ಚಿಕ್ಕಮಾದಿನಾಳದಲ್ಲಿ ಪುಸ್ತಕ ಗೂಡು ಅನಾವರಣ

| Published : Sep 16 2024, 01:55 AM IST

ಸಾರಾಂಶ

ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ 11 ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು.

ಕನಕಗಿರಿ ತಾಲೂಕಿನ 11 ಗ್ರಾಪಂಗಳಲ್ಲಿ ಈ ಕಾರ್ಯಕ್ರಮ: ರಾಜಶೇಖರ

ಕನ್ನಡಪ್ರಭ ವಾರ್ತೆ ಕನಕಗಿರಿ

ಕಲ್ಯಾಣ ಕರ್ನಾಟಕದಲ್ಲಿ ಮೊದಲ ಬಾರಿಗೆ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ಕೇಂದ್ರದಲ್ಲಿ ಪುಸ್ತಕ ಗೂಡನ್ನು ಲೋಕಾರ್ಪಣೆ ಮಾಡಲಾಗಿದ್ದು, ಓದುಗರು ಇದರ ಸದುಪಯೋಗ ಪಡೆಯುವಂತೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೆ. ರಾಜಶೇಖರ್ ಕೋರಿದರು.

ತಾಲೂಕಿನ ಚಿಕ್ಕಮಾದಿನಾಳ ಗ್ರಾಮದ ಮರಿಯಮ್ಮದೇವಿ ದೇಗುಲದ ಆವರಣದಲ್ಲಿ ಗ್ರಾಪಂ ವತಿಯಿಂದ ಪುಸ್ತಕ ಗೂಡು ವಿನೂತನ ಕಾರ್ಯಕ್ರಮಕ್ಕೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಇದೇ ಮಾದರಿಯಲ್ಲಿ ತಾಲೂಕಿನ 11 ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಯತ್ನಿಸಲಾಗುವುದು. ಓದುಗರಿಗೆ ತನ್ನ ವಾಸಸ್ಥಾನದಲ್ಲಿಯೇ ಒಂದು ವೇದಿಕೆ ಕಲ್ಪಿಸುವುದಕ್ಕಾಗಿ ಈ ಕಾರ್ಯಕ್ರಮ ಕಲ್ಯಾಣ ಕರ್ನಾಟಕದಲ್ಲಿ ಯಶಸ್ವಿಯಾಗಿ ಮುನ್ನಡೆ ಸಾಧಿಸುತ್ತಿದೆ ಎಂದರು.

ಆನಂತರ ರಾಜೀವ್ ಗಾಂಧಿ ಪಂಚಾಯತ್ ರಾಜ್ ಫೆಲೋಶಿಪ್ ಕಾರ್ಯಕ್ರಮದ ತಾಲೂಕಿನ ಫೆಲೋ ಆದ ಡಾ. ತಿಪ್ಪೇಸ್ವಾಮಿ ಮಾತನಾಡಿ, ಬಸ್ ನಿಲ್ದಾಣಗಳಲ್ಲಿ, ಉದ್ಯಾನಗಳಲ್ಲಿ, ಸಾರ್ವಜನಿಕ ಕಚೇರಿಗಳಲ್ಲಿ ಜನರ ಬಿಡುವಿನ ಸಮಯದಲ್ಲಿ ಪುಸ್ತಕ ಓದುವ ಹವ್ಯಾಸ ಮೂಡಲಿ ಎಂಬ ಧ್ಯೇಯದೊಂದಿಗೆ ಈ ಪುಸ್ತಕ ಗೂಡುಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಕಥೆ, ಕಾದಂಬರಿ, ನಿಯತಕಾಲಿಕೆಗಳಿದ್ದು, ಲಭ್ಯವಿರುವ ಪುಸ್ತಕಗಳನ್ನು

ಓದುವ ಇಲ್ಲವೇ ಮನೆಗೆ ತೆಗೆದುಕೊಂಡು ಓದಿ ಮರಳಿ ಗೂಡಿಗೆ ತಂದಿಡಲು ಅವಕಾಶವಿದೆ. ಇದು ಜನರಿಗೆ ಓದುವ ಹವ್ಯಾಸ ಮೂಡಿಸುವ ಉತ್ತಮ ಪರಿಕಲ್ಪನೆಯಾಗಿದೆ. ಜತೆಗೆ ಎಲ್ಲ ವಯೋಮಾನದ ಓದುಗರಿಗೆ ಆಸಕ್ತಿದಾಯಕವಾಗುವಂತೆ ಪುಸ್ತಕದ ಗೂಡು ವೇದಿಕೆ ಏರ್ಪಡಿಸುವ ಉದ್ದೇಶ ಒಳಗೊಂಡಿದೆ. ಅತಿ ಕಡಿಮೆ ವೆಚ್ಚದಲ್ಲಿ ಬೆಲೆ ಕಟ್ಟಲಾಗದ ಜ್ಞಾನವನ್ನು ಹಂಚುವ ಕಾರ್ಯ ಕೈಗೆತ್ತಿಕೊಂಡಿದ್ದು, ಮುಂದಿನ ದಿನಗಳಲ್ಲಿ ತಾಲೂಕು ವ್ಯಾಪ್ತಿಯ ಎಲ್ಲ ಗ್ರಾಪಂಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನ ಮಾಡಲಾಗುವುದು ಎಂದು ತಿಳಿಸಿದರು.

ಗ್ರಾಪಂ ಪಿಡಿಒ ಬಸವರಾಜ ಸಂಕನಾಳ, ಗ್ರಾಪಂ ಅಧ್ಯಕ್ಷೆ ಹನುಮವ್ವ ವಡ್ಡರಕಲ್ಲು, ಉಪಾಧ್ಯಕ್ಷೆ ಮಲ್ಲಮ್ಮ, ಸದಸ್ಯರು, ತಾಪಂ ವಿಷಯ ನಿರ್ವಾಹಕ ಯಂಕೋಬ ಕರಡೋಣ ಇದ್ದರು.