ಕೆಸಿಸಿಐ ಪದಾಧಿಕಾರಿಗಳು ದೆಹಲಿ ಮಟ್ಟದಲ್ಲಿ ಸಚಿವರು, ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಿದ್ದಾರೆಯೇ ಹೊರತು ಉತ್ತರ ಕರ್ನಾಟಕಾದ್ಯಂತ ಉದ್ಯಮಿಗಳಿಗೆ, ಜನರಿಗೆ ಸರಿಯಾಗಿ ಮಾಹಿತಿಯನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಹುಬ್ಬಳ್ಳಿ:

ಅಚ್ಚುಕಟ್ಟಾದ ಕಾರ್ಯಕ್ರಮ.. ಆದರೆ ಜನರೇ ಇಲ್ಲ..!

ಇದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯೂ ಇಲ್ಲಿನ ಎಪಿಎಂಸಿ ಪ್ರಾಂಗಣದಲ್ಲಿ ಆಯೋಜಿಸಿರುವ ಉತ್ತರ ಕರ್ನಾಟಕದ ಅತಿ ದೊಡ್ಡ ಕೈಗಾರಿಕಾ ವಸ್ತು ಪ್ರದರ್ಶನ ಇನ್‌ಕಾಮೆಕ್ಸ್‌ ಪರಿಸ್ಥಿತಿ.

ಉದ್ಯಮ, ಕೈಗಾರಿಕೆಗಳ ಬಗ್ಗೆ ಚರ್ಚೆ ನಡೆಸಲು ದೊಡ್ಡ ವೇದಿಕೆ ನಿರ್ಮಿಸಲಾಗಿದೆ. ಬರೋಬ್ಬರಿ 300ಕ್ಕೂ ಅಧಿಕ ಮಳಿಗೆಗಳಿವೆ. ಎಲ್ಲವೂ ಅಚ್ಚುಕಟ್ಟಾಗಿ ಮಾಡಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಜನರು ಬರದೆ ಎಲ್ಲ ಮಳಿಗೆಗಳು ಖಾಲಿ ಖಾಲಿಯಾಗಿವೆ. ಬೆಳಗ್ಗೆಯಿಂದ 10ರಿಂದಲೇ ಪ್ರದರ್ಶನ ಶುರುವಾಗುತ್ತಿದ್ದು ರಾಜ್ಯ-ಹೊರರಾಜ್ಯಗಳಿಂದ ದೊಡ್ಡ ಕಂಪನಿ ಬಂದಿವೆ.

ಯುವ ಕೈಗಾರಿಕೋದ್ಯಮಿಗಳನ್ನು ಪ್ರೋತ್ಸಾಹಿಸಲು ಚರ್ಚಾ ಗೋಷ್ಠಿ ಆಯೋಜಿಸಿ ದೊಡ್ಡ ಉದ್ಯಮಿಗಳನ್ನು ಕರೆಸಲಾಗಿದೆ. ಆದರೆ, ಕೇಳುಗರೇ ಇಲ್ಲದಂತಾಗಿದೆ. ಸಂಜೆ ಜನರನ್ನು ಆಕರ್ಷಿಸಲು ಮನರಂಜನಾ ಕಾರ್ಯಕ್ರಮ ಆಯೋಜಿಸಿದರೂ ಅದಕ್ಕೂ ಸಹ ಜನರ ಸ್ಪಂದನೆ ದೊರೆಕಿಲ್ಲ.

ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೇಂದ್ರ ಸಚಿವರು, ರಾಜ್ಯ ಸಚಿವರನ್ನು ಆಹ್ವಾನಿಸಿದರೂ ಈ ವರೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಸಂತೋಷ ಲಾಡ್‌, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಮಹೇಶ ಟೆಂಗಿನಕಾಯಿ, ಎನ್‌.ಎಚ್‌. ಕೋನರಡ್ಡಿ ಆಗಮಿಸಿದ್ದರೆ ಮತ್ಯಾರೂ ಆಗಮಿಸಿಲ್ಲ.

ಕಾರಣವೇನು?

ಕೆಸಿಸಿಐ ಪದಾಧಿಕಾರಿಗಳು ದೆಹಲಿ ಮಟ್ಟದಲ್ಲಿ ಸಚಿವರು, ಗಣ್ಯಾತಿಗಣ್ಯರಿಗೆ ಆಹ್ವಾನ ನೀಡಿದ್ದಾರೆಯೇ ಹೊರತು ಉತ್ತರ ಕರ್ನಾಟಕಾದ್ಯಂತ ಉದ್ಯಮಿಗಳಿಗೆ, ಜನರಿಗೆ ಸರಿಯಾಗಿ ಮಾಹಿತಿಯನ್ನೇ ತಲುಪಿಸಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳು ಆಗಮಿಸಲಿದ್ದಾರೆಂದು ಕೆಸಿಸಿಐ ಪದಾಧಿಕಾರಿಗಳು ಹೇಳಿದ್ದರು. ಆದರೆ ಬೇಸಿಗೆ ರಜೆ ಹಿನ್ನೆಲೆ ಮಕ್ಕಳು ಪ್ರಮಾಣವೂ ಹೆಚ್ಚಿಲ್ಲ.