ಸಾರಾಂಶ
ಡಾ. ವಾದಿರಾಜ್ ಸುದ್ದಿಗೋಷ್ಠಿ । ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿ ಗಣ್ಯರು ಭಾಗಿ
ಕನ್ನಡಪ್ರಭ ವಾರ್ತೆ ನಾಗಮಂಗಲತಾಲೂಕಿನ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿ ಬದಿಯ ಶೀರಪಟ್ಟಣ (ಎಂ.ಹೊಸೂರು ಗೇಟ್) ಬಳಿ ನಿರ್ಮಾಣಗೊಂಡಿರುವ ದಕ್ಷಿಣ ಭಾರತದ ಮೊದಲ ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನವು ಜ.21ರಂದು ಉದ್ಘಾಟನೆಯಾಗಲಿದೆ ಎಂದು ಆಸ್ಪತ್ರೆ ಸಂಶೋಧನಾ ಅಧಿಕಾರಿ ಡಾ. ವಾದಿರಾಜ್ ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಆಯುಷ್ ಮಂತ್ರಾಲಯದ ವತಿಯಿಂದ 15 ಎಕರೆ ವಿಸ್ತೀರ್ಣದಲ್ಲಿ 65 ಕೋಟಿ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ 200 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವನ್ನೊಳಗೊಂಡಿರುವ ಚಿಕಿತ್ಸಾಲಯ ಇದಾಗಿದೆ ಎಂದರು.ಚಿಕಿತ್ಸಾಲಯದ ಕಟ್ಟಡವನ್ನು ಜ.21 ರಂದು ಮಧ್ಯಾಹ್ನ 12 ಗಂಟೆಗೆ ಕೇಂದ್ರ ಸರ್ಕಾರದ ಆಯುಷ್, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಖಾತೆ ರಾಜ್ಯ ಸಚಿವ ಡಾ.ಮುಂಜ್ಪಾರ ಮಹೇಂದ್ರ ಭಾಯ್ ಕಲುಭಾಯ್ ಮತ್ತು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿಯವರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೇಳಿದರು.
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಸಂಸದೆ ಸುಮಲತಾ ಅಂಬರೀಶ್, ವಿಧಾನ ಪರಿಷತ್ ಸದಸ್ಯರಾದ ಮರಿತಿಬ್ಬೇಗೌಡ, ಮಧು ಜಿ.ಮಾದೇಗೌಡ, ದಿನೇಶ್‌ಗೂಳೀಗೌಡ, ಕೇಂದ್ರದ ಆಯುಷ್ ಇಲಾಖೆ ಕಾರ್ಯದರ್ಶಿ ವೈದ್ಯ ರಾಜೇಶ್ ಕೊಟೆಚಾ, ಡಿಡಿಜಿ ಸತ್ಯಜಿತ್ ಪೌಲ್, ಯುನಾನಿ ವಿಭಾಗದ ಸಲಹೆಗಾರ ಡಾ.ಎಂಎ.ಕ್ವಾಸ್ಮಿ, ಜಿಲ್ಲಾಧಿಕಾರಿ ಡಾ.ಕುಮಾರ, ರಾಜ್ಯ ಆಯುಷ್ ಇಲಾಖೆ ಆಯುಕ್ತ ಶ್ರೀನಿವಾಸಲು, ಬೆಂಗಳೂರಿನ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಆರ್.ನಾಗೇಂದ್ರ, ತಹಸೀಲ್ದಾರ್ ನಯೀಂಉನ್ನೀಸಾ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್.ಸೀತಾಲಕ್ಷ್ಮೀ, ಸೇರಿ ಹಲವು ಗಣ್ಯರು ಪಾಲ್ಗೊಳ್ಳುವರು ಎಂದು ಹೇಳಿದರು.ತಾಲೂಕಿನವರೇ ಆದ ಹಿರಿಯ ಗಾಂಧಿವಾದಿ ದಿ.ಹೋ.ಶ್ರೀನಿವಾಸಯ್ಯ ಅವರ ಆಶಯದಂತೆ 2006ರಲ್ಲಿ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿಯವರು ಈ ಪ್ರದೇಶದಲ್ಲಿ 15 ಎಕರೆ ಜಾಗ ಗುರುತಿಸಿ ಕೇಂದ್ರ ಸರ್ಕಾರಕ್ಕೆ ಹಸ್ತಾಂತರಿಸಿದ ಹಿನ್ನಲೆ ಸುಸಜ್ಜಿತ ಪ್ರಕೃತಿ ಚಿಕಿತ್ಸಾ ಅನುಸಂಧಾನ ಸಂಸ್ಥಾನ ಕಟ್ಟಡ ನಿರ್ಮಾಣಗೊಂಡಿದ್ದು, ಇದು ದೇಶದಲ್ಲಿಯೇ ಮೊದಲ ಚಿಕಿತ್ಸಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಆಧುನಿಕ ಜೀವನ ಶೈಲಿಯಿಂದಾಗಿ ಸರಿಯಾದ ರೀತಿಯಲ್ಲಿ ವ್ಯಾಯಾಮ ಮತ್ತು ನಿದ್ರೆ ಮಾಡದಿರುವುದು, ಅತ್ಯಧಿಕವಾದ ಆಹಾರ ಸೇವನೆ ಮಾಡುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉದ್ಭವಿಸುತ್ತವೆ. ಮಾತ್ರೆಯಿಂದ ಗುಣಪಡಿಸಲಾಗದಂತಹ ಕಾಯಿಲೆಗಳಿಗೆ ಯಾವುದೇ ರಾಸಾಯನಿಕ ಪದಾರ್ಥಗಳನ್ನು ಬಳಸದೆ ಈ ಚಿಕಿತ್ಸಾಲಯದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯ ಮೂಲಕ ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡಲಾಗುವುದು ಎಂದರು.-------
20ಕೆಎಂಎನ್ ಡಿ25ಸುದ್ಧಿಗೋಷ್ಠಿಯಲ್ಲಿ ಡಾ.ವಾಸಿರಾಜ್ ಮಾತನಾಡಿದರು.