ಇಂದು ವೆಂಕಟರಮಣ, ಗುಂಡಮಯ್ಯ ಸ್ವಾಮಿಯ ದೇಗುಲ ಉದ್ಘಾಟನೆ

| Published : Feb 11 2024, 01:49 AM IST

ಸಾರಾಂಶ

ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಂಡಮಯ್ಯ ಸ್ವಾಮಿಯ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇದೇ ಫೆ.11ರಂದು ಬೆಳಿಗ್ಗೆ 9ಗಂಟೆಗೆ ಹಮ್ಮಿಕೊಂಡಿದ್ದು, ಈಗಾಗಲೇ ನೂತನ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮದ ತಯಾರಿ ಹಾಗೂ ಇತರೆ ವಿವಿಧ ರೀತಿಯ ಪೂಕಾ ಕೈಂಕರ್ಯಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಪಾವಗಡ

ಇಲ್ಲಿನ ಐತಿಹಾಸಿಕ ಹಿನ್ನೆಲೆಯ ಸುಪ್ರಸಿದ್ಧ ಕಮ್ಮ ಒಕ್ಕಲಿಗ ಸಮುದಾಯದ ಆರಾಧ್ಯ ದೇವರಾದ ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಂಡಮಯ್ಯ ಸ್ವಾಮಿಯ ದೇವಸ್ಥಾನ ಹಾಗೂ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ಇದೇ ಫೆ.11ರಂದು ಬೆಳಿಗ್ಗೆ 9ಗಂಟೆಗೆ ಹಮ್ಮಿಕೊಂಡಿದ್ದು, ಈಗಾಗಲೇ ನೂತನ ದೇವಸ್ಥಾನ ಜೀರ್ಣೋದ್ಧಾರ ಕಾರ್ಯಕ್ರಮದ ತಯಾರಿ ಹಾಗೂ ಇತರೆ ವಿವಿಧ ರೀತಿಯ ಪೂಕಾ ಕೈಂಕರ್ಯಗಳ ಸಿದ್ಧತೆ ಮಾಡಿಕೊಳ್ಳಲಾಗಿದೆ.

ತಾಲೂಕು ನಾಗಲಮಡಿಕೆ ಹೋಬಳಿಯ ವಳ್ಳೂರು ಗ್ರಾಪಂ ವ್ಯಾಪ್ತಿಗೆ ಒಳಪಟ್ಟ ವೆಂಕಟಮ್ಮನಹಳ್ಳಿಯ ಹೊರವಲಯದಲ್ಲಿ ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಡ್ಡಮಯ್ಯ ಸ್ವಾಮಿ ನೆಲೆಯಾಗಿದ್ದು, ಈ ದೇವಸ್ಥಾನಕ್ಕೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ. ತಾಲೂಕಿನ ತಿರುಮಣಿ, ಕೆಂಚಗಾನಹಳ್ಳಿ, ಕ್ಯಾತಗಾನಕೆರೆ, ವಳ್ಳೂರು, ಪಳವಳ್ಳಿ ಸೇರಿದಂತೆ ಆಂಧ್ರದ ಮಕ್ಕಿನವಾಲಪಲ್ಲಿ ಹಾಗೂ ಎಗುವಪಲ್ಲಿ ಇತರೆ ಸುತ್ತಮುತ್ತಲ ಗ್ರಾಮಗಳ ಸಹಸ್ರಾರು ಸಂಖ್ಯೆಯ ಭಕ್ತರಿದ್ದು, ನಿರಂತರ ದೇವಸ್ಥಾನಕ್ಕೆ ಆಗಮಿಸಿ, ಪೂಜಾ ಕೈಂಕರ್ಯ ನೆರೆವೇರಿಸಿ ತಮ್ಮ ಬೇಡಿಕೆ ಈಡೇರಿಸುವಂತೆ ದೇವರ ಮೊರೆ ಹೋಗುತ್ತಾರೆ. ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಡ್ಡಮಯ್ಯಸ್ವಾಮಿಯ ದೇವಸ್ಥಾನ ಹಳೇದಾಗಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಭಕ್ತರ ಸಲಹೆ ಮೇರೆಗೆ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಆಸಕ್ತಿ ವಹಿಸಿದ ದೇವಸ್ಥಾನ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಲಕ್ಷ್ಮೀ ಡಾ.ಜಿ. ವೆಂಕಟರಾಮಯ್ಯ ಹಾಗೂ ಕಮ್ಮ ಒಕ್ಕಲಿಗ ಸಮಾಜ ಹಾಗೂ ಇತರೆ ಭಕ್ತರ ಸಹಕಾರದ ಮೇರೆಗೆ ಸುಮಾರು 1ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿ ಸುಸಜ್ಜಿತ ದೇವಸ್ಥಾನದ ನಿರ್ಮಾಣದ ಕಾರ್ಯ ಯಶಸ್ವಿಯಾಗಿ ನೆರೆವೇರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶಾಸ್ರೊಕ್ತ ಪದ್ಧತಿಯಂತೆ ಶುಭಗಳಿಕೆಯ ಫೆ.11ರಂದು ನೂತನ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಡ್ಡಮಯ್ಯಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ವಿಯಾಗಿ ನಿರ್ವಹಿಸಲು ಅದ್ಧೂರಿಯ ಸಿದ್ದತೆ ನಡೆಸಲಾಗಿದೆ. ಆಂಧ್ರದ ಹಿಂದೂಪುರ ಸಮೀಪದ ಮೌನಗಿರಿ ಅಶ್ರಮ ಬ್ರಹ್ಮಪೀಠದ ಈಶ್ವರಯ್ಯ ಸ್ವಾಮಿ ಹಾಗೂ ಇತರೆ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಫೆ.11ರಂದು ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಲಕ್ಷ್ಮೀ ವೆಂಕಟರಮಣಸ್ವಾಮಿ ಹಾಗೂ ಗುಡ್ಡಮಯ್ಯಸ್ವಾಮಿಯ ವಿಗ್ರಹ ಪ್ರತಿಷ್ಠಾಪನೆ ಹಮ್ಮಿಕೊಳ್ಳಲಾಗಿದೆ. ದೇವಸ್ಥಾನಕ್ಕೆ ತೆರಳಲು ಸುಸಜ್ಜಿತವಾದ ರಸ್ತೆ ಇದ್ದು ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನ ಸಮಿತಿಯ ಸದಸ್ಯರು ಹಾಗೂ ಭಕ್ತರು ತಿಳಿಸಿದ್ದಾರೆ.