ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶಾಲಾ ಹಂತದಲ್ಲಿ ಮಕ್ಕಳಿಗೆ ಸಾಮಾನ್ಯ ಜ್ಞಾನದ ಬಗ್ಗೆ ಆಸಕ್ತಿ ಹೆಚ್ಚಿಸಿದರೆ ಭವಿಷ್ಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಾಧ್ಯವಾಗುತ್ತದೆ ಎಂದು ಮಂಡ್ಯ ಡಯೋಗ್ನೋಸ್ಟಿಕ್ ಸೆಂಟರ್‌ನ ವಿಕಿರಣ ಶಾಸ್ತ್ರಜ್ಞೆ ಡಾ.ಎಂ.ಜಿ. ಮಮತಾ ಅಭಿಪ್ರಾಯಪಟ್ಟರು.ಸಮೀಪದ ಮೆಣಸಗೆರೆ ಜ್ಞಾನ ಮುದ್ರ ವಿದ್ಯಾ ಮಂದಿರ ಶಾಲೆಯಲ್ಲಿ ಜ್ಞಾನ ವಿಕಾಸ ರಸಪ್ರಶ್ನೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಯುಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಪಾಲ್ಗೊಳ್ಳುವಿಕೆ ಅಗತ್ಯ. ಅದಕ್ಕಾಗಿ ಸಾಮಾನ್ಯ ಜ್ಞಾನ ಹೆಚ್ಚಳ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಸಾಮಾನ್ಯ ಜ್ಞಾನ ಹೊಂದಿರುವ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಲ್ಲಿ ಉದ್ಯೋಗ ಸಿಗುತ್ತದೆ. ಆದ್ದರಿಂದ ಪ್ರಾಥಮಿಕ ಶಾಲಾ ಹಂತದಲ್ಲಿ ವಿದ್ಯಾರ್ಥಿಗಳಿಗೆ ರಸ ಪ್ರಶ್ನೆಯಂತಹ ಸಾಮಾನ್ಯ ಜ್ಞಾನದ ಕಾರ್ಯಕ್ರಮಗಳು ಅನುಕೂಲವಾಗಲಿವೆ ಎಂದರು.ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದ ಸಂಸ್ಥೆ ಅಧ್ಯಕ್ಷೆ ಡಾ.ಸೌಮ್ಯ ರಾಜೇಶ್ ಮಾತನಾಡಿ, ಪೋಷಕರು ಮನೆಯಲ್ಲಿ ಮಕ್ಕಳಿಗೆ ಮೊಬೈಲ್ ನೀಡುವುದನ್ನು ಬಿಟ್ಟು ದಿನ ಪತ್ರಿಕೆಗಳನ್ನು ಓದಿದರೇ ಸಾಮಾನ್ಯ ಜ್ಞಾನ ಹೆಚ್ಚುತ್ತದೆ. ಮಕ್ಕಳನ್ನು ಮೊಬೈಲ್‌ನಿಂದ ದೂರವಿಡಲು ನೆರವಾಗುತ್ತದೆ ಎಂದರು.
ಶಾಲಾ ಹಂತದಲ್ಲೆ ಮಕ್ಕಳಲ್ಲಿ ಉತ್ಸಾಹ ಮೂಡಿಸಿ ಸ್ಪರ್ಧಾತ್ಮಕ ಜಗತ್ತಿನಲ್ಲಿ ಓದುವ ತಿಳಿವಳಿಕೆ ಮೂಡಿಸುವ ಉದ್ದೇಶದಿಂದ ಜ್ಞಾನ ವಿಕಾಸ ಎಂಬ ಹೆಸರಿನಲ್ಲಿ ರಸ ಪ್ರಶ್ನೆ ಆಯೋಜಿಸಿದೆ. ಉತ್ತಮ ಸ್ಪಂದನೆ ದೊರತಿದ್ದು ಇದಕ್ಕೆ ಪೋಷಕರು ಸಹ ಸಹಕರಿಸಿದ್ದಾರೆ ಎಂದರು.ಶಾಲೆ ಚೇರ್ಮನ್ ಪ್ರಭಾವತಿ ಸುರೇಶ್ ಮಾತನಾಡಿ, ಮಕ್ಕಳಲ್ಲಿ ಸಾಮಾನ್ಯ ಜ್ಞಾನ ಹೆಚ್ಚಿಸಲು ಪೋಷಕರು ಸಹ ಶ್ರಮಿಸಬೇಕು. ದಿನ ಪತ್ರಿಕೆಗಳನ್ನು ಹಾಕಿಸಿ ಕೊಳ್ಳುವ ಮೂಲಕ ಓದುವ ಅವ್ಯಾಸ ರೂಡಿಸಿ ಕೊಂಡರೆ ಯುಪಿಎಸ್‌ಸಿ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಿ ಉದ್ಯೋಗ ಪಡೆಯಲು ನೆರವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ 6 ರಿಂದ 9 ತರಗತಿವರೆಗೆ ಮಕ್ಕಳು ಭಾಗವಹಿಸಿ 6ನೇ ತರಗತಿಯ ಮನಸ್ವಿ, 7ನೇ ತರಗತಿ ಆರ್.ಸಾನ್ವಿ, ಪ್ರತೀಕ್, 9ನೇ ತರಗತಿಯ ಹರ್ಷಿಕ ಮತ್ತು ತೇಜಸ್ ಅಂತಿಮ ಸುತ್ತಿಗೆ ಆಯ್ಕೆಯಾಗಿದರು. ಕೊನೇ ಸುತ್ತಿನಲ್ಲಿ 7 ನೇತರಗತಿ ಆರ್.ಸಾನ್ವಿ ಆಯ್ಕೆಯಾಗಿ ಅಗ್ರಸ್ಥಾನ ಪಡೆದುಕೊಂಡರು.ಕಾರ್ಯಕ್ರಮದಲ್ಲಿ ಬೆಂಗಳೂರಿನ ಸ್ಕೂಲ್ ಸಕ್ಸಸ್ ಮ್ಯಾನೇಜರ್ ಪವನ್ ಸುತ, ಸಾಪ್ಟ್ ವೇರ್ ಎಂಜಿನಿಯರ್ ಪವನ್, ಸಂಸ್ಥೆ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಶಾಲೆ ಆಡಳಿತ ಮಂಡಳಿ ಸದಸ್ಯೆ ತೇಜಸ್ವಿನಿ ತಿಪರೇಗೌಡ, ಮುಖ್ಯ ಶಿಕ್ಷಕಿ ಕೆ.ಎಸ್. ಶೃತಿ, ಕಾರ್ಯಕ್ರಮದ ಸಂಯೋಜಕರು ಸೇರಿದಂತೆ ಮತ್ತಿತರಿದ್ದರು.