25ರಂದು ಹೊಳಲ್ಕೆರೆಯಲ್ಲಿ ವಿಕಾಸ ಸೌಧ ಉದ್ಘಾಟನೆ

| Published : Dec 22 2024, 01:34 AM IST

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಚಂದ್ರಪ್ಪ ಮಾತನಾಡಿದರು. ಈ ವೇಳೆ ಹಲವು ಮುಖಂಡರು ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನೂತನವಾಗಿ ನಿರ್ಮಿಸಲಾದ ವಿಕಾಸ ಸೌಧದ ಉದ್ಘಾಟನೆ ಹಾಗೂ ಸ್ವಸಹಾಯ ಸಂಘಗಳಿಗೆ ಲಾಭಾಂಶ ವಿತರಣಾ ಸಮಾರಂಭ ಡಿ.25ಕ್ಕೆ ನಡೆಯಲಿದೆ ಎಂದು ಶಾಸಕ ಎಂ.ಚಂದ್ರಪ್ಪ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಕಾಸ ಸೌಧ ನಿರ್ಮಾಣಕ್ಕೆ ಸ್ಥಳೀಯ ಸಂಸ್ಥೆಯಿಂದ ನಿವೇಶನ ನೀಡಲಾಗಿದ್ದು, ₹3 ಕೋಟಿ ವೆಚ್ಚದಲ್ಲಿ ವಿಕಾಸಸೌಧ ನಿರ್ಮಿಸಲಾಗಿದೆ. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಸ್ವತಃ ಕಾರ್ಯಕ್ರಮಕ್ಕೆ ಆಗಮಿಸಿ ವಿಕಾಸಸೌಧದ ಉದ್ಘಾಟನೆ ನೆರವೇರಿಸಲಿದ್ದು, ಕಾರ್ಯಕ್ರಮಕ್ಕೆ ಸುಮಾರು 1ಲಕ್ಷ ಮಹಿಳೆಯರು ಆಗಮಿಸುವ ನಿರೀಕ್ಷೆ ಇದೆ ಎಂದರು.

ಧರ್ಮಸ್ಥಳ ಸಂಘದವರು ಹೊಳಲ್ಕೆರೆ ತಾಲೂಕಿನಲ್ಲಿ 4,518 ಸ್ವಸಹಾಯ ಸಂಘಗಳನ್ನು ರಚನೆ ಮಾಡಿ 40,265 ಜನರನ್ನು ಸದಸ್ಯರನ್ನಾಗಿ ಮಾಡಿಕೊಂಡಿದ್ದಾರೆ. ಇದುವರೆಗೆ ₹24.46 ಕೋಟಿ ಉಳಿತಾಯ ಮಾಡಿದ್ದಾರೆ. ಉತ್ತಮ ನಿರ್ವಹಣೆ ಮಾಡಿದ ಸಂಘಗಳಿಗೆ ಬ್ಯಾಂಕ್‍ಗಳಿಂದ ₹204.16 ಕೋಟಿ ಸಾಲ ಕೊಡಿಸಲಾಗಿದೆ. ಉತ್ತಮವಾದ ಆರ್ಥಿಕ ವ್ಯವಹಾರ ನಡೆಸಿದ ಸಂಘಗಳಿಗೆ ಲಾಭಾಂಶ ವಿತರಣೆ ಮಾಡಲಾಗುತ್ತಿದೆ. ಇದುವರೆವಿಗೂ ಎರಡು ಬಾರಿ ಲಾಭಾಂಶವನ್ನು ವಿತರಣೆ ಮಾಡಲಾಗಿದೆ ಈಗ 3ನೇ ಭಾರಿ ಲಾಭಾಂಶವನ್ನು ವಿತರಣೆ ಮಾಡಲು ಸಂಘ ಮುಂದಾಗಿದ್ದು 2,703 ಸಂಘಗಳಿಗೆ 11ಕೋಟಿ ರು. ನೀಡಲಾಗುತ್ತಿದೆ ಎಂದು ಹೇಳಿದರು.

ಡಿ.25ರಂದು ಬೆಳಗ್ಗೆ 10 ಗಂಟೆಗೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ವಿಕಾಸಸೌಧದ ಉದ್ಘಾಟನೆ ನೆರವೇರಿಸಲಿದ್ದು, ಸ್ವ-ಸಹಾಯ ಸಂಘಗಳಿಗೆ ಲಾಭಾಂಶ ವಿತರಣೆಯನ್ನು ಯೋಜನಾ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಡಿ.ಸುಧಾಕರ್ ವಿತರಿಸುವರು. ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದ ಪುನಶ್ವೇತನಗೊಂಡ ಕೆರೆಯ ಹಸ್ತಾಂತರ ಪ್ರಮಾಣ ಪತ್ರ ವಿತರಣೆಯನ್ನು ಸಂಸದ ಗೋವಿಂದ ಕಾರಜೋಳ ನೆರವೇರಿಸುವರು. ವಾತ್ಸಲ್ಯ ಮನೆಗಳನ್ನು ಮಾಜಿ ಸಚಿವ ಎಚ್.ಆಂಜನೇಯ ಫಲಾನುಭವಿಗಳಿಗೆ ವಿತರಿಸುವರು. ವಿದ್ಯಾರ್ಥಿಗಳಿಗೆ ಕ್ಷೇತ್ರದ ಮೂಲಕ ಸುಜ್ಞಾನ ನಿಧಿ ಶಿಷ್ಯವೇತನ ಮಂಜೂರಾತಿ ಪತ್ರವನ್ನು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ವಿತರಿಸಲಿದ್ದಾರೆ. ಜಿಲ್ಲಾಧಿಕಾರಿ ವೆಂಕಟೇಶ್, ಪುರಸಭೆಯ ಅಧ್ಯಕ್ಷ ವಿಜಯಸಿಂಹ ಖಾಟ್ರೋತ್, ಉಪಾಧ್ಯಕ್ಷೆ ನಾಗರತ್ನ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

ಧರ್ಮಸ್ಥಳ ಗ್ರಾಮೀಣ ಅಭೀವೃದ್ದಿ ಬಿ. ಸಿ ಟ್ರಸ್ಟ್ ನ ನಿರ್ದೇಶಕ ದಿನೇಶ್ ಪೂಜಾರ್, ಯೋಜಣಾಧಿಕಾರಿಗಳಾದ ಸುರೇಂದ್ರ ಆಚಾರ್, ಪ್ರಭಾಕರ್ ವಸಂತ್, ಮುಖಂಡರಾದ ರುದ್ರಪ್ಪ, ಪುರಸಭೆಯ ಮಾಜಿ ಅಧ್ಯಕ್ಷ ಅಶೋಕ್, ಗ್ರಾಪಂ ಮಾಜಿ ಅಧ್ಯಕ್ಷ ಡಿ.ಸಿ.ಮೋಹನ್, ರಮೇಶ್ ಗೌಡ್ರ ದುಮ್ಮಿ, ಸರಸ್ವತಿ, ಅಶೋಕ್ ಗಂಗಾಧರಪ್ಪ, ದೇವರಾಜ್ ಸಾಸಲು ಸುದ್ದಿಗೋಷ್ಠಿಯಲ್ಲಿದ್ದರು.