ಚಿಕ್ಕಮಗಳೂರುಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ₹22.06 ಕೋಟಿ ವೆಚ್ಚದಲ್ಲಿ ವಿವಿಧ ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾದ ಚಿಕ್ಕಮಗಳೂರು ರೈಲ್ವೆ ನಿಲ್ದಾಣವನ್ನು ಆನ್ಲೈನ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.
(ಎರಡೂ ಫೋಟೊ ಬಳಸಿ)
ಆನ್ಲೈನ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿಯಿಂದ ಲೋಕಾರ್ಪಣೆಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ₹22.06 ಕೋಟಿ ವೆಚ್ಚದಲ್ಲಿ ವಿವಿಧ ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಲಾದ ಚಿಕ್ಕಮಗಳೂರು ರೈಲ್ವೆ ನಿಲ್ದಾಣವನ್ನು ಆನ್ಲೈನ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಶುಕ್ರವಾರ ಲೋಕಾರ್ಪಣೆಗೊಳಿಸಿದರು.ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಚಿಕ್ಕಮಗಳೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನೂ ವರ್ಚುವಲ್ ಮೂಲಕ ಉದ್ಘಾಟಿಸಿದರು. ಇದರಿಂದ ಜಿಲ್ಲೆ ರೈಲ್ವೆ ಪ್ರಯಾಣಿಕರಿಗೆ ಸುಧಾರಿತ ಮೂಲಸೌಕರ್ಯ ಹಾಗೂ ಉತ್ತಮ ಪ್ರಯಾಣಿಕ ಸ್ನೇಹಿ ಸೌಲಭ್ಯಗಳು ಲಭ್ಯವಾಗಲಿವೆ.ಯೋಜನೆಯಡಿ ಅಸ್ತಿತ್ವದಲ್ಲಿದ್ದ ನಿಲ್ದಾಣದ ಕಟ್ಟಡವನ್ನು ಸಂಪೂರ್ಣವಾಗಿ ನವೀಕರಿಸಿ, ಆಧುನಿಕ ಒಳಾಂಗಣ ವಿನ್ಯಾಸ, ಸುಸಜ್ಜಿತ ಪೀಠೋಪಕರಣಗಳು, ಪ್ರಯಾಣಿಕರ ವಿಶ್ರಾಂತಿ ಕೊಠಡಿಗಳು, ಶೌಚಾಲಯಗಳು ಹಾಗೂ ಕ್ಯಾಂಟೀನ್ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. ಪ್ಲಾಟ್ಫಾರ್ಮ್ ಸಂಖ್ಯೆ 1, 2 ಮತ್ತು 3ರಲ್ಲಿ ಗ್ರಾನೈಟ್ ನೆಲಹಾಸು, ಟೈಲ್ಸ್ ಹಾಗೂ ದೃಷ್ಟಿ ದೋಷವುಳ್ಳ ಪ್ರಯಾಣಿಕರ ಅನುಕೂಲಕ್ಕಾಗಿ ಸ್ಪರ್ಶಸೂಚಕ ಟೈಲ್ಸ್ ಅಳವಡಿಸಲಾಗಿದೆ. ಅಲ್ಲದೆ, ಮಳೆ ಮತ್ತು ಬಿಸಿಲಿನಿಂದ ಪ್ರಯಾಣಿಕರಿಗೆ ರಕ್ಷಣೆ ಒದಗಿಸಲು ಮೂರು ಪ್ಲಾಟ್ಫಾರ್ಮ್ಗಳಲ್ಲಿಯೂ ಮೇಲ್ಛಾವಣಿ ನಿರ್ಮಿಸಲಾಗಿದೆ.ಪ್ಲಾಟ್ಫಾರ್ಮ್ಗಳ ನಡುವೆ ಪ್ರಯಾಣಿಕರು ಸುಗಮವಾಗಿ ಸಂಚರಿಸಲು 12 ಮೀಟರ್ ಅಗಲದ ವಿಶಾಲ ಪಾದಚಾರಿ ಮೇಲ್ಸೇತುವೆ ನಿರ್ಮಿಸಿರುವುದು ಕಾಮಗಾರಿಯ ಪ್ರಮುಖ ಆಕರ್ಷಣೆಯಾಗಿದೆ. ಹಿರಿಯ ನಾಗರಿಕರು ಹಾಗೂ ವಿಶೇಷ ಚೇತನರ ಅನುಕೂಲಕ್ಕಾಗಿ ಒಂದು ಲಿಫ್ಟ್ ಮತ್ತು ಎರಡು ಎಸ್ಕಲೇಟರ್ಗಳನ್ನು ಅಳವಡಿಸಲಾಗಿದೆ.ನಿಲ್ದಾಣದ ಮುಖ್ಯ ಪ್ರವೇಶದ್ವಾರದ ಸಂಚಾರ ಪ್ರದೇಶವನ್ನು ಅಭಿವೃದ್ಧಿಪಡಿಸಿ, ಸುಸಜ್ಜಿತ ವಾಹನ ನಿಲುಗಡೆ ವ್ಯವಸ್ಥೆ ಹಾಗೂ ಪ್ರತ್ಯೇಕ ಪಾದಚಾರಿ ಮಾರ್ಗಗಳನ್ನು ನಿರ್ಮಿಸಲಾಗಿದೆ. ನಿಲ್ದಾಣದ ಆವರಣದಲ್ಲಿ ಉದ್ಯಾನವನ ಮತ್ತು ಹಸಿರೀಕರಣ ಕಾಮಗಾರಿಗಳನ್ನು ಕೈಗೊಂಡು ಸೌಂದರ್ಯ ಹೆಚ್ಚಿಸಲಾಗಿದೆ.ಇದರೊಂದಿಗೆ ಪ್ರಯಾಣಿಕರಿಗೆ ರೈಲುಗಳ ಮಾಹಿತಿ ಸುಲಭವಾಗಿ ದೊರೆಯಲು ಕೋಚ್ ಸೂಚನಾ ಫಲಕಗಳು, ರೈಲು ಮಾಹಿತಿ ಫಲಕಗಳು, ಎಲ್ಇಡಿ ಸೂಚನಾ ಫಲಕಗಳು ಹಾಗೂ ಸಾರ್ವಜನಿಕ ಧ್ವನಿವರ್ಧಕ ವ್ಯವಸ್ಥೆ ಅಳವಡಿಸಲಾಗಿದೆ. ಆಧುನಿಕ ಬೆಳಕಿನ ವ್ಯವಸ್ಥೆ, ಎಲ್ಇಡಿ ಪ್ಲಾಟ್ಫಾರ್ಮ್ ನಾಮಫಲಕಗಳು ಮತ್ತು ನಿಲ್ದಾಣದ ಮುಂಭಾಗದ ಸೌಂದರ್ಯ ಹೆಚ್ಚಿಸುವ ಅಲಂಕಾರಿಕ ದೀಪಗಳನ್ನೂ ಅಳವಡಿಸಲಾಗಿದೆ.ನಿಲ್ದಾಣದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಹಿರಿಯ ಸಾಮಗ್ರಿ ವ್ಯವಸ್ಥಾಪಕ ಎಸ್. ರವಿ ಕುಮಾರ್, ಸಾಹಿತಿ ಬಿ. ತಿಪ್ಪೇರುದ್ರಪ್ಪ, ಸಹಾಯಕ ವಿಭಾಗೀಯ ಎಂಜಿನಿಯರ್ ಎನ್. ಪ್ರಶಾಂತ್ ಕುಮಾರ್ ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಚಿಕ್ಕಮಗಳೂರು ನಗರದ ವಿವಿಧ ಶಾಲಾ-ಕಾಲೇಜುಗಳಲ್ಲಿ ಆಯೋಜಿಸಿದ್ದ ಪ್ರಬಂಧ, ಚಿತ್ರಕಲೆ ಸೇರಿ ದಂತೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮ ವೀಕ್ಷಿಸಲು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ್ ಶೆಟ್ಟಿ, ಬಿಜೆಪಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಲ್ಮಡಪ್ಪ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
