ಏ. 25ರಿಂದ 5 ದಿನ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಇನ್​ಕಾಮೆಕ್ಸ್​-2026ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಹಾಗೂ ಈ ಭಾಗಕ್ಕೆ ಹೆಚ್ಚಿನ ಕೈಗಾರಿಕೆಗಳು ಬರುವ ಕುರಿತು ಚರ್ಚೆ ನಡೆಯುವಂತಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.

ಹುಬ್ಬಳ್ಳಿ:

ನಗರದಲ್ಲಿ ಏ. 25ರಿಂದ 5 ದಿನ ಆಯೋಜಿಸಿರುವ ಇನ್​ಕಾಮೆಕ್ಸ್​-2026ನಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತ ಚರ್ಚೆ ಹಾಗೂ ಈ ಭಾಗಕ್ಕೆ ಹೆಚ್ಚಿನ ಕೈಗಾರಿಕೆಗಳು ಬರುವ ಕುರಿತು ಚರ್ಚೆ ನಡೆಯುವಂತಾಗಲಿ ಎಂದು ಶಾಸಕ ಮಹೇಶ ಟೆಂಗಿನಕಾಯಿ ಸಲಹೆ ನೀಡಿದರು.

ಇಲ್ಲಿನ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಶನಿವಾರ ಆಯೋಜಿಸಿದ್ದ ಇನ್​ಕಾಮೆಕ್ಸ್-2026​ ಪೂರ್ವಸಿದ್ಧತೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಏ. 25ರಿಂದ 29ರ ವರೆಗೆ ನಡೆಯಲಿರುವ ಇನ್​ಕಾಮೆಕ್ಸ್-2026 ಯಶಸ್ಸಿಗೆ ಎಲ್ಲ ಜನಪ್ರತಿನಿಧಿಗಳು, ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಸೇರಿ ಒಂದು ತಂಡವಾಗಿ ಕೆಲಸ ಮಾಡೋಣ. ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಬೇಸಿಗೆ ಹಿನ್ನೆಲೆಯಲ್ಲಿ ಹೆಚ್ಚಿನ ಬಿಸಿಲು ಇರುವುದರಿಂದ ಕುಡಿಯುವ ನೀರಿಗೆ ಕೊರತೆಯಾಗದಂತೆ ನೋಡಿಕೊಳ್ಳಿ. ಸಾಧ್ಯವಾದರೆ ಪೈಪ್​ಲೈನ್​ ಅಳವಡಿಸುವಂತೆ ಎಲ್​ ಆ್ಯಂಡ್​ ಟಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತೋಟಗಾರಿಕೆ ಇಲಾಖೆ ಸುಂದರ ಸಸಿಗಳಿರುವ 500ಕ್ಕೂ ಹೆಚ್ಚು ಪಾಟ್​ ಇಡಬೇಕು. ಬಿಆರ್​ಟಿಎಸ್​ ಹೆಚ್ಚು ಬಸ್‌ಗಳ​ ಸಂಚಾರ ಆರಂಭಿಸಬೇಕು ಹಾಗೂ ಇನ್​ಕಾಮೆಕ್ಸ್​ ನಡೆಯಲಿರುವ ಅಮರಗೋಳ ಎಪಿಎಂಸಿ ಯಾರ್ಡ್​ನ ಹುಬ್ಬಳ್ಳಿ-ಧಾರವಾಡ ಮಲ್ಟಿ ಪರಪೋಸ್​ ಸೆಂಟರ್​ ಬಳಿ ಎಲ್ಲ ಬಸ್​ಗಳಿಗೆ ತಾತ್ಕಾಲಿಕ ನಿಲುಗಡೆ ಸೌಲಭ್ಯ ಒದಗಿಸುವಂತೆ ನಿರ್ದೇಶನ ನೀಡಿದರು.

ಎಪಿಎಂಸಿ ಯಾರ್ಡ್​ ಬಳಿಯ ಡಬ್ಬಿ ಅಂಗಡಿಗಳನ್ನು ತಾತ್ಕಾಲಿಕವಾಗಿ ತೆರವುಗೊಳಿಸುವಂತೆ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಇನ್​ಕಾಮೆಕ್ಸ್​ ಮುಗಿದ ನಂತರ ಡಬ್ಬಿ ಅಂಗಡಿ ಮಾಲಿಕರಿಗೆ ಮರಳಿ ವ್ಯಾಪಾರ ಆರಂಭಿಸಲು ಅನುಕೂಲ ಮಾಡಿಕೊಡುವಂತೆ ಸೂಚಿಸಿದರು.

ಇನ್​ಕಾಮೆಕ್ಸ್​ಗೆ ನಿರಂತರ ವಿದ್ಯುತ್​ ಪೂರೈಕೆಯಾಗಬೇಕು. ಸಮರ್ಪಕ ವಾಹನ ದಟ್ಟಣೆ ನಿರ್ವಹಣೆ ಮಾಡಲು ಪೊಲೀಸ್​ ಇಲಾಖೆ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಕಾರ್ಯದರ್ಶಿ ಉದಯ ರೇವಣಕರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವರಾದ ಪಿಯುಷ್​ ಗೋಯಲ್​, ಶೋಭಾ ಕರಂದ್ಲಾಜೆ, ರಾಜ್ಯ ಸರ್ಕಾರದ ಸಚಿವರಾದ ಎಂ.ಬಿ. ಪಾಟೀಲ, ಸಂತೋಷ ಲಾಡ್​ ಸೇರಿದಂತೆ ಇನ್​ಕಾಮೆಕ್ಸ್​ಗೆ ಆಗಮಿಸಲಿರುವ ಇತರ ಅತಿಥಿಗಳು ಹಾಗೂ ಭಾಗವಹಿಸಲಿರುವ ವಿವಿಧ ಉದ್ಯಮಗಳ ಕುರಿತು ಮಾಹಿತಿ ನೀಡಿದರು.

ಸಂಸ್ಥೆಯ ಅಧ್ಯಕ್ಷ ಜಿ.ಕೆ. ಆದಪ್ಪನವರ, ವಿಜಯ ಜವಳಿ, ಜಯಪ್ರಕಾಶ ಟೆಂಗಿನಕಾಯಿ, ವೀರಣ್ಣ ಕಲ್ಲೂರ, ಶಶಿಧರ ಶೆಟ್ಟರ ಸೇರಿದಂತೆ ಹಲವರಿದ್ದರು.