ಮಂಗಳೂರಲ್ಲಿ ಕಿಯೋನಿಕ್ಸ್‌ ಐಟಿ ಪಾರ್ಕ್‌: ಅಧ್ಯಕ್ಷ ಶರತ್‌ ಬಚ್ಚೇಗೌಡ

| Published : Feb 07 2024, 01:47 AM IST

ಮಂಗಳೂರಲ್ಲಿ ಕಿಯೋನಿಕ್ಸ್‌ ಐಟಿ ಪಾರ್ಕ್‌: ಅಧ್ಯಕ್ಷ ಶರತ್‌ ಬಚ್ಚೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಮಂಗಳೂರು ನಗರದ ಡಾ.ಟಿ.ಎಂ.ಎ.ಪೈ ಇಂಟರ್‌ ನ್ಯಾಶನಲ್‌ ಕನ್ವೆಶನ್‌ ಸೆಂಟರ್‌ನಲ್ಲಿ ಮಂಗಳವಾರ ‘ಮಂಗಳೂರು ಟೆಕ್ನೋವಾಂಜಾ 3.0’ ನಲ್ಲಿ ಶರತ್‌ ಬಚ್ಚೇಗೌಡ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರಿನಲ್ಲಿ ಕಿಯೋನಿಕ್ಸ್‌ ಐಟಿ ಪಾರ್ಕ್ ಸ್ಥಾಪನೆ ಮಾಡಲು ಚಿಂತನೆ ನಡೆಯುತ್ತಿದೆ. ನಾಲ್ಕು ಎಕರೆ ಜಾಗದಲ್ಲಿ ಈ ಪಾರ್ಕ್‌ ಸ್ಥಾಪಿಸಲಿದ್ದು, ಐಟಿ, ಬಿಟಿಯ ಜತೆಗೆ ಮರೈನ್‌ ಬಯೋಟೆಕ್ನಾಲಜಿಗೂ ಆದ್ಯತೆ ನೀಡಲಾಗುವುದು ಎಂದು ಕಿಯೋನಿಕ್ಸ್‌ ಅಧ್ಯಕ್ಷ ಶರತ್‌ ಬಚ್ಚೇಗೌಡ ಹೇಳಿದರು.ಅವರು ನಗರದ ಡಾ.ಟಿ.ಎಂ.ಎ.ಪೈ ಇಂಟರ್‌ ನ್ಯಾಶನಲ್‌ ಕನ್ವೆಶನ್‌ ಸೆಂಟರ್‌ನಲ್ಲಿ ಮಂಗಳವಾರ ‘ಮಂಗಳೂರು ಟೆಕ್ನೋವಾಂಜಾ 3.0’ ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರತಿಭಾ ಪಲಾಯಾನವನ್ನು ತಡೆದು ಅವರಿಗೆ ಇಲ್ಲಿಯೇ ಉದ್ಯೋಗ ನೀಡಿದರೆ ಮಾತ್ರ ಆರ್ಥಿಕ ಅಭಿವೃದ್ಧಿಯ ಜತೆಗೆ ರಾಜ್ಯ, ದೇಶದ ಅಭಿವೃದ್ಧಿ ಸಾಧ್ಯವಿದೆ. ಇದೇ ಕಾರಣದಿಂದ ಬೆಂಗಳೂರು ಬಿಟ್ಟು ಉಳಿದ ನಗರಗಳಲ್ಲಿ ಕೂಡ ಉದ್ಯೋಗ ಅವಕಾಶ ಹೆಚ್ಚಾಗಬೇಕು ಎನ್ನುವ ಉದ್ದೇಶದಿಂದ ಟೈಯರ್‌-2, 3 ಸಿಟಿಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು. ಎಲೆಕ್ಟ್ರಾನಿಕ್ಸ್‌ ,ಐಟಿ ಮತ್ತು ಬಿಟಿ ಸೈನ್ಸ್‌ ಅಂಡ್‌ ಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ್‌ ಕೌರ್‌ ಮಾತನಾಡಿ, ಈಗಾಗಲೇ ಬೆಂಗಳೂರು ಬಿಟ್ಟು ಉಳಿದ ಮಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬಳ್ಳಾರಿಯಲ್ಲಿ ಐಟಿ, ಬಿಟಿಗೆ ಹೆಚ್ಚು ಮಹತ್ವ ನೀಡಲಾಗುತ್ತಿದೆ. ಸರ್ಕಾರ ಕೂಡ ನಾನಾ ಯೋಜನೆಗಳನ್ನು ತರುವ ಮೂಲಕ ಈ ಕ್ಷೇತ್ರದಲ್ಲಿ ಸಾಧಿಸುವ ಮಂದಿಗೆ ನೆರವಾಗುತ್ತಿದೆ. ಸ್ಟಾರ್ಟ್‌ಅಪ್‌ ಕಂಪನಿಗಳಿಗೆ ಈ ಹಿಂದೆ ಸರ್ಕಾರದ ಬಿಡ್‌ಗಳಲ್ಲಿ ಭಾಗವಹಿಸಲು ಕಷ್ಟವಾಗುತ್ತದೆ ಎನ್ನುವುದಕ್ಕೆ ಈ ನಿಯಮವಳಿಯಲ್ಲಿ ಸರಳತೆಯನ್ನು ತರಲಾಗಿದ್ದು, ಈ ಕ್ಷೇತ್ರದವರಿಗೆ ಪ್ರತ್ಯೇಕವಾದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ಕೆಡಿಇಎಂ ಸಿಇಒ ಸಂಜೀವ್‌ ಗುಪ್ತ ಮಾತನಾಡಿ, ಮಂಗಳೂರು ತಲಾ ಆದಾಯ ಹಾಗೂ ಜಿಡಿಪಿಯಲ್ಲಿ ಬೆಂಗಳೂರು ಬಿಟ್ಟರೆ ಮಂಗಳೂರಿಗೆ ನಂತರದ ಸ್ಥಾನವಿದೆ. ಈಗಾಗಲೇ ಇಲ್ಲಿನ ಕಂಪನಿಯೊಂದನ್ನು ವಿದೇಶಿ ಕಂಪನಿಯೊಂದು ಖರೀದಿ ಮಾಡಿದರೆ ಅಲ್ಲಿನ ಕಂಪನಿಯನ್ನು ಇಲ್ಲಿನ ಕಂಪನಿಯೊಂದು ಖರೀದಿ ಮಾಡುವ ಕೆಲಸ ಮಾಡಿರುವುದು ಇಲ್ಲಿನವರ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಕಳೆದೆರಡು ವರ್ಷದಲ್ಲಿ ಮಂಗಳೂರಿಗೆ 18 ಕಂಪನಿಗಳು ಬಂದಿದ್ದು, ಇನ್ನು 25-30 ಕಂಪನಿಗಳು ಬರುವ ಹಾದಿಯಲ್ಲಿದೆ ಎಂದರು.

ಕೆಡಿಇಎಂನ ಚೇರ್‌ಮನ್‌ ಬಿ.ವಿ.ನಾಯ್ಡು ಮಾತನಾಡಿ, ಇಲ್ಲಿನ ಶಿಕ್ಷಣ ಸಂಸ್ಥೆಗಳಿಂದ ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಂಡು ಹೊರಬರುತ್ತಿದ್ದಾರೆ. ಇಂತಹವರನ್ನು ಇಲ್ಲಿಯೇ ಉದ್ಯಮದಲ್ಲಿ ಅವಕಾಶ ನೀಡುವ ಕೆಲಸವಾದರೆ ಆರ್ಥಿಕ ವ್ಯವಸ್ಥೆ ಮತ್ತಷ್ಟು ಸುಧಾರಣೆ ಕಾಣುವ ಜತೆಯಲ್ಲಿ ಅಭಿವೃದ್ಧಿಯ ವಿಚಾರದಲ್ಲೂ ಉತ್ತಮ ಸ್ಥಾನಕ್ಕೆ ತಲುಪಲು ಸಾಧ್ಯವಿದೆ ಎಂದರು.

ಈ ಸಂದರ್ಭ ಐಟಿ, ಬಿಟಿ ಮತ್ತು ಎಸ್‌ಟಿ ಇಲಾಖೆಯ ಸಹಾಯಕ ಕಾರ್ಯದರ್ಶಿ ರುಚಿ ಬಿಂದಾಲ್‌, ಕೆಡಿಇಎಂ ಮಂಗಳೂರು ಕ್ಲಸ್ಟರ್‌ನ ಮುಖ್ಯಸ್ಥ ರೋಹಿತ್‌ ಭಟ್‌, ನಾನಾ ಕಂಪನಿಗಳ ಮುಖ್ಯಸ್ಥರಾದ ಅಜಿತ್‌ ಪೈ, ಆರ್‌.ಕೆ.ಚಾಂದ್‌, ಆರತಿ ಕುಚಿಬಟ್ಲಾ, ರೋಮಲ್‌ ಶೆಟ್ಟಿ, ಚಂದ್ರು ಐಯ್ಯರ್‌ ಸೇರಿದಂತೆ ಐಟಿ ಬಿಟಿಗೆ ಸೇರಿದ ಉದ್ಯಮಿಗಳು, ಕಂಪನಿ ಮುಖ್ಯಸ್ಥರು ಇದ್ದರು. ಕೆಡಿಇಎಂನ ಅರ್ಚನಾ ರಾಜೇಶ್‌ ನಿರೂಪಿಸಿದರು.

ಮಂಗ್ಳೂರಿನ ಇನ್‌ಕ್ಯುಬ್ಯುಶನ್‌ ಸೆಂಟರ್‌ ಮೇಲ್ದರ್ಜೆಗೆ ಚಿಂತನೆ-

ರಾಜ್ಯದಲ್ಲಿ ಅದರಲ್ಲೂ ಬೆಂಗಳೂರು ಒಂದರಲ್ಲಿಯೇ 14 ಬಿಸಿನೆಸ್‌ ಎಕ್ಸಲೆನ್ಸ್‌ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ ಸ್ಟಾರ್ಚ್‌ ಆಪ್‌ ಇನ್‌ಕ್ಯುಬ್ಯುಶನ್‌ ಸೆಂಟರ್‌ಗಳಾಗಿಯೂ ಕೂಡ ಕಾರ್ಯ ನಿರ್ವಹಿಸುತ್ತಿವೆ. ಇದು ಖಾಸಗಿ ಹಾಗೂ ಸರ್ಕಾರ ಜತೆಯಾಗಿ ನಡೆಸುತ್ತಿರುವ ಕೇಂದ್ರಗಳಾಗಿದೆ. ಮಂಗಳೂರಿನಲ್ಲಿ ಈಗ ಒಂದು ಕೇಂದ್ರವಿದ್ದು ಇದನ್ನು ಈ ಬಾರಿ ಮೇಲ್ದರ್ಜೆಗೆ ಏರಿಸುವ ಕೆಲಸವಾಗುತ್ತಿದೆ. ಮೈರೇನ್‌ ಬಯೋಟೆಕ್ನಾಲಜಿಗೆ ಹೆಚ್ಚಿನ ಅವಕಾಶಗಳಿದ್ದು, ಇದನ್ನು ಬಳಸಿಕೊಳ್ಳುವ ಯೋಜನೆ ಇಟ್ಟುಕೊಳ್ಳಲಾಗಿದ್ದು ಇದಕ್ಕೆ ಪೂರಕವಾಗುವಂತೆ ಇಲ್ಲಿನ ಮೀನುಗಾರಿಕಾ ಕಾಲೇಜುಗಳ ಸಹಕಾರವನ್ನು ಪಡೆದುಕೊಳ್ಳಲಾಗುತ್ತದೆ ಎಂದು ಎಲೆಕ್ಟ್ರಾನಿಕ್ಸ್‌ ,ಐಟಿ ಮತ್ತು ಬಿಟಿ ಸೈನ್ಸ್‌ ಅಂಡ್‌ ಟೆಕ್ನಾಲಜಿ ಇಲಾಖೆಯ ಕಾರ್ಯದರ್ಶಿ ಡಾ. ಏಕರೂಪ್‌ ಕೌರ್‌ ಹೇಳಿದರು.