ಸಾರಾಂಶ
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ಕೊಡಗರಹಳ್ಳಿ ಸಮೀಪದ ಜೋಡಿ ಕೆರೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅಳವಡಿಸಲಾಗಿರುವ ನೂತನ ಸಿಲಿಕಾನ್ ಛೇಂಬರ್ ಅನ್ನು ಶನಿವಾರ ಲೋಕಾರ್ಪಣೆಗೊಳಿಸಲಾಯಿತು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಸೋಮವಾರಪೇಟೆ ರೋಟರಿ ಸಂಸ್ಥೆಯ ಸಹಯೋಗದೊಂದಿಗೆ ಈ ಸಿಲಿಕಾನ್ ಛೇಂಬರನ್ನು ನಿರ್ಮಿಸಲಾಗಿದ್ದು ಈ ಸಂದರ್ಭ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗುಡ್ಡೆಹೊಸೂರು ವಲಯದ ಮೇಲ್ವಿಚಾರಕ ಯತೀಶ್ ಮಾತನಾಡಿ, ಯೋಜನೆ ವತಿಯಿಂದ ಕೇವಲ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಜನೋಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಹಾರಂಗಿ ಮತ್ತು ಕೊಡಗರಹಳ್ಳಿಯಲ್ಲಿ ಸಿಲಿಕಾನ್ ಛೇಂಬರ್ ನಿರ್ಮಾಣಗೊಳಿಸಲಾಗಿದ್ದು 7ನೇ ಹೊಸಕೋಟೆ ಮತ್ತು ಕಂಬಿಬಾಣೆ ಕಾರ್ಯಕ್ಷೇತ್ರಗಳಲ್ಲಿ ಬೇಡಿಕೆಯಿದ್ದು ಇದನ್ನು ಪರಿಶೀಲಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಿಲಿಕಾನ್ ಛೇಂಬರ್ ಅಳವಡಿಕೆ ಯಲ್ಲಿ ಸಾಕಷ್ಟು ಶ್ರಮವಹಿಸಿದ ಯತೀಶ್, ಯೋಜನೆಯ ಸೇವಾ ಪ್ರತಿನಿಧಿ ಹೇಮಾವತಿ, ಬಾಬುಪೂಜಾರಿ, ಧನಂಜಯ ಮತ್ತು ಸುಮಿತ್ರ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪಿಡಿಒ ರವೀಶ್, ಕಾಫಿ ಬೆಳೆಗಾರರಾದ ಪಿ.ಹರಿಶ್ಚಂದ್ರ ಪೈ, ಪಿ.ಕೆ.ಜಗದೀಶ್, ನಿವೃತ್ತ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಸ್.ಸುರೇಶ್ ಚಂಗಪ್ಪ, ಗ್ರಾ.ಪಂ.ಕಾರ್ಯದರ್ಶಿ ರೂಬಿ ಸೇರಿದಂತೆ ಗ್ರಾ.ಪಂ.ಸದಸ್ಯರು, ಆಶಾ ಕಾರ್ಯಕರ್ತೆ ಯರು ಧರ್ಮಸ್ಥಳ ಸ್ವಸಹಾಯ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಯೋಜನೆಯ ಸದಸ್ಯೆ ಭುವನ ಮತ್ತು ಗ್ರಾ.ಪಂ.ಸದಸ್ಯೆ ಕಲಾಮಣಿ ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ಸೇವಾ ಪ್ರತಿನಿಧಿ ಹೇಮಾವತಿ ವಂದಿಸಿದರು.