಯಶ್ಚಿತ ಹೋಮ, ಸಂಜೆ ೪ಕ್ಕೆ ಪ್ರಧಾನ, ಶಾಂತಿ-ಪುಷ್ಟಿ, ಕುಟೀರ ಹೋಮಗಳು, ಪೂಜೆ, ಆರತಿ ನಡೆದವು. ಹರಿಕಥಾ ವಿದುಷಿ ಡಾ.ಮಾಲಿನಿ ಅವರಿಂದ ಶ್ರೀ ಶಿರಡಿ ಸಾಯಿಬಾಬಾ ವೈಭವದ ಕಥಾವಲೋಕನ ನಡೆಯಿತು. 3 ದಿನಗಳಿಂದ ಸಾವಿರಾರು ಭಕ್ತರು ದೇವರ ದರ್ಶನ ಪಡೆದರು.

ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಸಿ.ಪುಟ್ಟರಂಗಶೆಟ್ಟಿ ಆಗಮಿಸಿ ಪೂಜಾ ಕಾರ್ಯದಲ್ಲಿ ಭಾಗಿಯಾದರು. ಕಾರ್ಯ ಕ್ರಮದಲ್ಲಿ ಶಿರಡಿ ಸಾಯಿಬಾಬಾ ಧಾರ್ಮಿಕ ಮತ್ತು ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಕೀಲ ಕೆ.ಬಾಲಸುಬ್ರಹ್ಮಣ್ಯಂ, ಕಾರ್ಯಾಧ್ಯಕ್ಷ ಎಸ್‌ಪಿಕೆ ಉಮೇಶ್, ಕಾರ್ಯದರ್ಶಿ ಎಸ್‌ಪಿಕೆ ರಾಜು, ಲೋಕೇಶ್, ಟ್ರಸ್ಟ್‌ನ ಗೌರವಾಧ್ಯಕ್ಷ ಎಂ.ರಾಜು, ಸಹ ಕಾರ್ಯದರ್ಶಿ ಮುರುಗೇಶನ್, ಸದಸ್ಯರಾದ ವೇದಿ, ಶಕ್ತಿ, ಉತ್ತರಸ್ವಾಮಿ, ಸುಜನ್ ಟೈಲ್ಸ್ ರಾಮು ಮೊದಲಾದವರು ಇದ್ದರು.