ಭಟ್ಕಳದಲ್ಲಿ ನಿಲ್ಲದ ಮಳೆ, ಹಲವು ಮನೆಗಳಿಗೆ ಹಾನಿ

| Published : Jul 07 2024, 01:18 AM IST

ಸಾರಾಂಶ

ಭಟ್ಕಳ ತಾಲೂಕಿನಲ್ಲಿ ಶನಿವಾರವೂ ಭಾರೀ ಮಳೆ ಮುಂದುವರಿದಿದ್ದು, ಮನೆಗಳಿಗೆ ಹಾನಿಯಾಗಿದೆ. ಶನಿವಾರ ಬೆಳಗ್ಗೆ ವರೆಗೆ 120.6 ಮಿಮೀ ಮಳೆಯಾಗಿದೆ. ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಸುರಿದ ಭಾರೀ ಮಳೆಗೆ ಪಟ್ಟಣದ ರಂಗೀಕಟ್ಟೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಂಶುದ್ದೀನ್ ವೃತ್ತ ಹೊಳೆಯಾಗಿ ವಾಹನ ಸವಾರರು ಪರದಾಡುವಂತಾಯಿತು.

ಭಟ್ಕಳ: ತಾಲೂಕಿನಲ್ಲಿ ಶನಿವಾರವೂ ಭಾರೀ ಮಳೆ ಮುಂದುವರಿದಿದ್ದು, ಮನೆಗಳಿಗೆ ಹಾನಿಯಾಗಿದೆ. ಶನಿವಾರ ಬೆಳಗ್ಗೆ ವರೆಗೆ 120.6 ಮಿಮೀ ಮಳೆಯಾಗಿದೆ.

ಧಾರಕಾರ ಮಳೆಗೆ ಪಟ್ಟಣದ ಖಲೀಪಾ ಸ್ಟ್ರೀಟ್‌ನ ಸಿದ್ಧಿಕ ಅಲ್ತಾಪ ಅವರ ಮನೆ ಸಂಪೂರ್ಣ ಕುಸಿದು ಹಾನಿಯಾಗಿದೆ. ಅವರ ಮನೆಯ ಪಕ್ಕದಲ್ಲಿಯೇ ಇರುವ ಬಿಬಿ ಅಮೀನಾ ಅವರ ಮನೆ ಭಾಗಶಃ ಹಾನಿಯಾಗಿದೆ. ಬೆಳ್ನಿಯ ಚಂದ್ರಾವತಿ ಗೋವಿಂದ ಖಾರ್ವಿ ಮನೆಯ ಮೇಲೆ ಕಾಡು ಮರ ಬಿದ್ದು ಹಾನಿಯಾಗಿದೆ. ಬೆಂಗ್ರೆಯ ಪಾರ್ವತಿ ಹನುಮಂತ ನಾಯ್ಕ ಅವರ ಮನೆಯ ಮೇಲ್ಚಾವಣಿ ಮಾಡು ಮುರಿದು ಭಾಗಶಃ ಹಾನಿಯಾಗಿದೆ. ತಲಗೋಡ ಗ್ರಾಮ ಬಿಳಿಯಮ್ಮ ಮಾಸ್ತಪ್ಪ ನಾಯ್ಕ ಮನೆಯ ಹೆಂಚು ಹಾರಿ ಹೋಗಿದೆ. ಮಾರುಕೇರಿ ಕೋಟಖಂಡ ಗ್ರಾಮದ ರಾಮ ಕುಪ್ಪ ಗೊಂಡ ಅವರ ದನದ ಕೊಟ್ಟಿಗೆಯ ಮೇಲೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಸ್ಥಳಕ್ಕೆ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಹಾನಿಯ ಅಂದಾಜನ್ನು ತಹಸೀಲ್ದಾರರಿಗೆ ವರದಿ ಮಾಡಿದ್ದಾರೆ. ಜಾಲಿ ಪಪಂಗೆ ಹೋಗುವ ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತಕ್ಷಣ ತೆರವುಗೊಳಿಸಿದ್ದರಿಂದ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗಲಿಲ್ಲ.

ಶುಕ್ರವಾರ ರಾತ್ರಿಯಿಂದ ಬೆಳಗಿನ ಜಾವದ ವರೆಗೆ ಸುರಿದ ಭಾರೀ ಮಳೆಗೆ ಪಟ್ಟಣದ ರಂಗೀಕಟ್ಟೆ ರಾಷ್ಟ್ರೀಯ ಹೆದ್ದಾರಿ ಮತ್ತು ಸಂಶುದ್ದೀನ್ ವೃತ್ತ ಹೊಳೆಯಾಗಿ ವಾಹನ ಸವಾರರು ಪರದಾಡುವಂತಾಯಿತು. ಹೆದ್ದಾರಿಯಲ್ಲಿ ತುಂಬಿದ ನೀರಿನಲ್ಲೇ ವಾಹನಗಳು ನಿಧಾನವಾಗಿ ಚಲಿಸಬೇಕಾದ ಅನಿವಾರ್ಯ ಉಂಟಾಗಿದ್ದರಿಂದ ವಾಹನಗಳ ಸರದಿ ಸಾಲು ಉಂಟಾಗಿತ್ತು. ವ್ಯಾಪಕ ಮಳೆಗೆ ರಂಗೀಕಟ್ಟೆಯಲ್ಲಿ ನೀರು ತುಂಬಿದ್ದರಿಂದ ಹೆದ್ದಾರಿಯೇ ಕಾಣುತ್ತಿರಲಿಲ್ಲ. ಶನಿವಾರ ಬೆಳಗ್ಗೆ ಪುರಸಭೆಯ ವತಿಯಿಂದ ರಂಗೀಕಟ್ಟೆಯಲ್ಲಿರುವ ಗಟಾರ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹೋಗಲು ಅವಕಾಶ ಮಾಡಿಕೊಡಲಾಯಿತು. ಶನಿವಾರವೂ ಭಟ್ಕಳದಲ್ಲಿ ಭಾರೀ ಮಳೆ ಸುರಿದಿದ್ದು, ಎಲ್ಲಿ ನೋಡಿದರೂ ನೀರು ಎನ್ನುವಂತಾಗಿದೆ. ತಗ್ಗು ಪ್ರದೇಶ ಜಲಾವೃಗೊಂಡಿದ್ದರೆ, ಹೊಳೆ, ಹಳ್ಳ ಉಕ್ಕಿ ಹರಿಯುತ್ತಿದ್ದು ಅಪಾಯದ ಅಂಚಿಗೆ ಬಂದಿದೆ. ಹೊಳೆತೀರದ ತೋಟಗಳಿಗೆ ನೀರು ನುಗ್ಗಿದ್ದು, ತೋಟಕ್ಕೆ ಹಾಕಿದ ಗೊಬ್ಬರ ನೀರುಪಾಲಾದ ಬಗ್ಗೆ ವರದಿಯಾಗಿದೆ. ಗ್ರಾಮಾಂತರ ಭಾಗದಲ್ಲಿ ಸಮರ್ಪಕ ಗಟಾರ ಸ್ವಚ್ಛತಾ ಕಾರ್ಯ ಆಗದೇ ಇರುವುದರಿಂದ ಹೆಚ್ಚಿನ ಕಡೆ ಮಳೆ ನೀರು ರಸ್ತೆ ಮೇಲೆ ಹರಿಯುತ್ತಿದ್ದು, ರಸ್ತೆ ಹೊಂಡ ಬಿದ್ದು ಹಾಳಾಗಿದೆ. ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಜಾಲಿ ಪಪಂ ವ್ಯಾಪ್ತಿಯ ಹಿಂದೂ ಕಾಲನಿಯ ಮುಝಾಮಿಲ್ ಮಸ್ಜೀದ್‌ಗೆ ಹೋಗುವ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು, ಜನ ಮತ್ತು ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ.

ಹೊನ್ನಾವರದಲ್ಲಿ ಮರ ಬಿದ್ದು ಹಾನಿಹೊನ್ನಾವರ ತಾಲೂಕಿನಲ್ಲಿ ವರುಣಾರ್ಭಟ ಮುಂದುವರಿದಿದ್ದು ಗಾಳಿಮಳೆಗೆ ವಿವಿಧ ರೀತಿಯಲ್ಲಿ ಹಾನಿ ಉಂಟಾಗುತ್ತಿದೆ. ಮಂಕಿ ಆಡುಕುಳದ ನಾರಾಯಣ ಗಣಪಯ್ಯ ಗೌಡ ಅವರ ಮನೆ ಮತ್ತು ಕೊಟ್ಟಿಗೆ ಮೇಲೆ ಮರ ಬಿದ್ದಿದೆ. ಅದೃಷ್ಟವಷಾತ್ ಯಾವುದೇ ಜನ, ಜಾನುವಾರುಗಳಿಗೆ ಹಾನಿಯಾಗಿಲ್ಲ. ಬಳ್ಕೂರು ಗ್ರಾಪಂ ವ್ಯಾಪ್ತಿಯ ಹೆಗ್ಗಾರದಲ್ಲಿ ಧರೆ ಕುಸಿತ ಉಂಟಾಗಿದೆ. ಹಿಂದೆ ತೆರೆದ 6 ಕಾಳಜಿ ಕೇಂದ್ರ ಬಂದ್ ಆಗಿದೆ. ಖರ್ವಾ ಗ್ರಾಮದ ನಾಥಗೇರಿಯಲ್ಲಿ ಗುಡ್ಡಕುಸಿತದಿಂದ ಕುಟುಂಬಸ್ಥರನ್ನು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕಾಳಜಿ ಕೇಂದ್ರಕ್ಕೆ ಕರೆತರಲಾಗಿದೆ.

ಉಳಿದೆಡೆ ಮಳೆ ಇಳಿಮುಖಉತ್ತರ ಕನ್ನಡದಲ್ಲಿ ಮಳೆ ಆರ್ಭಟ ಕಡಿಮೆಯಾಗಿದೆ. ಮನೆಗಳಿಗೆ ನುಗ್ಗಿದ್ದ ನೀರು ಇಳಿದಿದೆ. ಕಾಳಜಿ ಕೇಂದ್ರಗಳಲ್ಲಿನ ಜನತೆ ತಮ್ಮ ತಮ್ಮ ಮನೆಗಳಿಗೆ ತೆರಳಿದ್ದಾರೆ. ಹೊನ್ನಾವರದ ನಾಥಗೇರಿಯಲ್ಲಿ ಧರೆ ಕುಸಿದ ಹಿನ್ನೆಲೆಯಲ್ಲಿ ಹೊಸದಾಗಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯ ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.

3-4 ದಿನಗಳ ಕಾಲ ಬಿಟ್ಟೂ ಬಿಡದೆ ಕಾಡಿದ್ದ ಮಳೆ ಸಾಕಷ್ಟು ಅವಾಂತರಕ್ಕೆ ಕಾರಣವಾಗಿತ್ತು. ಭಟ್ಕಳ ಹೊರತುಪಡಿಸಿ ಶನಿವಾರ ಮಳೆಯ ಪ್ರಮಾಣ ಎಲ್ಲೆಡೆ ಕಡಿಮೆಯಾಗಿದೆ. ಎಲ್ಲ ರಸ್ತೆಗಳೂ ಸಂಚಾರಕ್ಕೆ ಮುಕ್ತವಾಗಿವೆ. ಜಲಾವೃತಗೊಂಡ ಮನೆಗಳನ್ನು ಸ್ವಚ್ಛಗೊಳಿಸುವಲ್ಲಿ ಜನತೆ ನಿರತರಾಗಿದ್ದಾರೆ. ಹಳ್ಳ ಕೊಳ್ಳಗಳಲ್ಲಿನ ನೀರಿನ ಪ್ರಮಾಣವೂ ಇಳಿದಿದೆ. ಜನಸಂಚಾರ ಮಾಮೂಲಿಯಾಗುತ್ತಿದೆ.

ಮುಂದುವರಿದ ಕಾಳಜಿ ಕೇಂದ್ರಉತ್ತರ ಕನ್ನಡ ಜಿಲ್ಲೆಯಲ್ಲಿ ಶನಿವಾರ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬಹುತೇಕರು ತಮ್ಮ ನಿವಾಸಗಳಿಗೆ ತೆರಳಿದ್ದಾರೆ. ಪ್ರಸ್ತುತ 8 ಕಾಳಜಿ ಕೇಂದ್ರಗಳಲ್ಲಿ 26 ಜನರು ಆಶ್ರಯ ಪಡೆದಿದ್ದು, ಅವರಿಗೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ. ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ನೀಡಿದ್ದು, ಜಿಲ್ಲೆಯಲ್ಲಿ ತೀವ್ರ ಮಳೆಯಿಂದ ತೊಂದರೆಗೊಳಗಾದ ವಿವಿಧ ಗ್ರಾಮಗಳ ಸಾರ್ವಜನಿಕರಿಗೆ ಹೊನ್ನಾವರದಲ್ಲಿ 7 ಮತ್ತು ಕುಮಟಾದಲ್ಲಿ 1 ಸೇರಿದಂತೆ ಒಟ್ಟೂ 8 ಕಾಳಜಿ ಕೇಂದ್ರ ಮುಂದುವರಿದಿವೆ. ಅಗತ್ಯವಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯುವಂತೆ ಸಂಬಂಧಪಟ್ಟ ತಾಲೂಕುಗಳ ತಹಸೀಲ್ದಾರರಿಗೆ ಸೂಚನೆ ನೀಡಲಾಗಿದೆ.ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವವರಿಗೆ ಎಲ್ಲ ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಊಟದ ವ್ಯವಸ್ಥೆ ಮತ್ತು ರಾತ್ರಿ ತಂಗಲು ಅಗತ್ಯವಿರುವ ಎಲ್ಲ ಸೌಕರ್ಯಗಳನ್ನು ಒದಗಿಸಲಾಗಿದ್ದು, ವೈದ್ಯರ ತಂಡದಿಂದ ಆರೋಗ್ಯ ಪರಿಶೀಲನೆ ಮತ್ತು ಅಗತ್ಯವಿರುವ ಔಷಧ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ವಿವರಿಸಿದ್ದಾರೆ.

ಶನಿವಾರ ಕಾಳಿ ನದಿ ವ್ಯಾಪ್ತಿಯ ಕದ್ರಾ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು, ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು ಜಿಲ್ಲಾಡಳಿತ ನಿಗದಿಪಡಿದ ಗರಿಷ್ಠ ಮಟ್ಟಕ್ಕಿಂತ ಕಡಿಮೆಯಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 3 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಬೆಂಗಳೂರಿನಿಂದ ಆಗಮಿಸಿರುವ ರಾಷ್ಟ್ರೀಯ ವಿಪತ್ತು ನಿರ್ವಹಣೆಯ 2 ತಂಡಗಳು ಮಂಕಿಯ ಪ್ರಾಕೃತಿಕ ವಿಕೋಪ ಕೇಂದ್ರದಲ್ಲಿ ತಂಗಿದ್ದು, ಯಾವುದೇ ತುರ್ತು ಕಾರ್ಯಾಚರಣೆಗೆ ಸಕಲ ರೀತಿಯಲ್ಲಿ ಈ ತಂಡಗಳು ಸನ್ನದ್ಧವಾಗಿವೆ. ಜಿಲ್ಲೆಯಲ್ಲಿ ಮಳೆಯಿಂದ ಯಾವುದೇ ಮಾನವ ಜೀವ ಹಾನಿಯಾಗದಂತೆ ಎಲ್ಲ ರೀತಿಯ ಗರಿಷ್ಠ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಜಾನುವಾರು ಪ್ರಾಣ ಹಾನಿ ತಡೆಗೂ ಅಗ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.