ದಕ್ಷಿಣ ಭಾರತದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಮುಖ್ಯ ಆಡಳಿತ ಕಚೇರಿ ಸೆ.19 ರಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ) ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ದಕ್ಷಿಣ ಭಾರತದ ಪ್ರಮುಖ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಯಕ್ಸಂಬಾದ ಶ್ರೀ ಬೀರೇಶ್ವರ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿಯ ನೂತನ ಮುಖ್ಯ ಆಡಳಿತ ಕಚೇರಿ ಸೆ.19 ರಂದು ಮಧ್ಯಾಹ್ನ 1 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ಹಾಗೂ ನ್ಯಾಷನಲ್ ಕೋ-ಆಪರೇಟಿವ್ ಯೂನಿಯನ್ ಆಫ್ ಇಂಡಿಯಾ (ಎನ್‌ಸಿಯುಐ) ನಿರ್ದೇಶಕ ಅಣ್ಣಾಸಾಹೇಬ ಜೊಲ್ಲೆ ತಿಳಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ನೂತನ ಕಚೇರಿಯನ್ನು ಉದ್ಘಾಟಿಸಲಿದ್ದು, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕೇಂದ್ರ ಸಹಕಾರ ರಾಜ್ಯ ಸಚಿವ ಮುರಳೀಧರರಾವ್ ಮೋಹೋಳ, ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್.ಅಶೋಕ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ. ಕಳೆದ ವರ್ಷ ಅಮಿತ್ ಶಾ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಗೆ ಯೋಜಿಸಲಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿಕೆಯಾಗಿತ್ತು. ಇದೀಗ ಸೆ.19ರಂದು ಉದ್ಘಾಟನೆಗೆ ದಿನಾಂಕ ನಿಗದಿಯಾಗಿದ್ದು, ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ. ಸಂಸ್ಥೆಯು ಪ್ರಸ್ತುತ 4.60 ಲಕ್ಷ ಸದಸ್ಯರನ್ನು ಹೊಂದಿದ್ದು, ₹5,667 ಕೋಟಿ ಠೇವಣಿ ಹಾಗೂ ₹4,038 ಕೋಟಿ ಸಾಲ ನೀಡಿದೆ. ₹51.04 ಕೋಟಿ ನಿವ್ವಳ ಲಾಭ ಗಳಿಸಿದ್ದು, ₹9,700 ಕೋಟಿ ಒಟ್ಟು ವ್ಯವಹಾರ ನಡೆಸಿದೆ ಎಂದು ತಿಳಿಸಿದ್ದಾರೆ.ಆಧುನಿಕ ಸೌಲಭ್ಯಗಳೊಂದಿಗೆ ಮುಖ್ಯ ಕಚೇರಿ:

ಯಕ್ಸಂಬಾದಲ್ಲಿ ವಿಶಾಲ ಪ್ರದೇಶದಲ್ಲಿ ನಿರ್ಮಿಸಿರುವ ನೂತನ ಮುಖ್ಯ ಕಚೇರಿಯಲ್ಲಿ ಆಡಳಿತ ಕಚೇರಿ, ಸಮುದಾಯ ಭವನ, ಸಿಬ್ಬಂದಿ ವಸತಿ, ಸೌರ ವಿದ್ಯುತ್ ವ್ಯವಸ್ಥೆ, ಉದ್ಯಾನ ಹಾಗೂ ವಾಹನ ನಿಲುಗಡೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಸುಮಾರು 80,800 ಚದರ ಅಡಿ ವಿಸ್ತೀರ್ಣದ ಮುಖ್ಯ ಆಡಳಿತ ಕಟ್ಟಡದಲ್ಲಿ 250 ಸಿಬ್ಬಂದಿ ಕಾರ್ಯನಿರ್ವಹಿಸಲು ವ್ಯವಸ್ಥೆ ಮಾಡಲಾಗಿದೆ.

ಮುಖ್ಯ ಕಚೇರಿ ಆವರಣದಲ್ಲಿ ನಿರ್ಮಿಸಿರುವ ಶ್ರೀ ಬೀರೇಶ್ವರ ಭವನ ಹವಾನಿಯಂತ್ರಿತ ಸಮುದಾಯ ಭವನವಾಗಿದ್ದು, ಸುಮಾರು 1,500 ಜನರ ಆಸನ ಸಾಮರ್ಥ್ಯ ಹೊಂದಿದೆ. ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಂಸ್ಥೆಯ ಕಾರ್ಯಕ್ರಮಗಳಿಗೆ ಭವನವನ್ನು ಬಳಸಿಕೊಳ್ಳಬಹುದಾಗಿದೆ. ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗಾಗಿ ಮೂರು ವಸತಿ ಕಟ್ಟಡಗಳನ್ನು ನಿರ್ಮಿಸಲಾಗಿದ್ದು, ಒಟ್ಟು 69 ವಸತಿ ಘಟಕಗಳಿವೆ. ಪ್ರತಿ ಕಟ್ಟಡದಲ್ಲಿ 20 ಎರಡು ಬಿಎಚ್‌ಕೆ ಹಾಗೂ ಮೂರು ಒಂದು ಬಿಎಚ್‌ಕೆ ಘಟಕಗಳಿದ್ದು, ಒಟ್ಟು ನಿರ್ಮಾಣ ವಿಸ್ತೀರ್ಣ ಸುಮಾರು 72,056 ಚದರ ಅಡಿಯಾಗಿದೆ ಎಂದು ತಿಳಿಸಿದ್ದಾರೆ.ಸಹಕಾರಿ ಕ್ಷೇತ್ರದಲ್ಲಿ ಸಂಸ್ಥೆಯ ಬೆಳವಣಿಗೆಯ ಪಯಣದಲ್ಲಿ ನೂತನ ಮುಖ್ಯ ಕಚೇರಿ ಪ್ರಮುಖ ಮೈಲಿಗಲ್ಲಾಗಿದೆ. ಸೆ.19ರಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಸಹಕಾರಿ ಸದಸ್ಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದಾರೆ.