ಕಾಯಿಲೆಗೆ ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಅಗತ್ಯ

| Published : Oct 30 2024, 12:50 AM IST

ಸಾರಾಂಶ

ಪ್ರಸ್ತುತ ದಿನಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯದಲ್ಲಿ ಆಗುವ ಸಣ್ಣ ಬದಲಾವಣೆಯು ಮುಂದೆ ಆತನನ್ನು ದೊಡ್ಡ ಕಾಯಿಲೆಗೆ ಗುರಿ ಮಾಡುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ಪ್ರಸ್ತುತ ದಿನಗಳಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಆರೋಗ್ಯದಲ್ಲಿ ಆಗುವ ಸಣ್ಣ ಬದಲಾವಣೆಯು ಮುಂದೆ ಆತನನ್ನು ದೊಡ್ಡ ಕಾಯಿಲೆಗೆ ಗುರಿ ಮಾಡುತ್ತದೆ. ಹೀಗಾಗಿ ಯಾವುದೇ ಕಾಯಿಲೆಗೆ ಪ್ರಾಥಮಿಕ ಹಂತದಲ್ಲಿಯೇ ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ ಎಂದು ಜಿಪಂ ಸಿಇಒ ಕೆ.ಎಂ. ಗಾಯತ್ರಿ ಸಲಹೆ ನೀಡಿದರು.ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗವು ಜಿಪಂ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಷ್ಟೋ ಜನರು ಮುಜುಗರದಿಂದ ತಮ್ಮಲ್ಲಿರುವ ಸಮಸ್ಯೆಗಳನ್ನು ಮುಚ್ಚಿಟ್ಟು ವೈದ್ಯರ ಬಳಿ ಹೋಗಲು ಹಿಂಜರಿಯುತ್ತಾರೆ. ಇದರಿಂದ ಮುಂದೆ ಆ ವ್ಯಕ್ತಿಗೆ ದೊಡ್ಡ ಅನಾಹುತಗಳು ಎದುರಾಗುವ ಸಂದರ್ಭಗಳು ಬರಬಹುದು. ಯಾವುದೇ ಮುಜುಗರ ಪಡದೆ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಬೇಕು ಎಂದು ಹೇಳಿದರು.ಅಧಿಕಾರಿಗಳು ಕೆಲಸದ ಒತ್ತಡದಿಂದ ತಮ್ಮ ಆರೋಗ್ಯದ ಕಾಳಜಿ ಮರೆಯುತ್ತಾರೆ. ಮೊದಲು ಅರೋಗ್ಯ ಮುಖ್ಯ ಎಂದು ತಿಳಿದು ಅರೋಗ್ಯ, ಕೆಲಸ ಹಾಗೂ ಕುಟುಂಬವನ್ನು ಸಮಾನವಾಗಿ ನಿರ್ವಹಿಸುವುದನ್ನು ಕಲಿಯಬೇಕು. ಯಾವುದೇ ಸಮಸ್ಯೆಯನ್ನು ಸಮಾಧಾನದಿಂದ ಎದುರಿಸುವುದನ್ನು ಕಲಿಯಬೇಕು ಎಂದರು.ಮಾನಸಿಕ ಅರೋಗ್ಯ ಸಮಸ್ಯೆಗಳು ಅತಿಯಾದ ಕೆಲಸದ ಒತ್ತಡ, ಕಿನ್ನತೆ ಜೀವನ ಶೈಲಿಯ ಬದಲಾವಣೆಯಿಂದ, ಆಹಾರ ಪದ್ಧತಿಯ ಬದಲಾವಣೆ ಬರುತ್ತದೆ. ಇದರಿಂದ ಕಾಯಿಲೆಗಳು ವೇಗವಾಗಿ ನಮ್ಮ ಬಳಿ ಬರುವಂತೆ ಮಾಡಿಕೊಳ್ಳುತ್ತೇವೆ. ಪ್ರಸ್ತುತ ಜನರು ಕುಳಿತಲ್ಲಿಯೇ ಎಲ್ಲವನ್ನು ಬಯಸುವ ಕಾಲ ಬಂದಿದ್ದು, ಈ ಅಭ್ಯಾಸ ಸಾರ್ವಜನಿಕರನ್ನು ಬಹಳ ಬೇಗನೆ ಅನಾರೋಗ್ಯಕ್ಕೆ ಗುರಿಯಾಗುವಂತೆ ಮಾಡುತ್ತದೆ ಎಂದು ಅವರು ತಿಳಿಸಿದರು.ಮಾನಸಿಕ ಅರೋಗ್ಯ ಶಿಬಿರದಲ್ಲಿ ಗ್ರಾಪಂ, ತಾಪಂ ಹಾಗೂ ಜಿಪಂ ವ್ಯಾಪ್ತಿಯ ಪಿಡಿಒಗಳು ಹಾಗೂ ಇಒಗಳು ಸೇರಿದಂತೆ ಸುಮಾರು 159 ಅಧಿಕಾರಿಗಳು ಪಾಲ್ಗೊಂಡು, ಶಿಬಿರಾದ ಸದುಪಯೋಗ ಪಡಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ಅಧಿಕಾರಿಗಳು ಪಾಲ್ಗೊಳ್ಳಬೇಕು ಎಂದರು.ಜಿಪಂ ಯೋಜನಾಧಿಕಾರಿ ಪ್ರಭುಸ್ವಾಮಿ, ಉಪ ಕಾರ್ಯದರ್ಶಿ ಕೃಷ್ಣಂರಾಜು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ, ಜಿಲ್ಲಾ ಮಾನಸಿಕ ಹಾಗೂ ಕುಷ್ಟರೋಗ ನಿರ್ಮೂಲನಾಧಿಕಾರಿ ಡಾ. ಬೃಂದಾ ಮೊದಲಾದವರು ಇದ್ದರು.----ಕೋಟ್...ಶಾಲಾ ಕಾಲೇಜು ಹಂತಗಳಲ್ಲೆ ಮಾನಸಿಕ ಆರೋಗ್ಯದ ಬಗ್ಗೆ ವಿದ್ಯಾರ್ಥಿಗಳಲ್ಲಿ ಶಿಕ್ಷಣ ನೀಡಿ, ಅವರು ಮುಂದಿನ ಜೀವನದಲ್ಲಿ ಎಂತಹ ಸಮಸ್ಯೆಯನ್ನಾದರೂ ಎದುರಿಸುವಂತಹ ಶಕ್ತಿ ತುಂಬಿ, ಅವರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಂತೆ ಮಾಡಬೇಕು. ಈ ರೀತಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಸರಿಯಾದ ಮಾರ್ಗದರ್ಶಕರು ಇದ್ದಾಗ ಯಾವುದೇ ವ್ಯಕ್ತಿಯು ಮಾನಸಿಕ ಆರೋಗ್ಯ ಸಮಸ್ಯೆಯನ್ನು ಎದುರಿಸದಂತೆ ನೋಡಿಕೊಳ್ಳಬಹುದು.- ಕೆ.ಎಂ. ಗಾಯತ್ರಿ, ಜಿಪಂ ಸಿಇಒ