ಒಂದು ಮನೆಯ ಮೇಲ್ಚಾವಣಿ ಮೇಲೆ ಗಿಡಗಳು ಬೆಳೆದು ನಿಂತಿವೆ. ಇನ್ನೊಂದು ಮನೆಯ ಮೇಲ್ಚಾವಣಿಯ ಕಬ್ಬಿಣ ಕಿತ್ತು ಜೋತಾಡುತ್ತಿದೆ. ಮತ್ತೊಂದು ಮನೆಯ ಬಾಲ್ಕನಿ ಬೀಳುವ ಹಂತದಲ್ಲಿದೆ.

ಧಾರವಾಡ:

ಕೇಂದ್ರ ಸರ್ಕಾರದ ಆದಾಯ ಮೂಲದ ಪ್ರಮುಖ ಇಲಾಖೆಗಳಲ್ಲಿ ಆದಾಯ ತೆರಿಗೆ ಇಲಾಖೆಯೂ ಒಂದು. ಆದಾಯ ಸಂಗ್ರಹದ ಗುರಿ ನೀಡುವ ಸರ್ಕಾರಗಳು ಇಲಾಖೆ ಅಧಿಕಾರಿಗಳಿಗೆ ನೀಡುವ ಸೌಲಭ್ಯಗಳ ಬಗ್ಗೆ ಯೋಚಿಸುವುದಿಲ್ಲ ಎಂಬುದಕ್ಕೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವಾಸಿಸುವ ವಸತಿ ಸಮುಚ್ಚಯವೇ ಉತ್ತಮ ನಿದರ್ಶನವಾಗಿದೆ.

ನವನಗರದಲ್ಲಿ ಇರುವ ಇಲಾಖೆಯ ವಸತಿ ಸಮುಚ್ಚಯಗಳ ದುಸ್ಥಿತಿಯಿಂದ ಅಧಿಕಾರಿ ಮತ್ತು ಸಿಬ್ಬಂದಿಗಳು ಕೆಟ್ಟ ಸ್ಥಿತಿಯಲ್ಲಿರುವ ಮನೆಗಳಲ್ಲಿ ನಿತ್ಯ ರಾತ್ರಿ ನೆಮ್ಮದಿಯ ನಿದ್ದೆ ಮಾಡದಂತಾಗಿದೆ. ನಿರ್ವಹಣೆ ಕೊರತೆಯಿಂದಾಗಿ ಅವರು ವಾಸಿಸುವ ವಸತಿ ಸಮುಚ್ಚಯಗಳು ತೀರಾ ದುಸ್ಥಿತಿಗೆ ತಲುಪಿವೆ.

ಒಂದು ಮನೆಯ ಮೇಲ್ಚಾವಣಿ ಮೇಲೆ ಗಿಡಗಳು ಬೆಳೆದು ನಿಂತಿವೆ. ಇನ್ನೊಂದು ಮನೆಯ ಮೇಲ್ಚಾವಣಿಯ ಕಬ್ಬಿಣ ಕಿತ್ತು ಜೋತಾಡುತ್ತಿದೆ. ಮತ್ತೊಂದು ಮನೆಯ ಬಾಲ್ಕನಿ ಬೀಳುವ ಹಂತದಲ್ಲಿದೆ. ಸುಮಾರು ಹತ್ತು ವಸತಿ ಸಮುಚ್ಚಯದಲ್ಲಿಯ 50ಕ್ಕೂ ಹೆಚ್ಚು ಮನೆಗಳು ದುಸ್ಥಿತಿಯಲ್ಲಿದ್ದು, ಅನಿವಾರ್ಯವಾಗಿ ಐಟಿ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಇಲ್ಲಿ ವಾಸಿಸುತ್ತಿದ್ದಾರೆ.

ಬೀಳುವ ಹಂತದಲ್ಲಿ:

ಇಲಾಖೆ ಆಡಳಿತ ಕಚೇರಿ ಹಿಂಬದಿಯೇ ಇರುವ ವಸತಿ ಸಮುಚ್ಚಯಗಳ ಪೈಕಿ ಎರಡು ವಸತಿ ಸಮುಚ್ಚಯಗಳಂತೂ ವಾಸಯೋಗ್ಯವೇ ಅಲ್ಲ. ಹೀಗಾಗಿ ಸದ್ಯಕ್ಕೆ ಅಲ್ಲಿ ವಾಸಿಸುತ್ತಿಲ್ಲ. ಯಾವ ಕ್ಷಣದಲ್ಲಿ ಅವುಗಳು ಬಿದ್ದರೂ ಅಚ್ಚರಿ ಇಲ್ಲ. ಇಷ್ಟಾಗಿಯೂ ಅವುಗಳನ್ನು ತೆರವುಗೊಳಿಸುವ ಕಾರ್ಯ ಮಾತ್ರ ಇನ್ನೂ ಆಗಿಲ್ಲ.

ಸಂಪೂರ್ಣ ದುಸ್ಥಿತಿಗೆ ಒಳಗಾದ ಸಮುಚ್ಚಯ ತೆರವುಗೊಳಿಸಿ ಹೊಸ ಸಮುಚ್ಚಯ ನಿರ್ಮಿಸುವ ಹಾಗೂ ಮೇಲ್ಚಾವಣಿ ಸೇರಿದಂತೆ ಮನೆ ಒಳ-ಹೊರಗೆ ರಿಪೇರಿ ಕಾರ್ಯವು ಇಂದು ಅಥವಾ ನಾಳೆ ಆಗಬಹುದು ಎಂದು ಹಲವು ವರ್ಷಗಳಿಂದ ಐಟಿ ಅಧಿಕಾರಿಗಳು, ಸಿಬ್ಬಂದಿ ಕಾಯ್ದಿದ್ದೇ ಬಂತು. ನಿರ್ವಹಣೆ ವಿಚಾರದಲ್ಲಿ ಯಾವುದೇ ಬೆಳವಣಿಗೆಯಾಗುತ್ತಿಲ್ಲ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಅಲ್ಲಿಯ ಸಿಬ್ಬಂದಿಯೊಬ್ಬರು ಅಳಲು ತೋಡಿಕೊಂಡರು.

ಬಣ್ಣ, ಸುಣ್ಣವಿಲ್ಲ:

ಈ ವಸತಿ ಸಮುಚ್ಚಯ ನಿರ್ಮಿಸಿ ಸುಮಾರು ವರ್ಷಗಳಾಗಿದ್ದು, ಬಣ್ಣ-ಸುಣ್ಣ ಕಂಡಿಲ್ಲ. ಇಲ್ಲಿಯ ಅಧಿಕಾರಿಗಳು, ಸಿಬ್ಬಂದಿ ಆಗಾಗ ವರ್ಗವಾಗುವ ಕಾರಣ, ಯಾರೂ ಈ ವಿಷಯದ ಬಗ್ಗೆ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಯಾರಾದರೂ ಅತಿಥಿಗಳು ಬಂದರೆ, ಅವರನ್ನು ಮನೆಯೊಳಗೆ ಹೇಗೆ ಕರೆಯೋದು ಎಂಬುದೇ ಚಿಂತೆಯಾಗಿದೆ ಅವರಿಗೆ. ಅಷ್ಟೊಂದು ಕೆಟ್ಟ ಸ್ಥಿತಿಯಲ್ಲಿ ಮನೆಗಳಿದ್ದು, ಈ ಮನೆಗಳಿಗೆ ಮುಕ್ತಿ ಕೊಡಿಸಿ ಉತ್ತಮ ವಾಸಯೋಗ್ಯ ಮನೆಗಳನ್ನು ಕೇಂದ್ರ ಸರ್ಕಾರ ಕೊಡುವಂತಾಗಲಿ ಎಂದು ಹೆಸರು ಹೇಳಲಿಚ್ಚಸದ ಆದಾಯ ತೆರಿಗೆ ಇಲಾಖೆ ಅಧಿಕಾರಿಯೊಬ್ಬರು ಮನವಿ ಮಾಡಿದರು.