ಕೋಣನಕೆರೆ, ಒಡಕೆ ಹಳ್ಳ ಸಮೀಪ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ನೂರಾರು ಎಕರೆಯಲ್ಲಿ ಮಳೆಯ ನೀರು ಸಂಗ್ರಹವಾಗಲಿದೆ. ಇದೀಗ ಹಾಲೇರಿ ಕೆರೆ ಹೂಳು ತೆಗೆಸಲಾಗಿದೆ. ಆದರೆ ಅರಣ್ಯ ಭಾಗದಿಂದ ನೀರು ಬರಲು ಯಾವುದೇ ಕ್ರಮ ವಹಿಸದೆ ಇರುವುದರಿಂದ ಇದು ಪ್ರಯೋಜನವಾಗುತ್ತಿಲ್ಲ, ಪಣಕೋಬೆ ಗ್ರಾಮದಲ್ಲಿ ಜಲಾಶಯ ನಿರ್ಮಾಣ ಮಾಡಿದರೆ ಉಡುತೊರೆ ಜಲಾಶಯ ವ್ಯಾಪ್ತಿಯ ರೈತರಂತೆ ನಮಗೂ ಅನುಕೂಲವಾಗುತಿತ್ತು. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ, ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು.

ಕನ್ನಡಪ್ರಭ ವಾರ್ತೆ ಹನೂರು

ತಾಲೂಕಿನ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಚೆಕ್ ಡ್ಯಾಂಗಳ ಹೂಳು ತೆಗೆದು ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳು ಒಂದು ವಾರದೊಳಗೆ ಅಗತ್ಯ ಕ್ರಮ ವಹಿಸಬೇಕು, ಇಲ್ಲದಿದ್ದರೆ ನಾವೇ ನಮ್ಮ ಸ್ವಂತ ಹಣದಿಂದ ಹೂಳು ತೆಗೆಸಿಕೊಳ್ಳುತ್ತೇವೆ ಎಂದು ಬಿಜೆಪಿ ಯುವ ಮುಖಂಡ ನಿಶಾಂತ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಮಾರ್ಟಳ್ಳಿ ಗ್ರಾಮದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ತಾಲೂಕು ವ್ಯಾಪ್ತಿಯಲ್ಲಿ ಸಮರ್ಪಕ ಮಳೆಯಾಗದೆ ಸಾರ್ವಜನಿಕರು ಹಾಗೂ ಜಾನುವಾರುಗಳು ಹನಿಹನಿ ನೀರಿಗೂ ತೊಂದರೆ ಅನುಭವಿಸುವಂತಾಗಿದೆ.

ಅದರಲ್ಲೂ ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಹೆಸರು ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನವರಿ ತಿಂಗಳಲ್ಲಿಯೇ ಕುಡಿಯುವ ನೀರಿಗೆ ತೊಂದರೆ ಉಂಟಾಗಿದೆ. ಈ ಗ್ರಾಮಗಳಿಗೆ ಶಾಶ್ವತ ಪರಿಹಾರ ಒದಗಿಸಿದರೆ ಮಾತ್ರ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿದೆ, ಇಲ್ಲದಿದ್ದರೆ ಪ್ರತಿ ವರ್ಷವೂ ತೊಂದರೆ ಅನುಭವಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ನಿಟ್ಟಿನಲ್ಲಿ ಅರಣ್ಯದ ಮಧ್ಯಭಾಗದಲ್ಲಿ ನಿರ್ಮಾಣ ಮಾಡಿರುವ ಚೆಕ್ ಡ್ಯಾಮ್ ಗಳಲ್ಲಿ ಕಳೆದ 20 ವರ್ಷಗಳಿಂದ ಹೂಳು ತೆಗೆಯದೆ ಇರುವುದರಿಂದ ಸಂಪೂರ್ಣವಾಗಿ ಮುಚ್ಚಿ ಹೋಗಿವೆ, ಮಳೆಗಾಲದ ಸಂದರ್ಭದಲ್ಲಿ ನೀರು ಸಂಗ್ರಹಣೆಯಾಗದೆ ತಮಿಳುನಾಡಿಗೆ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಈ ಸಂಬಂಧ ಅಧಿಕಾರಿಗಳು ಸೂಕ್ತ ಕ್ರಮ ವಹಿಸದೆ ಇರುವುದರಿಂದ ಈ ಭಾಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ಒಂದು ವಾರದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಹೂಳು ತೆಗೆಸದಿದ್ದರೆ ನಾವೇ ಹೂಳು ತೆಗೆದುಕೊಳ್ಳಬೇಕಾಗುತ್ತದೆ ಎಂದರು.

ನೆನಗುದಿಗೆ ಬಿದ್ದಿರುವ ಪಣಕೋಬೆ ಜಲಾಶಯ ನಿರ್ಮಾಣ ಕಾಮಗಾರಿ:

1998ರಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಾಗಿದ್ದ ದಿ .ಎಚ್. ನಾಗಪ್ಪರವರು ಮಾರ್ಟಳ್ಳಿ ಗ್ರಾಮದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಪಣಕೋಬೆ ಗ್ರಾಮದಲ್ಲಿ ಜಲಾಶಯ ನಿರ್ಮಾಣ ಮಾಡಲು ಕ್ರಮವಹಿಸಿ ಭೂಮಿ ಪೂಜೆ ಮಾಡಿದ್ದರು. ಈಗಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ ಅಂದಿನ ಜೆ.ಎಚ್. ಪಟೇಲ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಗಳಾಗಿ ಜಲಾಶಯ ನಿರ್ಮಾಣಕ್ಕೆ ಅನುದಾನ ನೀಡಿದ್ದರು. ಸರ್ಕಾರ ಬದಲಾವಣೆಯಾದ ನಂತರ ಜಲಾಶಯ ಕಾಮಗಾರಿ ಪ್ರಾರಂಭವಾಗದೆ ನೆನಗುದಿಗೆ ಬಿದ್ದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರು ಹಿಂದೆ ಬಾಕಿ ಉಳಿದಿರುವ ಜಲಾಶಯದ ಕಾಮಗಾರಿಯನ್ನು ಪೂರ್ಣಗೊಳಿಸಿದರೆ ಈ ಭಾಗಕ್ಕೆ ಅನುಕೂಲವಾಗಲಿದೆ ಎಂದರು.

ಮಾರ್ಟಳ್ಳಿ ಗ್ರಾಮ ಘಟಕದ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅರ್ಪುದ ರಾಜ್ ಮಾತನಾಡಿ, ಕೋಣನಕೆರೆ, ಒಡಕೆ ಹಳ್ಳ ಸಮೀಪ ಇರುವ ಕೆರೆಗಳನ್ನು ಅಭಿವೃದ್ಧಿಪಡಿಸಿದರೆ ನೂರಾರು ಎಕರೆಯಲ್ಲಿ ಮಳೆಯ ನೀರು ಸಂಗ್ರಹವಾಗಲಿದೆ. ಇದೀಗ ಹಾಲೇರಿ ಕೆರೆ ಹೂಳು ತೆಗೆಸಲಾಗಿದೆ. ಆದರೆ ಅರಣ್ಯ ಭಾಗದಿಂದ ನೀರು ಬರಲು ಯಾವುದೇ ಕ್ರಮ ವಹಿಸದೆ ಇರುವುದರಿಂದ ಇದು ಪ್ರಯೋಜನವಾಗುತ್ತಿಲ್ಲ, ಪಣಕೋಬೆ ಗ್ರಾಮದಲ್ಲಿ ಜಲಾಶಯ ನಿರ್ಮಾಣ ಮಾಡಿದರೆ ಉಡುತೊರೆ ಜಲಾಶಯ ವ್ಯಾಪ್ತಿಯ ರೈತರಂತೆ ನಮಗೂ ಅನುಕೂಲವಾಗುತಿತ್ತು. ಇನ್ನು ಮುಂದಾದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಿ, ಶಾಶ್ವತ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿದರು.

ಹಿರಿಯ ಮುಖಂಡ ಪೊನ್ನಾಚಿ ಮಹದೇವಸ್ವಾಮಿ ಮಾತನಾಡಿದರು.

ಸಭೆಯಲ್ಲಿ ರೈತ ಮುಖಂಡರಾದ ಲೂರ್ದು ಸ್ವಾಮಿ, ಮರಿಯಾ, ಜೋಸೆಫ್, ಡೇವಿಡ್, ಆರೋಗ್ಯಯಮ್ಮಾಳ್, ಮೇರಿ, ಪುಟ್ಟಸ್ವಾಮಿ ಆರೋಗ್ಯರಾಜ್, ಪೌಲ್ ಧರ್ಮರಾಜ್, ಸೆಲ್ವರಾಜ್, ಸೆಲ್ವಿ ಮೇರಿ, ಪಾತಿ ಮೇರಿ, ಪೀಟರ್ ಸೇರಿ ಇನ್ನಿತರರು ಹಾಜರಿದ್ದರು.

‘ರಾಮಾಪುರ ಹೋಬಳಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ₹490 ಕೋಟಿ ಬೃಹತ್ ಯೋಜನೆ ಘೋಷಣೆ ಮಾಡಿರುವುದು ಸ್ವಾಗತಾರ್ಹ. ಕ್ರಿಯಾಯೋಜನೆ ಮಾಡಿರುವ ಪೈಪ್ ಸಣ್ಣ ಪ್ರಮಾಣದಲ್ಲಿ ಇರುವುದರಿಂದ ಜಲಾಶಯ ಭರ್ತಿ ಮಾಡಲು ತಿಂಗಳಾನುಗಟ್ಟಲೆ ಸಮಯಾವಕಾಶ ಹಿಡಿಯುತ್ತದೆ. ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುವುದಿಲ್ಲ, ಕಡಿಮೆ ಅನುದಾನದಲ್ಲಿ ಚೆಕ್ ಡ್ಯಾಮ್ ಗಳ ಹೂಳು ತೆಗೆಸಿದರೆ ಮುಂದಿನ ಎರಡು ತಿಂಗಳಲ್ಲಿ ಉತ್ತಮ ಮಳೆಯಾದರೆ ಮಳೆಯ ನೀರು ಸಂಗ್ರಹಣೆ ಮಾಡಿ ವರ್ಷವೆಲ್ಲ ಬಳಕೆ ಮಾಡಬಹುದು. ಇಲ್ಲದಿದ್ದರೆ ಮುಂದಿನ ವರ್ಷದಲ್ಲಿಯೂ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಲಿದೆ.’

ನಿಶಾಂತ್, ಬಿಜೆಪಿ ಮುಖಂಡ