ಪ್ರತಿನಿತ್ಯ ಜೀವನದಲ್ಲಿ ಯೋಗ ಮೈಗೂಡಿಸಿಕೊಳ್ಳಿ: ಜ್ಯೋತಿ ಕಟ್ಟಿ

| Published : Jun 20 2024, 01:05 AM IST

ಸಾರಾಂಶ

ವಿದ್ಯಾರ್ಥಿನಿಯರು ಪ್ರತಿನಿತ್ಯ ಜೀವನದಲ್ಲಿ ಯೋಗ ಮೈಗೂಡಿಸಿಕೊಳ್ಳಬೇಕು.

ಮಹಿಳಾ ಸಬಲೀಕರಣಕ್ಕಾಗಿ ಯೋಗೋತ್ಸವ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಯಲಬುರ್ಗಾ

ವಿದ್ಯಾರ್ಥಿನಿಯರು ಪ್ರತಿನಿತ್ಯ ಜೀವನದಲ್ಲಿ ಯೋಗ ಮೈಗೂಡಿಸಿಕೊಳ್ಳಬೇಕು. ಯೋಗ ಮನುಷ್ಯನ ಬದುಕಿನ ಅವಿಭಾಜ್ಯ ಅಂಗವಾದಾಗ ನಮ್ಮೆದಿ ಜೀವನ ನಡೆಸಲು ಸಾಧ್ಯ ಎಂದು ತಾಲೂಕಿನ ಬಂಡಿ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರದ ವೈದ್ಯಾಧಿಕಾರಿ ಡಾ. ಜ್ಯೋತಿ ಕಟ್ಟಿ ಹೇಳಿದರು.

ತಾಲೂಕಿನ ಬಳೂಟಗಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ಮಂಗಳವಾರ ಬಂಡಿ ಆಯುಷ್ಮಾನ ಆರೋಗ್ಯ ಮಂದಿರ ವತಿಯಿಂದ ೧೦ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ಮಹಿಳಾ ಸಬಲೀಕರಣಕ್ಕಾಗಿ ಯೋಗೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ನಿತ್ಯ ಒತ್ತಡದ ಬದುಕಿನಲ್ಲಿ ಜೀವನ ಸಾಗಿಸುವ ನಮಗೆ, ಹಲವಾರು ಕಾಯಿಲೆಗಳಿಗೆ ಅಂಟಿಕೊಂಡು ನರಳುತ್ತಿರುವವರಿಗೆ ಯೋಗಾಸನ ಮಾಡುವುದು ಉತ್ತಮ. ಎಲ್ಲ ಕಾಯಿಲೆಗಳಿಗೂ ಯೋಗ ರಾಮಬಾಣವಾಗಿದೆ ಎಂದರು.

ಯೋಗಾಸನ ನಮ್ಮ ಬದುಕುನ್ನು ಸುಂದರಗೊಳಿಸುವ ಜೊತೆಗೆ ಬಹುಕಾಲ ಬಾಳಿ, ಬದುಕಲು ನೆಮ್ಮದಿ ಜೀವನಕ್ಕೆ ದಾರಿದೀಪವಾಗಿದೆ. ಇದು ಕೇವಲ ಪುರುಷರಿಗಷ್ಟೆ ಅಲ್ಲ, ಮಹಿಳೆಯರು, ವಿದ್ಯಾರ್ಥಿನಿಯರು, ಯುವಕ- ಯುವತಿ, ವಯೋವೃದ್ಧರು ಯೋಗ ಮಾಡಬೇಕು. ಇದು ಸದೃಢ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.

ಬಳೂಟಗಿ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರಾದ ಜ್ಯೋತಿಶ್ವರ ಬೇಸ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಹ, ಮನಸ್ಸನ್ನು ಒಂದುಗೂಡಿಸುವುದೇ ಯೋಗ. ನೈತಿಕ ಮೌಲ್ಯ ಮತ್ತು ಆಧ್ಮಾತ್ಮಿಕ ಶಿಸ್ತನ್ನು ರೂಡಿಸಿಕೊಳ್ಳಲು ಯೋಗ ಅತಿ ಅವಶ್ಯ. ಇಂತಹ ಕೊಡುಗೆಯನ್ನು ವಿಶ್ವಕ್ಕೆ ನೀಡಿದ್ದು ಭಾರತೀಯರು ಎಂಬುದು ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ ಎಂದರು.

ಬಳಿಕ ಬಂಡಿ ಗ್ರಾಮದ ಆಯುಷ್ಮಾನ ಆರೋಗ್ಯ ಮಂದಿರದ ಯೋಗ ಶಿಬಿರಾರ್ಥಿ ಲೋಕೇಶ ಲಮಾಣಿ ವಿದ್ಯಾರ್ಥಿನಿಯರಿಗೆ ಸುಮಾರು ಒಂದು ಗಂಟೆಯವರೆಗೆ ಯೋಗದ ನಾನಾ ಆಸನಗಳನ್ನು ಮಾಡಿಸಿ ಯೋಗದ ಬಗ್ಗೆ ಜಾಗೃತಿ ಮೂಡಿಸಿದರು.

ಶಿಕ್ಷಕರಾದ ಸಾವಿತ್ರಿ ಡಂಬಳ, ವಿಜಯಲಕ್ಷ್ಮೀ, ನಾಗರತ್ನ, ನಿರ್ಮಲಾ, ಶಶಿಕಲಾ, ನಾಗರಾಜ, ಹನುಮಪ್ಪ, ಶ್ರೀಕಾಂತ, ಶ್ರೀನಿವಾಸ, ಹಾಗೂ ಆಯುಷ್ಮಾನ ಸಿಬ್ಬಂದಿ ಭರಮಪ್ಪ ಕಾಳಿ ಮತ್ತಿತರರು ಇದ್ದರು.