ಬಿಡುವು ಕೊಡದ ಮಳೆ, ಬಿತ್ತನೆಗೆ ಹಿನ್ನಡೆ

| Published : Jun 12 2024, 12:32 AM IST

ಸಾರಾಂಶ

ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂಗಾರು ಬಿತ್ತನೆಗೆ ಹಿನ್ನಡೆಯಾಗುವಂತೆ ಮಾಡಿದೆ. ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ದಿನಪೂರ್ತಿ ಮಳೆಯಾಗುತ್ತಲೇ ಇದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗುವಂತೆ ಮಾಡಿದೆ.

ಕಳೆದೊಂದು ವಾರದಿಂದ ಹಸಿ ಆರದಂತೆ ಸುರಿಯುತ್ತಿರುವ ಮಳೆಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಕಳೆದೊಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆ ಮುಂಗಾರು ಬಿತ್ತನೆಗೆ ಹಿನ್ನಡೆಯಾಗುವಂತೆ ಮಾಡಿದೆ. ಅದರಲ್ಲೂ ಕಳೆದ ನಾಲ್ಕು ದಿನಗಳಿಂದ ಜಿಲ್ಲಾದ್ಯಂತ ದಿನಪೂರ್ತಿ ಮಳೆಯಾಗುತ್ತಲೇ ಇದ್ದು, ಕೃಷಿ ಚಟುವಟಿಕೆ ಸ್ತಬ್ಧವಾಗುವಂತೆ ಮಾಡಿದೆ.

ಹೌದು, ಸಕಾಲಕ್ಕೆ ಮಳೆ ಬಂದಿದ್ದರಿಂದ ರೈತರು ಖುಷಿಯಾಗಿದ್ದರು. ರೋಹಿಣಿ ಮಳೆ ಕೊನೆಯಲ್ಲಿ ಭರ್ಜರಿಯಾಗಿಯೇ ಸುರಿಯಿತು. ಆದರೆ, ಅದಾದ ನಂತರ ಬಂದಿರುವ ಕೃತಿಕ ಮಳೆಯೂ ಎಡೆಬಿಡದೆ ಸುರಿಯುತ್ತಲೇ ಇದೆ. ಇದರಿಂದ ಬಿತ್ತನೆ ಮಾಡಲು ಆಗುತ್ತಿಲ್ಲ.

ಸಾಮಾನ್ಯವಾಗಿ ಜೂನ್ ಮೊದಲ ವಾರ ಅಥವಾ ಎರಡನೇ ವಾರದಲ್ಲಿಯೇ ಮುಂಗಾರು ಹಂಗಾಮಿನ ಬಹುತೇಕ ಬಿತ್ತನೆಯಾಗಬೇಕು. ಆದರೆ, ಈಗ ಎಡೆಬಿಡದೆ ಮಳೆ ಸುರಿಯುತ್ತಿರುವುದರಿಂದ ಬಿತ್ತನೆ ಕಾರ್ಯ ಸ್ಥಗಿತವಾಗಿದೆ.

ಈಗ ಸುರಿಯುತ್ತಿರುವ ಮಳೆ ಸದ್ಯ ಬಿಡುವು ನೀಡಿದರೂ ಸಹ ಬಿತ್ತನೆಗೆ ಇನ್ನೊಂದು ವಾರ ಕಾಯಲೇಬೇಕು. ಯರಿ(ಕಪ್ಪು) ನೆಲದಲ್ಲಿ ಇನ್ನು ಹದಿನೈದು ದಿನ ಆರದಷ್ಟು ಹಸಿಯಾಗಿದೆ. ಹೀಗಾಗಿ, ರೈತರು ಚಡಪಡಿಸಲಾರಂಭಿಸಿದ್ದಾರೆ.

ಶೇ. 120ರಷ್ಟು ಅಧಿಕ ಮಳೆ:

ಜಿಲ್ಲಾದ್ಯಂತ ಕಳೆದ ಜೂ. 1ರಿಂದ 9 ವರೆಗೂ ನಿಗದಿಗಿಂತಲೂ ಶೇ. 120ರಷ್ಟು ಅಧಿಕ ಮಳೆಯಾಗಿದೆ. ಇದು ಕಳೆದ ಹತ್ತು ವರ್ಷಗಳಲ್ಲಿಯೇ ಅಧಿಕ ಮಳೆ ಎಂದೇ ಹೇಳಲಾಗುತ್ತದೆ

ಜೂನ್ ಮೊದಲ ವಾರದಲ್ಲಿ 28.5 ಮಿಲಿಮೀಟರ್ ಮಳೆಯಾಗಬೇಕು. ಆದರೆ, ಈ ವರ್ಷ ಇದೇ ಅವಧಿಯಲ್ಲಿ 83.5 ಮಿ.ಮೀ. ಮಳೆಯಾಗಿದೆ. ಇದರಿಂದ ಬಿತ್ತನೆಗೆ ಅವಶ್ಯವಿರುವುದಕ್ಕಿಂತಲೂ ಹೆಚ್ಚು ಹಸಿಯಾಗಿದೆ. ರೈತರ ಭೂಮಿಯಲ್ಲಿ ಮಳೆ ನೀರು ನಿಂತಿದ್ದು, ಹೊಲದಲ್ಲಿ ಉಳುಮೆ ಮಾಡಲಾಗುತ್ತಿಲ್ಲ. ಹರಗುವುದು, ಬಿತ್ತುವುದು ಸೇರಿದಂತೆ ಯಾವುದಕ್ಕೂ ಅನುಕೂಲಕರವಾಗಿಲ್ಲ. ಹೀಗಾಗಿ, ರೈತರು ಮಳೆ ನಿಂತರೆ ಸಾಕು ಎನ್ನುತ್ತಿದ್ದಾರೆ.

ಮಳೆಗಾಗಿ ಪ್ರಾರ್ಥಿಸಿದ ರೈತರು ಈಗ ಅದೇ ಮಳೆ ನಿಲ್ಲುವುದಕ್ಕಾಗಿ ಪ್ರಾರ್ಥಿಸಲಾರಂಭಿಸಿದ್ದಾರೆ.ಮೊದಲ ವಾರವೇ ಸೂಕ್ತ:

ಮುಂಗಾರು ಬಿತ್ತನೆಗೆ ಜುಲೈ ಅಂತ್ಯದವರೆಗೂ ಕಾಲಾವಕಾಶ ಇದೆಯಾದರೂ ಜೂನ್ ತಿಂಗಳಲ್ಲಿಯೇ ಬಿತ್ತನೆ ಮಾಡಿದರೆ ಉತ್ತಮ ಎನ್ನುತ್ತಾರೆ ರೈತರು. ಜೂನ್ ಮೊದಲ ಬಾರಿದಲ್ಲಿ ಬಿತ್ತನೆ ಮಾಡಿದರೆ ಅತ್ಯುತ್ತಮ ಇಳುವರಿ ಬರುತ್ತದೆ. ಮುಂದೆ ಹಿಂಗಾರಿ ಬಿತ್ತನೆಗೂ ಸಾಕಷ್ಟು ಕಾಲಾವಕಾಶ ಸಿಗುತ್ತದೆ. ಮುಂಗಾರಿ ಬಿತ್ತನೆ ವಿಳಂಬವಾದರೆ ಈ ಬೆಳೆ ಕಟಾವು ಮಾಡಿಕೊಂಡು, ನಂತರ ಹಿಂಗಾರಿ ಬಿತ್ತನೆ ಮಾಡಬೇಕಾಗಿರುವುದರಿಂದ ಮುಂಗಾರು ಬಿತ್ತನೆಗೆ ಸಕಾಲವಾಗಿದ್ದು, ಬಿಡುವು ನೀಡಿದರೆ ಅನುಕೂಲ ಎನ್ನುತ್ತಾರೆ ರೈತರು.ತುಂಬಿಹರಿದ ಹಳ್ಳಕೊಳ್ಳಗಳು:

ಪ್ರಸಕ್ತ ವರ್ಷ ಮುಂಗಾರು ಪ್ರಾರಂಭದಲ್ಲಿಯೇ ಜಿಲ್ಲಾದ್ಯಂತ ಹಳ್ಳಕೊಳ್ಳಗಳು ತುಂಬಿ ಹರಿದಿರುವುದರಿಂದ ಭೂಮಿಯೂ ತಂಪಾಗಿದೆ ಮತ್ತು ಅಂತರ್ಜಲ ಹೆಚ್ಚಳಕ್ಕೂ ಅನುಕೂಲವಾಗಿವೆ.

ಇದರಿಂದ ಪಂಪ್‌ಸೆಟ್ ಆಧಾರಿತ ರೈತರಿಗೂ ಫುಲ್ ಖುಷಿಯಾಗಿದೆ. ಅತೀಯಾದ ಬಿಸಿಲಿನ ತಾಪದಿಂದ ಅಂತರ್ಜಲ ಕುಸಿದು, ಸಮಸ್ಯೆ ಎದುರಿಸುತ್ತಿದ್ದ ರೈತರು ಈಗ ನಿಟ್ಟುಸಿರು ಬಿಟ್ಟಿದ್ದಾರೆ.