ಭದ್ರಾ ಜಲಾಶಯದ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ ಸೇರ್ಪಡೆ ಮಾಡುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಭದ್ರಾ ಜಲಾಶಯದ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆಯ ಸೇರ್ಪಡೆ ಮಾಡುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ರಾಜ್ಯ ಸರ್ಕಾರವ ಆಗ್ರಹಿಸಿದೆ.

ಈ ಸಂಬಂಧ ಬುಧವಾರ ಇಲ್ಲಿ ಹೇಳಿಕೆ ನೀಡಿರುವ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ, ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳನ್ನು ನೀರಾವರಿಗೆ ಒಳಪಡಿಸುವ ಸಂಬಂಧ ಭದ್ರಾ ಮೇಲ್ದಂಡೆ ಯೋಜನೆ ರೂಪಿಸಿ 29.90 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ 2,25,515 ಹೆಕ್ಟೇರ್‌ ಭೂ ಪ್ರದೇಶಕ್ಕೆ ಸೂಕ್ಷ್ಮ ನೀರಾವರಿ(ಡ್ರಿಪ್) ಸೌಲಭ್ಯ, ಅಲ್ಲದೇ 367 ಕೆರೆಗಳಿಗೆ ಅರ್ಧದಷ್ಟು ನೀರನ್ನು ತುಂಬಿಸಲಾಗುತ್ತಿದೆ. ಡ್ರಿಪ್‌ಗೆ 21.90 ಟಿಎಂಸಿ, ಕೆರೆ ತುಂಬಿಸಲು 6 ಟಿಎಂಸಿ ಹಾಗೂ ವಿವಿ ಸಾಗರ ಜಲಾಶಯಕ್ಕೆ ಎರಡು ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ. ಭದ್ರಾ ಅಚ್ಚು ಕಟ್ಟು ಪ್ರದೇಶಕ್ಕೆ ಚಿತ್ರದುರ್ಗ ಒಳಪಟ್ಟಿದ್ದರೂ ಕಾಡಾ ಸಮಿತಿಯಿಂದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರೈತ ಹೋರಾಟಗಾರರ ಹೊರಗಿಡಲಾಗಿದೆ.

ಭದ್ರಾ ಅಚ್ಚು ಕಟ್ಟು 1.05 ಲಕ್ಷ ಹೆಕ್ಟೇರುನಷ್ಟಿದ್ದು ಮುಂಗಾರು ಹಂಗಾಮಿಗೆ ಸುಮಾರು 34.62 ಟಿಎಂಸಿಯಷ್ಟು ನೀರು ಬೇಕಾಗುತ್ತದೆ. ಕಾಲುವೆಗೆ ನೀರು ಹಾಯಿಸುವಂತೆ ದಾವಣಗೆರೆ ಪ್ರದೇಶದ ರೈತರು ಕಾಡಾ ಮೇಲೆ ಒತ್ತಡ ತಂದಿದ್ದರಿಂದ ಆ. 18 ರಂದು ಸಚಿವ ಮಧು ಬಂಗಾರಕ್ಕೆ ಅವರ ಅಧ್ಯಕ್ಷತೆಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿ(ಐಸಿಸಿ-Irrigation consultative committee)ಸಭೆಯಲ್ಲಿ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಯ ಎಲ್ಲ ಸಚಿವರು,ಶಾಸಕರು, ರೈತಮುಖಂಡರು ಪಾಲ್ಗೊಂಡಿದ್ದರು.

ಸಭೆಯಲ್ಲಿ ಮುಂಗಾರು ಹಂಗಾಮಿಗೆ ಭದ್ರಾ ಜಲಾಶಯದಿಂದ ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ 124 ದಿನ ನೀರು ಹಾಯಿಸಲು 32.62 ಟಿಎಂಸಿ ಹಾಗೂ ಭದ್ರಾ ಮೇಲ್ದಂಡೆಗೆ 12.40 ಟಿಎಂಸಿಯಷ್ಟು ನೀರು ಬಿಡುಗಡೆ ಮಾಡುವ ವಿಷಯ ಚರ್ಚೆಯಾಗಿದೆ. ನೀರು ಬಿಡಿ ಎಂದು ಒಂದಿಷ್ಟು ಮಂದಿ, ಬೇಡವೇ ಬೇಡವೆಂದು ಹಲವರು ಪಟ್ಟು ಹಿಡಿದಿದ್ದರಿಂದ ಒಮ್ಮತದ ತೀರ್ಮಾನಕ್ಕೆ ಬರಲು ಸಾಧ್ಯವಾಗದೆ ಅಂತಿಮವಾಗಿ ನಿರ್ಣಯದ ಚೆಂಡನ್ನು ಮುಖ್ಯಮಂತ್ರಿ ಅಂಗಳಕ್ಕೆ ಎಸೆಯಲಾಗಿದೆ.

ಭದ್ರಾ ಜಲಾಶಯದಲ್ಲಿ ಚಿತ್ರದುರ್ಗ ಜಿಲ್ಲೆಯ ಪಾಲಿದ್ದರೂ ಕಾಡಾ ಹಾಗೂ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಪಾಲ್ಗೊಂಡು ತಮ್ಮ ಪ್ರದೇಶದ ರೈತರ ಹಿತಕಾಯಲು ಅಲ್ಲಿ ಯಾರೂ ಇಲ್ಲದಂತಾಗಿದೆ. ಇದು ಕೆಲವು ಸಂದರ್ಭದಲ್ಲಿ ನೀರು ಪಡೆಯಲು ಹಿನ್ನಡೆಯಾಗುವ ಸಾಧ್ಯತೆ ಇರುತ್ತದೆ. ಜಿಲ್ಲೆಯ ಜನ ಪ್ರತಿನಿಧಿಗಳು ಈ ಬಗ್ಗೆ ಆಲೋಚನೆ ಮಾಡದಿರುವುದನ್ನು ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಖಂಡಿಸುತ್ತದೆ.

ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಹಾಗೂ ಹಾಲಿ ಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಗಮನಕ್ಕೆ ಈ ವಿಷಯ ತಂದು ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಮಾಡುವಂತೆ ಮನವಿ ಮಾಡಲಾಗಿತ್ತು. ಭದ್ರಾ ಮೇಲ್ದಂಡೆಯಡಿ ಈಗಾಗಲೇ ವಿವಿ ಸಾಗರಕ್ಕೆ ನೀರು ಹರಿದು ಬಂದಿದೆ. ಚಿಕ್ಕಮಗಳೂರು ಜಿಲ್ಲೆಯ ತರಿಕೆರೆ ಬಳಿ ಡ್ರಿಪ್ ನ ಫೈಲಟ್ ಪ್ರಾಜೆಕ್ಟ್ ಜಾರಿಗೊಳಿಸಿ ರೈತರಿಗೆ ನೀರು ನೀಡಲಾಗಿದೆ. ವಾಸ್ತವಾಂಶ ಹೀಗಿದ್ದರೂ ಕಾಡಾದಿಂದ ಚಿತ್ರದುರ್ಗ ಜಿಲ್ಲೆಯ ಹೊರಗಿಡುವುದು ಸೂಕ್ತವಲ್ಲ.

ರಾಜ್ಯ ಸರ್ಕಾರ ಕೂಡಲೇ ಭದ್ರಾ ಕಾಡಾ ವ್ಯಾಪ್ತಿಗೆ ಚಿತ್ರದುರ್ಗ ಜಿಲ್ಲೆ ಸೇರ್ಪಡೆ ಮಾಡಬೇಕು. ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ಮುಗಿದಿರುವುದರಿಂದ ವಾರದೊಳಗೆ ಭದ್ರಾ ನೀರು ಹಾಯಿಸಿ ಹೊಳಲ್ಕೆರೆ ತಾಲೂಕಿನ ಎಲ್ಲ ಕೆರೆಗಳು ಹಾಗೂ ಗೋನೂರು ಕೆರೆವರೆಗೆ ನೀರು ಪೂರೈಕೆ ಮಾಡಬೇಕೆಂದು ನೀರಾವರಿ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ.ಲಿಂಗಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಕೆ.ಆರ್.ದಯಾನಂದ, ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ, ರೈತ ಸಂಘದ ಜಿಲ್ಲಾಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಸಿಪಿಐನ ಜಿ.ಸುರೇಶ್ ಬಾಬು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

----------------ಕೋಟ್

ಚಿತ್ರದುರ್ಗ ಜಿಲ್ಲೆಯಿಂದ ಸಚಿವ ರಘುಮೂರ್ತಿ ಸೇರಿ ಐದು ಮಂದಿ ಶಾಸಕರು, ಇಬ್ಬರು ವಿಧಾನ ಪರಿಷತ್ ಸದಸ್ಯರಿದ್ದಾರೆ. ಇವರೆಲ್ಲರೂ ಕಾಡಾ ಸಮಿತಿ ವ್ಯಾಪ್ತಿಗೆ ಒಳಪಡಬೇಕಾಗುತ್ತದೆ. ನೀರಾವರಿ ಸಲಹಾ ಸಮಿತಿ ಸಭೆ ಕರೆದಾಗ ನಮ್ಮ ಪ್ರದೇಶದ ನೀರಿನ ಹಕ್ಕನ್ನು ಪ್ರತಿಪಾದಿಸಲು ಸಾಧ್ಯವಾಗುತ್ತದೆ.

--- ಬಿ.ಎ. ಲಿಂಗಾರೆಡ್ಡಿ

---------

ಪೋಟೋ ಕ್ಯಾಪ್ಸನ್

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಯಗಡೆಹಳ್ಳಿ ಬಳಿ ಕಾಲುವೆ ತೋಡುವ ಕಾಮಗಾರಿ ಅಂತಿಮ ಹಂತಕ್ಕೆ ಬಂದಿರುವುದು.

------ಪೋಟೋ ಫೈಲ್ ನೇಮ್-19 ಸಿಟಿಡಿ 1--